Advertisement

ಇಂದು ನಗರಾದ್ಯಂತ ವರಮಹಾಲಕ್ಷ್ಮೀ ಪೂಜೆ

08:35 AM Aug 04, 2017 | Team Udayavani |

ಮಹಾನಗರ: ನಗರಾದ್ಯಂತ ದೇವಸ್ಥಾನ, ಮನೆ, ಸಂಘ ಸಂಸ್ಥೆಗಳಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಪೂಜಾ ಸಂಭ್ರಮ. ವಿಶೇಷವಾಗಿ ವ್ರತಾಚರಣೆಗಾಗಿ ಹೆಣ್ಣು ಮಕ್ಕಳು ತಯಾರಾಗುತ್ತಿದ್ದರೆ, ಇತ್ತ ಪೂಜೆಗೆ ಬೇಕಾದ ಹೂ, ಹಣ್ಣುಗಳಿಗೂ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಸುಖ – ಸಮೃದ್ಧಿ ಸಂಕೇತವಾದ ವರಮಹಾಲಕ್ಷ್ಮೀ ಪೂಜೆ ಹೆಣ್ಣುಮಕ್ಕಳಿಗೆ ಬಲು ಪ್ರಿಯವಾದು. ಇಷ್ಟಾರ್ಥ ಸಿದ್ಧಿಗಾಗಿ, ಪತಿ, ಕುಟುಂಬದ ಒಳಿತಿಗಾಗಿ ಭಾರತೀಯ ಸಂಸ್ಕೃತಿಯ ಪ್ರಕಾರ ಹೆಂಗಳೆಯರು ಪ್ರತಿ ವರ್ಷ ವರಮಹಾಲಕ್ಷ್ಮೀ ವ್ರತ ಕೈಗೊಳ್ಳುತ್ತಾರೆ. ಇದಕ್ಕಾಗಿ ವಿವಿಧ ದೇವಸ್ಥಾನಗಳಲ್ಲಿ ಪೂಜೆ- ಪುನಸ್ಕಾರಗಳು ನಡೆದರೆ, ಹೆಣ್ಣು ಮಕ್ಕಳು ತಮ್ಮ ಮನೆಗಳಲ್ಲಿಯೇ ಲಕ್ಷ್ಮೀಯನ್ನು ಅಲಂಕರಿಸಿ ಪೂಜಾವಿಧಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದಕ್ಕಾಗಿ ವಾರದಿಂದಲೇ ವ್ರತ ಕೈಗೊಂಡು, ಆ ದಿನದಂದು ಲಕ್ಷ್ಮೀದೇವಿಯ ಆರಾಧನೆ ಮಾಡುತ್ತಾರೆ. ಈ ಬಾರಿಯೂ ಹೆಣ್ಣು ಮಕ್ಕಳು ಈ ಆರಾಧನೆಗಾಗಿ ವಿಶೇಷ ತಯಾರಿ ನಡೆಸಿದ್ದು, ಖರೀದಿ ಭರಾಟೆಯೂ ಜೋರಾಗಿದೆ. ಕಳೆದ ವಾರವಷ್ಟೇ ನಾಗರಪಂಚಮಿ ಹಿನ್ನೆಲೆಯಲ್ಲಿ ಮಲ್ಲಿಗೆ, ಹೂ, ಹಣ್ಣುಗಳ ಬೆಲೆ ಏರಿಕೆಯಾಗಿದ್ದರೆ, ಈ ಬಾರಿ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿರುವುದು ಗ್ರಾಹಕರಿಗೆ ನಿಟ್ಟುಸಿರು ತಂದಿದೆ.

Advertisement

ಮಲ್ಲಿಗೆ ಚೆಂಡಿಗೆ 90 ರೂ.ಗಳಿಂದ 100 ರೂ., ಭಟ್ಕಳ ಮಲ್ಲಿಗೆ 70ರಿಂದ 80 ರೂ.ಗಳ ತನಕ ಇದೆ. ಕಳೆದ ವಾರ ಮಲ್ಲಿಗೆಗೆ 250 ರೂ.ಗಳ ತನಕವೂ ದರ ಏರಿಕೆಯಾಗಿತ್ತು. ಸೇವಂತಿಗೆ ಮಾಲೆಗೆ 150 ರೂ., ತುಳಸಿ 30ರಿಂದ 50 ರೂ., ಹಿಂಗಾರ 200 ರೂ.ಗಳವರೆಗೆ ಮಾರಾಟವಾಗುತ್ತಿದೆ. ಇನ್ನು ಪೂಜೆಗೆ ಅತಿ ಅಗತ್ಯವಾದ ಹಣ್ಣುಗಳ ಬೆಲೆಯಲ್ಲಿಯೂ ಹೆಚ್ಚೇನೂ ಏರಿಕೆಯಾಗಿಲ್ಲ. ಕದಳಿ ಹಣ್ಣಿಗೆ ಕೆ.ಜಿ.ಗೆ 90ರಿಂದ 100 ರೂ. ತನಕ ಇದೆ. ಕಳೆದೆರಡು ದಿನಗಳಿಂದ ಸುಮಾರು 5 ರೂ.ಗಳಷ್ಟು ವ್ಯತ್ಯಾಸ ಆಗಿದ್ದು, ಹೆಚ್ಚೇನೂ ಏರಿಕೆಯಾಗಿಲ್ಲ. ಆ್ಯಪಲ್‌ ವಾಷಿಂಗ್ಟನ್‌ 200 ರೂ., ಆಪಲ್‌ ಇಂಡಿಯನ್‌ 160 ರೂ., ದ್ರಾಕ್ಷಿ 150 ರೂ., ಪೇರಳೆ 80 ರೂ., ಮುಸುಂಬಿ 60 ರೂ., ಕಿತ್ತಳೆ 100 ರೂ.ಗಳಿಗೆ ಮಾರಾಟವಾಗುತ್ತಿದ್ದು, ಬೆಲೆ ಸ್ಥಿರವಾಗಿದೆ.

ಅಲ್ಲಲ್ಲಿ ಸಂಭ್ರಮಕ್ಕೆ ಸಿದ್ಧತೆ
ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಮಣ್ಣಗುಡ್ಡ ಹರಿದಾಸ ಲೇನಿನಲ್ಲಿರುವ ಶ್ರೀ ನವದುರ್ಗಾ ಮಹಾಗಣಪತಿ ದೇವಸ್ಥಾನ, ಕೊಡಿಯಾಲ್‌ಬೈಲ್‌ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ, ಉರ್ವ ಮಾರಿಯಮ್ಮ ದೇವಸ್ಥಾನ, ಹಳೆಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನ, ಮಂದಾರಬೈಲು ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನ ಸಹಿತ ವಿವಿಧ ದೇವಸ್ಥಾನ, ದೇವಿ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮೀ ಪೂಜೆ ನಡೆಯಲಿದೆ.
 
ಅಲ್ಲದೇ ವರಮಹಾಲಕ್ಷ್ಮೀ ವ್ರತಾಚರಣೆಗಾಗಿ ವಿವಿಧ ಸಂಘಸಂಸ್ಥೆಗಳು, ಸಂಘಟನೆಗಳು ಕೂಡ ಸಿದ್ಧತೆ ನಡೆಸುತ್ತಿವೆ. ಶ್ರೀ ರಾಮಸೇನೆಯ ಮಹಿಳಾ ಘಟಕವಾದ ಶ್ರೀ ದುರ್ಗಾ ಸೇನೆ, ಕನ್ನಡ ಮೊಲಿ ಸಮಾಜ ಸುಧಾರಕ ಸಂಘದ ಯುವಜನ ಸಮಿತಿ ಹಾಗೂ ಮಹಿಳಾ ವೇದಿಕೆ, ಕೊಟ್ಟಾರ ಶ್ರೀಯಾನ್‌ ಮಹಲ್‌ನಲ್ಲಿರುವ ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರ, ಮಂದಾರಬೈಲು ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ಮಹಿಳಾ ವೇದಿಕೆ ಸಹಿತ ವಿವಿಧ ಸಂಘಟನೆಗಳು ಕಾರ್ಯಕ್ರಮ ಹಮ್ಮಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next