ನಮಗೆ ಅಷ್ಟೋ ಇಷ್ಟೋ ಬುದ್ದಿ ತಿಳಿಯುವ ಕಾಲದಿಂದ ಅಮ್ಮನಿಗೆ ಅವಳ ತವರು ಮನೆಯ ನೆನಪಾಗಿ ಇದ್ದಿದ್ದು ಬೆರಳಿನಲ್ಲಿ ಇದ್ದ ಒಂದು ವಂಕಿ ಉಂಗುರ ಮಾತ್ರ. ಅಮ್ಮ ಬೆರಳಿನ ಉಂಗುರ ನೀವುತ್ತಾ ಕಣ್ಣು ತುಂಬಿ ಕೊಂಡಿದ್ದಾಳೆಂದರೆ, ತನ್ನ ಪಾಲಿಗೆ ಇದ್ದೂ ಇಲ್ಲದ, ತನ್ನ ಕಡೆಯ ಯಾರನ್ನೋ ತವರನ್ನೋ ನೆನಪು ಮಾಡಿ ಕೊಂಡಿದ್ದಾಳೆಂದೇ ಅರ್ಥ.
ನಲವತ್ತು ವರ್ಷದಲ್ಲಿ ಅಮ್ಮ ಯಾವತ್ತೂ ವಂಕಿ ಉಂಗುರ ತೆಗೆದಿಟ್ಟಿದ್ದು, ಅಳಿಸಿದ್ದು, ಬದಲಿಸಿದ್ದು ನೋಡಿಲ್ಲ. ಅಮ್ಮ ಕೊನೆಯ ಸಲ ಕಣ್ಣು ತುಂಬಿಕೊಂಡಿದ್ದು ಕೂಡ ನೆನಪಿದೆ. ಅಸ್ಪತ್ರೆಯ ಮಂಚದ ಮೇಲೆ ಮಲಗಿದ ಅಮ್ಮ, ನರ್ಸ್ ಬೆರಳಿನ ಉಂಗುರ ತೆಗೆಯುವಾಗ, ಅಮ್ಮ “ತೆಗೆಯಲೇ ಬೇಕಾ’ ಎಂಬಂತೆ ನೋಡಿ ಕಣ್ಣು ತುಂಬಿ ಕೊಂಡಿದ್ದಳು. ಅಮೇಲೆ ಉಂಗುರ ಮಾತ್ರ ಉಳಿಯಿತು.
ಚಿಕ್ಕಂದಿನಲ್ಲಿ ಕರೆಂಟಿಲ್ಲದ ಕತ್ತಲೆ ಕೋಣೆಯಲ್ಲಿ ಅಮ್ಮ ದೇವರಿಗೆ ದೀಪ ಹಚ್ಚುವಾಗ ಸಣ್ಣ ಬೆಳಕಿನಲ್ಲಿ ಪಕ್ಕನೆ ಹೊಳೆಯವ ಉಂಗುರದ ಚಿತ್ರ, ಅಮ್ಮ ಮೆಟ್ಟು ಗತ್ತಿಯ ಮೇಲೆ ಕುಳಿತು ಹಲಸಿನ ಕಾಯಿ ಬಿಡಿಸುವಾಗ ಉಂಗುರಕ್ಕೆ ಸುತ್ತಿದ ಮೇಣ ಬಿಡಿಸುವ ಅಮ್ಮನ ಚಿತ್ರ, ಬಕೇಟಿನಲ್ಲಿ ಬಟ್ಟೆ ನೆನೆಸುವಾಗ ಸರ್ಫಿನ ನೊರೆ ತೆಗೆದಂತೆ ನಿಧಾನಕ್ಕೆ ಬೆರಳಿನಲ್ಲಿ ಪಳ ಪಳಿಸುತಿದ್ದ ಉಂಗುರದ ಚಿತ್ರ ಮಾತ್ರ ಅಮ್ಮ ಹೋದ ಮೇಲೂ ಹಾಗೆ ಉಳಿದು ಕೊಂಡು ಬಿಟ್ಟಿದೆ.
ನಮ್ಮಲ್ಲಿ ವಂಕಿ ಉಂಗುರ ಸಂಪ್ರದಾಯ, ಮದುವೆಯಾದವರು ಮಾತ್ರ ಹಾಕುವಂತದ್ದು. ಹೆಂಡತಿಯ ಬೆರಳಲ್ಲೂ ಅಂತದ್ದೇ ಇದೆ. ನಮ್ಮ ಏಕಾಂತದ ಗಳಿಗೆಯಲ್ಲಿ ಅವಳ ಬೆರಳು ಹಿಡಿದು, ಉಂಗುರ ಮುಟ್ಟಿ, ತಿರುವಿ, ಅಮ್ಮನ ಉಂಗುರದ ಕಥೆ ನೆನಪು ಮಾಡಿಕೊಳ್ಳುವುದು ಒಂದು ಗೀಳು.
ತಮಾಷೆ ಹುಟ್ಟುಗುಣವಾದರೆ, ಇಂತಹ ಭಾವುಕತೆಗಳೇ ದೌರ್ಬಲ್ಯ. ಸಾಕು, ಅತೀ ಭಾವುಕತೆ ಒಳ್ಳೆಯದಲ್ಲ. ನಮ್ಮಲ್ಲೊಬ್ಬರು ಹೇಳುವ ಹಾಗೆ ಭಾವುಕತೆ ಎಲ್ಲಾ ಒಳ್ಳೆದಲ್ಲ. ಬೋಳು ಮರದ ಹಾಗೆ ಇಬೇìಕು. ಯಾವ ಗಾಳಿ ಮಳೆಯೂ ಮರವನ್ನ ಅಲ್ಲಾಡಿಸಲಾರದು. ನಿಜ, ನಿರ್ಮೋಹಿಯಾಗ ಬೇಕು. ಗಾಳಿ ಮಳೆಗೆ ಅಲ್ಲಾಡದ ಬೋಳುಮರದ ಹಾಗೆ. ಇದು ಎಲೆಯುದುರುವ ಕಾಲ.
ಆಶಿಷ್ ಮಾರಾಳಿ
(ಅಕ್ಟೋಬರ್ 19 ರಂದು ಫೇಸ್‌ಬುಕ್‌ನಲ್ಲಿ ಪ್ರಕಟವಾದ ಬರಹ)