Advertisement

ವನಿತಾ  ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ ಫೈನಲ್‌ ಪ್ರವೇಶ

07:54 AM Jul 19, 2017 | |

ಬ್ರಿಸ್ಟಲ್‌: ತೀವ್ರ ಪೈಪೋಟಿಯಿಂದ ಕೂಡಿದ ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಮೊದಲ ಸೆಮಿ ಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ 2 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಧಾವಿಸಿದೆ.

Advertisement

ಮಂಗಳವಾರ ಬ್ರಿಸ್ಟಲ್‌ನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 218 ರನ್‌ ಗಳಿಸಿದರೆ, ಇಂಗ್ಲೆಂಡ್‌ 49.4 ಓವರ್‌ಗಳಲ್ಲಿ 8 ವಿಕೆಟಿಗೆ 221 ರನ್‌ ಬಾರಿಸಿ ಜಯ ಸಾಧಿಸಿತು. ದ್ವಿತೀಯ ಸೆಮಿಫೈನಲ್‌ ಪಂದ್ಯ ಭಾರತ ಮತ್ತು ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ನಡುವೆ ಗುರುವಾರ ಡರ್ಬಿಯಲ್ಲಿ ನಡೆಯಲಿದೆ.

ಚೇಸಿಂಗಿಗೆ ಇಳಿದ ಇಂಗ್ಲೆಂಡ್‌ ಸಾಮಾನ್ಯ ಆರಂಭ ಪಡೆಯಿತು. ಲಾರೆನ್‌ ವಿನ್‌ಫೀಲ್ಡ್‌ (20) ಮತ್ತು ಟ್ಯಾಮಿ ಬೇಮಾಂಟ್‌ (15) ಮೊದಲ ವಿಕೆಟಿಗೆ 42 ರನ್‌ ಸೇರಿಸಿ ದರು. ತಂಡದ ಸ್ಕೋರ್‌ 62 ರನ್‌ ಆಗುವಷ್ಟರಲ್ಲಿ ಇಬ್ಬರೂ ಪೆವಿಲಿಯನ್‌ ಸೇರಿಕೊಂಡರು.

3ನೇ ವಿಕೆಟಿಗೆ ಜತೆಗೂಡಿದ ಕೀಪರ್‌ ಸಾರಾ ಟಯ್ಲರ್‌ (54) ಮತ್ತು ನಾಯಕಿ ಹೀತರ್‌ ನೈಟ್‌ (30) 68 ರನ್‌ ಒಟ್ಟುಗೂಡಿಸಿದಾಗ ಇಂಗ್ಲೆಂಡ್‌ ಸುಲಭದಲ್ಲಿ ಗೆಲ್ಲುವ ಸಾಧ್ಯತೆ ಇತ್ತು. ಆದರೆ 6 ರನ್‌ ಅಂತರದಲ್ಲಿ ಇವರಿಬ್ಬರ ಸಹಿತ ನತಾಲಿ ಶಿವರ್‌ (3) ಕೂಡ ಪೆವಿಲಿಯನ್‌ ಸೇರಿಕೊಂಡಾಗ ಆಫ್ರಿಕಾ ಕೈ ಮೇಲಾಯಿತು. ಕೊನೆಯಲ್ಲಿ ಫ್ರಾನ್‌ ವಿಲ್ಸನ್‌ (30) ಮತ್ತು ಜೆನ್ನಿ ಗನ್‌ (ಔಟಾಗದೆ 27) ಇಂಗ್ಲೆಂಡಿನ ರಕ್ಷಣೆಗೆ ನಿಂತರು.

ವೋಲ್ವಾರ್ಟ್‌-ಡು ಪ್ರೀಝ್ ಫಿಫ್ಟಿ
ಇಂಗ್ಲೆಂಡ್‌ ದಾಳಿಯನ್ನು ದಿಟ್ಟ ರೀತಿಯಲ್ಲಿ ಎದುರಿಸಿ ನಿಂತ ದಕ್ಷಿಣ ಆಫ್ರಿಕಾದ ಇಬ್ಬರು ಆಟಗಾರ್ತಿಯರೆಂದರೆ ಓಪನರ್‌ ಲಾರಾ ವೋಲ್ವಾರ್ಟ್‌ ಮತ್ತು ಮಧ್ಯಮ ಕ್ರಮಾಂಕದ ಮ್ಯಾಗ್ನನ್‌ ಡು ಪ್ರೀಝ್. ಇವರಿಬ್ಬರೂ ಅರ್ಧ ಶತಕ ಬಾರಿಸಿ ಮಿಂಚಿದರು. ಡು ಪ್ರೀಝ್ ಕೊನೆಯ ತನಕ ಇನ್ನಿಂಗ್ಸ್‌ ಆಧರಿಸಿ 76 ರನ್‌ ಬಾರಿಸಿ ಔಟಾಗದೆ ಉಳಿದರು. 95 ಎಸೆತಗಳ ಈ ಆಟದಲ್ಲಿ 5 ಬೌಂಡರಿ ಒಳಗೊಂಡಿತ್ತು.

Advertisement

ವೋಲ್ವಾರ್ಟ್‌ ಭರ್ತಿ 100 ಎಸೆತ ಎದುರಿಸಿ 66 ರನ್‌ ಹೊಡೆದರು. ಇದರಲ್ಲಿ 8 ಬೌಂಡರಿ ಇತ್ತು. ವೋಲ್ವಾರ್ಟ್‌ -ಡು ಪ್ರೀಝ್ ಅವರ 3ನೇ ವಿಕೆಟ್‌ ಜತೆಯಾಟದಲ್ಲಿ 77 ರನ್‌ ಒಟ್ಟುಗೂಡಿತು. ಕೊನೆಯಲ್ಲಿ ಸುನೆ ಲೂಸ್‌ ನೆರವು ಪಡೆದ ಡು ಪ್ರೀಝ್ ಮುರಿಯದ 7ನೇ ವಿಕೆಟಿಗೆ 48 ರನ್‌ ಪೇರಿಸಿದರು. ಲೂಸ್‌ 25 ಎಸೆತಗಳಿಂದ 21 ರನ್‌ ಮಾಡಿ ಔಟಾಗದೆ ಉಳಿದರು.

ದಕ್ಷಿಣ ಆಫ್ರಿಕಾ ಓಪನರ್‌ ಲಿಜೆಲ್‌ ಲೀ (7) ಅವರನ್ನು ಬೇಗನೇ ಕಳೆದುಕೊಂಡಿತು. ಕೀಪರ್‌ ತಿೃಷಾ ಚೆಟ್ಟಿ 15 ರನ್‌ ಮಾಡಿ ವಾಪಸಾದರು. ಮರಿಜಾನ್‌ ಕಾಪ್‌ ಮತ್ತು ಕ್ಲೋ ಟ್ರಯಾನ್‌ ಬಂದಂತೆಯೇ ವಾಪಸಾದರು. ಇಬ್ಬರ ಗಳಿಕೆ ತಲಾ ಒಂದು ರನ್‌ ಮಾತ್ರ. ನಾಯಕಿ ಡೇನ್‌ ವಾನ್‌ ನೀಕರ್ಕ್‌ 39 ಎಸೆತಗಳಿಂದ 27 ರನ್‌ ಸಿಡಿಸಿ (3 ಬೌಂಡರಿ, 1 ಸಿಕ್ಸರ್‌) ಡು ಪ್ರೀಝ್ಗೆ ಉತ್ತಮ ಬೆಂಬಲವಿತ್ತರು. ಇಂಗ್ಲೆಂಡ್‌ ಬೌಲಿಂಗ್‌ ಸರದಿಯಲ್ಲಿ ಯಾರೂ ಒಂದಕ್ಕಿಂತ ಹೆಚ್ಚು ವಿಕೆಟ್‌ ಕೀಳಲಿಲ್ಲ. 

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ-50 ಓವರ್‌ಗಳಲ್ಲಿ 6 ವಿಕೆಟಿಗೆ 218 (ಡು ಪ್ರೀಝ್ ಔಟಾಗದೆ 76, ವೋಲ್ವಾರ್ಟ್‌ 66, ನೀಕರ್ಕ್‌ 27, ಲೂಸ್‌ ಔಟಾಗದೆ 21, ನೈಟ್‌ 8ಕ್ಕೆ 1, ಶಿವರ್‌ 25ಕ್ಕೆ 1, ಶ್ರಬೊಲ್‌ 33ಕ್ಕೆ 1, ಗನ್‌ 35ಕ್ಕೆ 1).

ಇಂಗ್ಲೆಂಡ್‌-49.4 ಓವರ್‌ಗಳಲ್ಲಿ 8 ವಿಕೆಟಿಗೆ 221 (ಟಯ್ಲರ್‌ 54, ನೈಟ್‌ 30, ವಿಲ್ಸನ್‌ 30, ಗನ್‌ ಔಟಾಗದೆ 27, ಖಾಕ 28ಕ್ಕೆ 2, ಲೂಸ್‌ 24ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next