Advertisement

Vandse Village: ಬಗೆಹರಿಯದ ವಂಡೆ ಗ್ರಾಮಸ್ಥರ ಉಪ್ಪು ನೀರಿನ ಸಮಸ್ಯೆ

06:18 PM Sep 14, 2023 | Team Udayavani |

ವಂಡ್ಸೆ: ದೇವಲ್ಕುಂದ, ವಂಡ್ಸೆ, ಕರ್ಕುಂಜೆ, ಚಿತ್ತೂರು ಗ್ರಾಮನಿವಾಸಿಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಆತ್ರಾಡಿ ಬಳಿ ನಿರ್ಮಿಸಲಾಗಿರುವ ಬಹುಕೋಟಿ ರೂ. ವೆಚ್ಚದ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದರೂ, ಕ್ರಸ್ಟ್‌ಗೇಟ್‌ ಅಳವಡಿಕೆ ಕಾಮಗಾರಿ ಯಲ್ಲಿನ ಲೋಪ ದೋಷದಿಂದ ಆ ಭಾಗದ ನಿವಾಸಿಗಳಿಗೆ ಎದುರಾದ ಉಪ್ಪು ನೀರಿನ ಸಮಸ್ಯೆಗೊಂದು ಶಾಶ್ವತ ಪರಿಹಾರ ದೊರಕದೇ ಗ್ರಾಮ ನಿವಾಸಿಗಳಿಗೆ ಜ್ವಲಂತ ಸಮಸ್ಯೆಯಾಗಿ ಮೂಡಿಬಂದಿದೆ.

Advertisement

ಸಣ್ಣ ನೀರಾವರಿ ಇಲಾಖೆಯಿಂದ 7.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಿಂಡಿ ಅಣೆಕಟ್ಟು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ವಂಡ್ಸೆ ಪರಿಸರದಲ್ಲಿ ಚಕ್ರಾ ನದಿಯ ಉಪ್ಪು ನೀರಿನಿಂದಾಗಿ ಬಾವಿಯ‌ಲ್ಲಿ ಉಪ್ಪು ನೀರು ಬಂದು ಸೇರುವುದರಿಂದ ಅದನ್ನು ಬಳಸಲು ಎದುರಾದ ಸಮಸ್ಯೆಯಿಂದ ಅಲ್ಲಿನ ಅನೇಕ ನಿವಾಸಿಗಳು ಬೇಸಗೆಯಲ್ಲಿ ಕುಡಿಯುವ ನೀರಿಗಾಗಿ ಇತರೆಡೆ ವಲಸೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ವಂಡ್ಸೆ ಗ್ರಾ.ಪಂ. ಅದಕ್ಕೊಂದು ಶಾಶ್ವತ ಪರಿಹಾರ ಒದಗಿಸಲು ಶಾಸಕರು, ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಿತ್ತು.

ಹುಸಿಯಾದ ಗ್ರಾಮಸ್ಥರ ನಿರೀಕ್ಷೆ ಬಹುಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟಿನಿಂದ ಕಳೆದ ಹಲವು ವರ್ಷಗಳಿಂದ ಅನುಭವಿಸುತ್ತಿರುವ ಉಪ್ಪು ನೀರಿನ ಜ್ವಲಂತ ಸಮಸ್ಯೆಗೊಂದು ಶಾಶ್ವತ ಪರಿಹಾರ ದೊರಕೀತೆಂಬ ಗ್ರಾಮಸ್ಥರ ನಿರೀಕ್ಷೆ ಹುಸಿಯಾಗಿದೆ.

ಕ್ರಸ್ಟ್‌ ಗೇಟ್‌ ಅಳವಡಿಕೆಯಲ್ಲಿನ ಲೋಪ ಆರಂಭದ ಹಂತದಲ್ಲಿ ಎಡವಿದರೆನ್ನಲಾದ ಆರೋಪ ಹೊತ್ತಿರುವ ಗುತ್ತಿಗೆದಾರರು ಕ್ರಸ್ಟ್‌ ಗೇಟ್‌ ಅಳವಡಿಕೆ ಪ್ರಕ್ರಿಯೆಯಲ್ಲಿ ಕೂಡ ತಾಂತ್ರಿಕ ದೋಷ ಕಂಡುಬಂದಿ ರುವುದು ಬಹುಕೋಟಿ ರೂ. ವೆಚ್ಚದ ಯೋಜನೆ ವಿಫಲವಾಯಿತೇ ?, ಹಣ ವ್ಯರ್ಥ ಪೋಲಾಯಿತೇ ಎಂಬ ಶಂಕೆಗೆ ಎಡೆಮಾಡಿದೆ.

ಉಪ್ಪು ನೀರಿನ ಸಮಸ್ಯೆಗೆ ಮುಕ್ತಿ ಇಲ್ಲವೇ? ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬಹುಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟು ಯೋಜನೆಯಿಂದ ಕೃಷಿ ಭೂಮಿಗೆ ಅನುಕೂಲವಾಗಬಹುದೆಂಬ ನಿರೀಕ್ಷೆ
ಹುಸಿಯಾಗಿದೆ. ಚಕ್ರಾ ನದಿಯ ಉಪ್ಪು ನೀರಿನ ಜ್ವಲಂತ ಸಮಸ್ಯೆ ಇನ್ನೂ ಹಾಗೇ ಉಳಿದಿರುವುದು ದುರಾದೃಷ್ಟಕರ ಎಂದು ವಂಡ್ಸೆ ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ.

Advertisement

ಮನವಿ ಸಲ್ಲಿಕೆ
ವಂಡ್ಸೆ ಪರಿಸರದ ಗ್ರಾಮಸ್ಥರಿಗೆ ಎದುರಾಗಿದ್ದ ಉಪ್ಪು ನೀರಿನ ಸಮಸ್ಯೆ ನಿಭಾಯಿಸುವಲ್ಲಿ ಚಕ್ರಾ ನದಿಗೆ ಕಿಂಡಿ ಅಣೆಕಟ್ಟು ಕಟ್ಟಿ ಗ್ರಾಮಸ್ಥರ ಬೇಡಿಕೆ ಈಡೇರಿಸುವಲ್ಲಿ ತಾಂತ್ರಿಕ ದೋಷ ಎದುರಾಗಿರುವ ಬಗ್ಗೆ ಸಂಶಯ ಎದುರಾಗಿದೆ. ಆ ಬಗ್ಗೆ ಗುತ್ತಿಗೆದಾರರು, ಸಣ್ಣ ನೀರಾವರಿ ಯೋಜನೆಯ ಎಂಜಿನಿಯರ್‌, ಜಿ.ಪಂ. ಸಿ.ಇ.ಒ. ಅವರಿಗೆ ಪತ್ರ ಬರೆದು ಕಳೆದ 2 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಉಪ್ಪು ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಲಾಗಿತ್ತು. ಇಲಾಖೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಉದಯಕುಮಾರ್‌ ಶೆಟ್ಟಿ, ವಂಡ್ಸೆ ಗ್ರಾ.ಪಂ. ಸದಸ್ಯ

ಮರು ಪರಿಶೀಲನೆ
ಮಳೆಯ ಕಾರಣ ಗೇಟ್‌ ತೆರೆಯಲಾಗಿದೆ. ಗೇಟ್‌ ಇಳಿಸುವ ಮೊದಲು ಮರು ಪರಿಶೀಲನೆ ನಡೆಸಲಾಗುವುದು. ಲೋಪವಾಗದಂತೆ ನಿಗಾ ವಹಿಸುತ್ತೇವೆ.
– ಅರುಣ್‌ ಭಂಡಾರಿ, ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ ಉಡುಪಿ

*ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next