Advertisement

Vandhe Bharath ಸ್ಲೀಪರ್‌ ಕೋಚ್‌ ರೈಲು 3 ತಿಂಗಳಲ್ಲಿ ಸಿದ್ಧ: ಸಚಿವ ಅಶ್ವಿ‌ನ್‌ ವೈಷ್ಣವ್‌

01:48 AM Sep 02, 2024 | Team Udayavani |

ಬೆಂಗಳೂರು: ರಾತ್ರಿ ವೇಳೆ ಸಂಚರಿಸಲಿರುವ ಬಹುನಿರೀಕ್ಷಿತ ದೇಶದ ಮೊದಲ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲು ಮುಂದಿನ ಮೂರು ತಿಂಗಳಲ್ಲಿ ಪ್ರಯಾಣಿಕರ ಸೇವೆಗೆ ತೆರೆದುಕೊಳ್ಳಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿ‌ನ್‌ ವೈಷ್ಣವ್‌ ತಿಳಿಸಿದರು.

Advertisement

ರವಿವಾರ ಭಾರತ್‌ ಅರ್ಥ್ ಮೂವರ್ಸ್‌ ಲಿಮಿಟೆಡ್‌ (ಬಿಇಎಂಎಲ್‌) ಆವರಣದಲ್ಲಿ ವಂದೇ ಭಾರತ್‌ ಸ್ಲೀಪರ್‌ ರೈಲಿನ 2 ಮೂಲ ಮಾದರಿ (ಪ್ರೊಟೊಟೈಪ್‌) ರೈಲುಗಳನ್ನು ಲೋಕಾರ್ಪಣೆಗೊಳಿಸಿ, ರೈಲನ್ನು ವಿನ್ಯಾಸಗೊಳಿಸಿದ ಎಂಜಿನಿಯರ್‌ಗಳ ಜತೆಗೆ ಸಮಾಲೋಚನೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿದರು.

ಟ್ರ್ಯಾಕ್‌ ಪರೀಕ್ಷೆ ಪ್ರಾರಂಭವಾಗುವ ಮುನ್ನ ಸುಮಾರು 10 ದಿನಗಳ ಕಾಲ ತಾಂತ್ರಿಕ ಪರೀಕ್ಷೆ ಸೇರಿದಂತೆ ವಿವಿಧ ಬಗೆಯ ಪ್ರಾಯೋಗಿಕ ತಪಾಸಣೆ ನಡೆಯಲಿದೆ. ಪ್ರೊಟೊಟೈಪ್‌ ರೈಲುಗಳ ತಪಾಸಣೆ ಸಂಪೂರ್ಣವಾದ ಬಳಿಕ ಒಂದೂವರೆ ವರ್ಷದಲ್ಲಿ ಸ್ಲೀಪರ್‌ ರೈಲುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಲಾಗುತ್ತದೆ. ಬಳಿಕ ತಿಂಗಳಿಗೆ ಎರಡರಿಂದ ಮೂರು ರೈಲುಗಳು ಸಂಚಾರಕ್ಕೆ ಸಿದ್ಧವಾಗಲಿವೆ ಎಂದು ಮಾಹಿತಿ ನೀಡಿದರು.

ವಂದೇ ಭಾರತ್‌ ರೈಲಿನ ವಿನ್ಯಾಸವನ್ನು ಮೇಲ್ದರ್ಜೆಗೇರಿಸುವ ಕೆಲಸ ನಿರಂತರವಾಗಿದೆ. ಇದೇ ರೀತಿ ವಂದೇ ಭಾರತ್‌ ಮೆಟ್ರೋ, ವಂದೇ ಭಾರತ್‌ ಸ್ಲೀಪರ್‌ ಹಾಗೂ ಅಮೃತ್‌ ಭಾರತ್‌ ರೈಲುಗಳನ್ನೂ ನಾವಿನ್ಯವಾಗಿ ರೂಪಿಸಲಾಗುತ್ತಿದೆ. ರಾತ್ರಿ ವೇಳೆಯ ದೂರ ಪ್ರಯಾಣಕ್ಕೆ ಅಂದರೆ 800-1200 ಕಿ.ಮೀ. ಕ್ರಮಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚು ಕಡಿಮೆ ಸರಿಸಮವಾಗಿ ಪ್ರಯಾಣಿಕ ದರ ಇರಲಿದೆ ಎಂದು ಹೇಳಿದರು.

ಆಹಾರ ಪೂರೈಕೆ: ಶೇ. 0.1 ದೂರು
ವಂದೇ ಭಾರತ್‌ ರೈಲಿನಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಭಾರತೀಯ ರೈಲ್ವೇ ಪ್ರತಿದಿನ 13 ಲಕ್ಷ ಊಟಗಳನ್ನು ಪೂರೈಸುತ್ತಿದೆ. ಈ ಸಂಬಂಧ ಶೇ. 0.1ಕ್ಕಿಂತ ಕಡಿಮೆ ದೂರು ದಾಖಲಾಗುತ್ತಿವೆ. ಆದರೂ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಗುತ್ತಿಗೆ ಅಡುಗೆದಾರರು, ಪೂರೈಕೆದಾರರ ಮೇಲೆ ಕ್ರಮ ವಹಿಸಲಾಗಿದೆ ಎಂದರು.

Advertisement

ಇದೇ ವೇಳೆ ಸಚಿವರು ಬಿಇಎಂಎಲ್‌ ನೂತನ ಭಾರತ್‌ ನಿರ್ಮಾಣ ಘಟಕ ಹಾಗೂ 9.2 ಎಕರೆಯಲ್ಲಿ ನೂತನ ಹ್ಯಾಂಗರ್‌ ನಿರ್ಮಾಣಕ್ಕೆ ಚಾಲನೆ ನೀಡಿದರು. ಇಲ್ಲಿ ಬ್ರಾಡ್‌ ಗೈಜ್‌, ಸ್ಟಾಂಡರ್ಡ್‌ ಗೈಜ್‌ ರೋಲಿಂಗ್‌ ಸ್ಟಾಕ್‌ ನಿರ್ಮಾಣ ಆಗಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೇ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ, ರೈಲ್ವೇ ಬೋರ್ಡ್‌ ಸಿಇಒ ಮತ್ತು ಅಧ್ಯಕ್ಷ ಸತೀಶ್‌ ಕುಮಾರ್‌, ಬಿಇಎಂಎಲ್‌ ಅಧ್ಯಕ್ಷ ಹಾಗೂ ಆಡಳಿತಾಧಿಕಾರಿ ಶಾಂತನು ರಾಯ್‌ ಸೇರಿದಂತೆ ರೈಲ್ವೇ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next