Advertisement
ಹಲವು ಜಿಲ್ಲೆಗಳಲ್ಲಿ ಸ್ವಾಗತ ಪಡೆದ ಬಳಿಕ ಕಾಸರಗೋಡಿಗೆ ತಲುಪಿದ ರೈಲಿಗೆ ಬಿಜೆಪಿ, ಮುಸ್ಲಿಂ ಲೀಗ್, ಇತರ ರಾಜಕೀಯ ಪಕ್ಷಗಳು ಕಾರ್ಯಕರ್ತರು, ರೈಲ್ವೇ ಪ್ಯಾಸೆಂಜರ್ ಅಸೋಸಿಯೇಶನ್, ವಿವಿಧ ಸಂಘಟನ ಪದಾಧಿಕಾರಿಗಳು, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಸಮಿತಿಯ ನೇತಾರರು, ಕಾರ್ಯಕರ್ತರು ವಾದ್ಯಘೋಷಗಳೊಂದಿಗೆ ಹೂಗಳನ್ನು ಎರಚಿ, ಹೂಹಾರ ಹಾಕಿ, ಸಿಹಿ ವಿತರಿಸಿ ಅದ್ದೂರಿಯಾದ ಸ್ವಾಗತ ನೀಡಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎ.ಕೆ.ಎಂ. ಅಶ್ರಫ್, ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ. ಶ್ರೀಕಾಂತ್, ಕಾಸರಗೋಡು ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ಯುವ ಮೋರ್ಚಾ ಜಿಲ್ಲಾ ನೇತಾರ ಧನಂಜಯ ಮಧೂರು ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತ ಕೋರಲು ಆಗಮಿಸಿದ ಎಲ್ಲರಿಗೂ ಮಧೂರು ದೇವಸ್ಥಾನದ ಅಪ್ಪ ಪ್ರಸಾದವನ್ನು ವಿತರಿಸಲಾಯಿತು. ಬೆಳಗ್ಗೆ 5.20ಕ್ಕೆ ತಿರುವನಂತಪುರದಿಂದ ಹೊರಟ ರೈಲುಗಾಡಿ 6.53 ಗಂಟೆಗಳಲ್ಲಿ ಕಣ್ಣೂರಿಗೆ ತಲುಪಿತ್ತು. 3 ನಿಮಿಷಗಳ ಕಾಲ ಕಣ್ಣೂರಿನಲ್ಲಿ ನಿಲುಗಡೆಗೊಳಿಸಿದ ಬಳಿಕ ಕಾಸರಗೋಡಿಗೆ ಪ್ರಯಾಣ ಆರಂಭಿಸಿತು. ತಿರುವನಂತಪುರದಿಂದ ಕಾಸರಗೋಡಿಗೆ ಒಟ್ಟು 7.48 ಗಂಟೆಗಳಲ್ಲಿ ತಲುಪಿದೆ. ಮಧ್ಯಾಹ್ನ 2.20ಕ್ಕೆ ಕಾಸರಗೋಡಿನಿಂದ ತಿರುವನಂತಪುರಕ್ಕೆ ವಾಪಸಾಯಿತು. ಮೂರು ದಿನಗಳ ಹಿಂದೆ ಕಣ್ಣೂರು ವರೆಗೆ ಮೊದಲನೆಯ ಪರೀಕ್ಷಾರ್ಥ ಓಡಾಟ ನಡೆಸಿತ್ತು. ಇಂದು 6 ಗಂಟೆ 53 ನಿಮಿಷ ತಗಲಿದರೆ ಅಂದು 7 ಗಂಟೆ 10 ನಿಮಿಷ ತಗಲಿತ್ತು.