ಕಾಸರಗೋಡು: ಕೇಂದ್ರ ರೈಲ್ವೇ ಇಲಾಖೆ ಕೇರಳಕ್ಕೆ ಕೊಡುಗೆಯಾಗಿ ನೀಡಿದ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಾಡಿ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಕಾಸರಗೋಡಿನಿಂದ ತಿರುವನಂತಪುರಕ್ಕೆ ಪ್ರಾಯೋಗಿಕ ಸಂಚಾರ ನಡೆಸಿತು.
ಕಾಸರಗೋಡು ರೈಲ್ವೇ ಪೊಲೀಸರು, ರೈಲ್ವೇ ಭದ್ರತಾ ಪಡೆ ಮತ್ತು ರೈಲ್ವೇ ಇಲಾಖೆಯ ಅಧಿಕಾರಿಗಳು ಈ ರೈಲು ಗಾಡಿಗೆ ಸ್ವಾಗತ ನೀಡಿದರು.
ಸೆ. 21ರಂದು ರಾತ್ರಿ 11.42ಕ್ಕೆ ರೈಲು ಕಾಸರಗೋಡು ನಿಲ್ದಾಣ ತಲುಪಿತ್ತು. ಈ ರೈಲು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆ. 24ರಂದು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸುವರು. ಅದರ ಫ್ಲ್ಯಾಗ್ ಆಫ್ ಮಧ್ಯಾಹ್ನ 12.30ಕ್ಕೆ ಕಾಸರಗೋಡು ರೈಲು ನಿಲ್ದಾಣದಲ್ಲಿ ನಡೆಯಲಿದೆ.
ಈ ರೈಲು ಮಂಗಳವಾರದಿಂದ ಅಧಿಕೃತ ಸೇವೆ ಆರಂಭಿಸಲಿದೆ. ಕಾಸರಗೋಡಿನಿಂದ ಆಲಪ್ಪುಳ ದಾರಿಯಾಗಿ ಈ ಹೊಸ ರೈಲು ತಿರುವನಂತಪುರ ತನಕ ಸಾಗಲಿದೆ.
ಈ ರೈಲು ಗಾಡಿಗೆ ಪಯ್ಯನ್ನೂರು, ಕಣ್ಣೂರು, ತಲಶೆÏàರಿ, ಕಲ್ಲಿಕೋಟೆ, ತಿರೂರು, ಶೋರ್ನೂರು, ತೃಶೂರು, ಎರ್ನಾಕುಳಂ, ಆಲಪ್ಪುಳ, ಕಾಯಂಕುಳಂ ಮತ್ತು ಕೊಲ್ಲಂ ನಿಲ್ದಾಣಗಳಲ್ಲಿ ಸ್ವಾಗತ ನೀಡಲಾಗುವುದು.
ಪ್ರತಿದಿನ ಬೆಳಗ್ಗೆ 7ಕ್ಕೆ ಕಾಸರಗೋಡಿನಿಂದ ರೈಲು ಪ್ರಯಾಣ ಆರಂಭಿಸಲಿದ್ದು ಸಂಜೆ 3.05ಕ್ಕೆ ತಿರುವನಂತಪುರ ತಲುಪಲಿದೆ. ಸಂಜೆ 4.05ಕ್ಕೆ ತಿರುವನಂತಪುರದಿಂದ ಹೊರಟ ರೈಲುಗಾಡಿ ರಾತ್ರಿ 11.55 ಕ್ಕೆ ಕಾಸರಗೋಡು ತಲುಪಲಿದೆ.