ಹೊಸದಿಲ್ಲಿ: ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ಜುಲೈಯಲ್ಲಿ ನಡೆಯಲಿ ರುವಂತೆಯೇ ಪ್ರತೀ ಸಂಸದನ ಮತ ಮೌಲ್ಯ 708ರಿಂದ 700ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಅದಕ್ಕೆ ಕಾರಣ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಇಲ್ಲದೇ ಇರುವುದು.
ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾರ್ಪಡಿಸುವ ಮೊದಲು ಅಲ್ಲಿ 83 ವಿಧಾನಸಭಾ ಕ್ಷೇತ್ರಗಳು ಇದ್ದವು. ಸದ್ಯ ಅಲ್ಲಿ ವಿಧಾನಸಭೆ ವಿಸರ್ಜಿಸಲಾಗಿದೆ.
ಹೀಗಾಗಿ ಸಂಸದರ ಮತದ ಮೌಲ್ಯ ತಗ್ಗಲಿದೆ. ಹೀಗಿದ್ದರೂ ಕೂಡ ಅಲ್ಲಿನ ಲೋಕಸಭಾ ಸದಸ್ಯರಿಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಾಕಲು ಅವಕಾಶ ಇದೆ.
ಈ ಹಿಂದೆ 1974ರಲ್ಲಿ ಆಗ 182 ಸದಸ್ಯ ಬಲ ಇದ್ದ ಗುಜರಾತ್ ವಿಧಾನಸಭೆ ವಿಸರ್ಜಿಸಲಾಗಿತ್ತು. ಹೀಗಾಗಿ ಆ ವರ್ಷ ನಡೆದಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಗುಜರಾತ್‌ನ ಶಾಸಕರಿಗೆ ಮತ ಹಾಕುವ ಅವಕಾಶ ಸಿಕ್ಕಿರಲಿಲ್ಲ.
1997ರಿಂದಲೂ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ ಸದಸ್ಯ ರೊಬ್ಬರ ಮತದ ಮೌಲ್ಯವನ್ನು 708 ಎಂದು ನಿಗದಿಪಡಿಸಲಾಗಿದೆ. 1952ರಲ್ಲಿ ನಡೆದ ಮೊದಲ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರೊಬ್ಬರ ಮತಮೌಲ್ಯ 494 ಆಗಿತ್ತು. 1957ರಲ್ಲಿ ಅದನ್ನು 496ಕ್ಕೆ ಏರಿಕೆ ಮಾಡಲಾಗಿತ್ತು. 1962ರಲ್ಲಿ 493ಕ್ಕೆ ಏರಿಕೆ ಮಾಡಲಾಯಿತು. 1967 ಮತ್ತು 1969ರಲ್ಲಿ ಮತಮೌಲ್ಯ 576 ಎಂದು ನಿಗದಿ ಮಾಡಲಾಗಿತ್ತು. 1974ರ ರಾಷ್ಟ್ರಪತಿ ಚುನಾವಣೆ ವೇಳೆ ಸಂಸತ್ ಸದಸ್ಯರೊಬ್ಬರ ಮತ ಮೌಲ್ಯ 723ಕ್ಕೆ ಪರಿಷ್ಕರಿಸಲಾಗಿತ್ತು.