ದೊಡ್ಡಬಳ್ಳಾಪುರ: ಕೋವಿಡ್ 19ನಿಂದಾಗಿ ಖಾಸಗಿ ಶಾಲಾ- ಕಾಲೇಜುಗಳ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಶಿಕ್ಷಕರ ನೆರವಿಗೆ ಬಾರದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೌಲ್ಯಮಾಪನ ಆರಂಭಿಸಲು ಹೊರಟಿರುವ ಶಿಕ್ಷಣ ಸಚಿವರಿಗೆ ನೈತಿಕತೆಯಿಲ್ಲ. ಸರ್ಕಾರ ಶಿಕ್ಷಕರಿಗೆ ಆರ್ಥಿಕ ನೆರವು ಹಾಗೂ ವೈದ್ಯಕೀಯ ಭದ್ರತೆ ನೀಡದಿದ್ದರೆ, ಮೌಲ್ಯಮಾಪನ ಬಹಿಷ್ಕಾರದ ನಿರ್ಧಾರ ಕೈಗೊಳ್ಳಬೇಕಾ ಗುತ್ತದೆ ಎಂದು ಶಿಕ್ಷಕರ ಮತ್ತು ಆಡಳಿತ ಮಂಡಳಿ ಫೋರಂ, ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಎ.ಪಿ.ರಂಗನಾಥ್ ಹೇಳಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್-19ನಿಂದಾಗಿ ಬಹಳ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ 3 ತಿಂಗಳಿನಿಂದ ಸಂಬಳ ನೀಡಿಲ್ಲ. ತೀವ್ರ ಆರ್ಥಿಕ ಸಂಕಷ್ಟ ಅನು ಭವಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸರ್ಕಾರ ಹಠಕ್ಕೆ ಬಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಪರೀಕ್ಷೆ ಎದುರಿಸಿದ್ದಾರೆ. ಶಿಕ್ಷಕರ ನೆರವಿಗೆ ಬಾರದ ಸರ್ಕಾರ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಮಾಡುವಂತೆ ಆದೇಶಿಸಿರುವುದು ಎಷ್ಟು ಸರಿ? ಇತ್ತೀಚೆಗೆ ನಡೆದ ಪಿಯುಸಿ ಮೌಲ್ಯ ಮಾಪನದ ವೇಳೆ ನೂರಾರು ಕಿ.ಮೀ. ದೂರ ದಿಂದಬೆಂಗಳೂರಿಗೆ ಉಪನ್ಯಾಸಕರು ಬಂದಿದ್ದರು.
ಈಗ ಎಸ್‌ಎಸ್‌ಎಲ್‌ಸಿ ಮೌಲ್ಯ ಮಾಪನ ಮಾಡಲು ನೂರಾರು ಶಿಕ್ಷಕರು ಸೇರು ತ್ತಾರೆ. ಆದರೆ ಶಿಕ್ಷಕರಿಗೆ ವೈದ್ಯಕೀಯ ಭದ್ರತೆಯಿಲ್ಲ. ಶಾಲಾ ಶಿಕ್ಷಕರಿಗೆ ಈ ವೇಳೆ ಕೋವಿಡ್ 19 ಸೋಂಕು ತಗುಲಿದರೆ ಯಾರು ಹೊಣೆ? ಎಂದರು. ಖಾಸಗಿ ಶಾಲೆಗಳಿಗೆ ಸರ್ಕಾರ ಬಾಕಿ ಇರಿಸಿ ಕೊಂಡಿರುವ ಸುಮಾರು 1,025 ಕೋಟಿ ಆರ್‌ಟಿಇ ಹಣ ಕೂಡಲೇ ಬಿಡುಗಡೆ ಮಾಡಿ ದರೆ, ಶಾಲೆಗಳಿಗೆ ಸಹಕಾರಿಯಾಗುತ್ತದೆ. ಶಿಕ್ಷಕ ರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಶಿಕ್ಷಕರಿಗೆ ವೈದ್ಯಕೀಯ ವಿಮೆ ಒದಗಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿ ದೆ ಎಂದು ತಿಳಿಸಿದರು.
ಮೌಲ್ಯಮಾಪನ ಬಹಿಷ್ಕಾರ?: ತಾಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಎಷ್ಟೋ ಶಾಲೆಗಳಲ್ಲಿ ಶಿಕ್ಷಕರು ಬರೀ 4-5 ಸಾವಿರ ರೂ.ಗಳ ಸಂಬಳಕ್ಕೆ ದುಡಿಯುತ್ತಿದ್ದಾರೆ. ಖಾಸಗಿ ಆಡಳಿತ ಮಂಡಳಿಗಳು ಶಿಕ್ಷಕರಿಗೆ ಸಂಬಳ ನೀಡದೇ ಶಿಕ್ಷಕರು ಅನ್ಯ ಉದ್ಯೋ ಗಗಳತ್ತ ತೆರಳಬೇಕಿದೆ. ಸರ್ಕಾರ ಖಾಸಗಿ ಶಾಲೆಗಳ ಶಿಕ್ಷಕರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ದಿಸೆಯಲ್ಲಿ ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್ ಹಾಗೂ ವೈದ್ಯಕೀಯ ವಿಮೆಯ ಬೇಡಿಕೆಗಳು ಈಡೇರದಿದ್ದರೆ ಜುಲೈ 13ರಂದು ನಡೆಯಲಿರುವ ಎಸ್ ಎಸ್‌ಎಲ್‌ಸಿ ಮೌಲ್ಯಮಾಪನ ಕಾರ್ಯ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ರಾಜ್ಯದಲ್ಲಿ ಸುಮಾರು 2.5 ಲಕ್ಷ ಶಿಕ್ಷಕರಿದ್ದು, ಒತ್ತಡಕ್ಕೆ ಮಣಿದ ಕೆಲವಷ್ಟು ಶಿಕ್ಷಕರನ್ನು ಹೊರತುಪಡಿಸಿ ಬಹಳಷ್ಟು ಶಿಕ್ಷಕರು ಮೌಲ್ಯಮಾಪನ ಬಹಿಷ್ಕಾರಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ತಿಳಿಸಿದರು. ಶಿಕ್ಷಕರ ಮತ್ತು ಆಡಳಿತ ಮಂಡಳಿ ಫೋರಂ ಕಾರ್ಯದರ್ಶಿ ಸೂಡಿ ಸುರೇಶ್, ಜಂಟಿ ಕಾರ್ಯದರ್ಶಿ ಟಿ.ಕೆ.ನರಸೇಗೌಡ, ತಾಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಮೋಹನ್ ನಾಯಕ್, ಪ್ರಧಾನ ಸಂಚಾಲಕ ದಾದಾಪೀರ್ ಭಾಗವಹಿಸಿದ್ದರು.