ಶಿವಮೊಗ್ಗ: ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಕಾವ್ಯಪ್ರತಿಭೆ, ಲೋಕದರ್ಶನ ಮತ್ತು ಮೌಲ್ಯಾದರ್ಶಗಳ ಕುರಿತು ಹೆಚ್ಚಿನ ಸಂಶೋಧನೆ ಕೈಗೊಳ್ಳುವ ನಿಟ್ಟಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಪ್ರಾರಂಭಿಸಲಾಗಿದೆ ಎಂದು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಪ್ರತಿನಿ ಧಿಗಳು ಮತ್ತು ಕೆಲವು ಸಂಘಟನೆಗಳು ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿದ್ದವು. ಈ ಕುರಿತು ಸಿಂಡಿಕೇಟ್‌ನಲ್ಲಿ ಚರ್ಚಿಸಿ ಅನುಮೋದನೆ ಪಡೆದು ವಿವಿಯಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಪ್ರಾರಂಭ ಮಾಡಲಾಗಿದ್ದು, ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕನ್ನಡ ಭಾರತಿಯ ಪ್ರಾಧ್ಯಾಪಕ ಪ್ರೊ. ಜಿ ಪ್ರಶಾಂತ್ ನಾಯಕ ಮಾತನಾಡಿ, ದಾರ್ಶನಿಕರ ಜಯಂತಿಗಳು ಕೇವಲ ಆಯಾ ಸಮುದಾಯಗಳಿಗೆ ಸೀಮಿತವಾಗದೆ, ಸಾರ್ವತ್ರಿಕವಾಗಿ ಆಚರಣೆಗೊಳ್ಳಬೇಕು. ವಾಲ್ಮೀಕಿ,ಬುದ್ಧ, ಬಸವರಂಥಹ ಮಹಾನ್ ವ್ಯಕ್ತಿಗಳು ಯಾವುದೇ ಒಂದು ಸಮುದಾಯದ ಸ್ವತ್ತಲ್ಲ. ಅವರು ಎಲ್ಲ ಕಾಲಕ್ಕೂ ಎಲ್ಲ ಸಮುದಾಯಗಳಿಗೂ ಸಲ್ಲುವ ವಿಚಾರಧಾರೆಯನ್ನು ಪ್ರತಿಪಾದಿಸಿದ ಶ್ರೇಷ್ಠ ಮಾನವತಾವಾದಿಗಳು. ಹೀಗಾಗಿ, ವಾಲ್ಮೀಕಿಯನ್ನೊಳಗೊಂಡು ಎಲ್ಲ ಶ್ರೇಷ್ಠ ದಾರ್ಶನಿಕರ ಮೌಲ್ಯಾದರ್ಶಗಳು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಸಾರ್ವತ್ರಿಕವಾಗಿರಬೇಕು ಎಂದರು.
ಭಾರತಕ್ಕೆ ಸಾವಿರಾರು ದಾರ್ಶನಿಕರ ಪರಂಪರೆಯಿದೆ. ಜ್ಞಾನ ಮೇಲ್ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಕಾಲಘಟ್ಟದಲ್ಲಿ ಮೊದಲ ಮಹಾಕಾವ್ಯ ಬರೆಯಲು ವಾಲ್ಮೀಕಿ ಅವರಂಥಹ ಕೆಳಸಮುದಾಯದ ಕವಿಯೇ ಬರಬೇಕಾಯಿತು.ಅಕ್ಷರ ಜ್ಞಾನಕ್ಕಿಂತ ಲೋಕಜ್ಞಾನದೊಡ್ಡದು. ವಾಲ್ಮೀಕಿ ಲೋಕಜ್ಞಾನದ ಪ್ರತೀಕ. ಅವರ ಕಾವ್ಯ ಜೀವಂತವಾಗಿರುವುದು ಅಕ್ಷರಗಳಿಂದಲ್ಲ, ಲೋಕಜ್ಞಾನದಿಂದ ಎಂದರು.
ಕುಲಸಚಿವ ಪ್ರೊ. ಎಸ್. ಎಸ್. ಪಾಟೀಲ್, ಪರೀಕ್ಷಾಂಗ ಕುಲಸಚಿವ ಪ್ರೊ. ಪಿ. ಕಣ್ಣನ್ ಮಾತನಾಡಿದರು. ಹಣಕಾಸು ಅ ಧಿಕಾರಿ ಎಸ್. ರಾಮಕೃಷ್ಣ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಘಟಕದ ಸಂಚಾಲಕ ಡಾ| ಉದ್ದಗಟ್ಟಿ ವೆಂಕಟೇಶ್ ಸ್ವಾಗತಿಸಿದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.