Advertisement

ವಾಲ್ಮೀಕಿ ಪ್ರಪಂಚದ ಮೊದಲ ಸ್ತ್ರೀವಾದಿ

09:31 PM Oct 20, 2019 | Lakshmi GovindaRaju |

ಹುಣಸೂರು: ಜಗತ್ತಿನ ಮಹಾಕಾವ್ಯಗಳಲ್ಲಿ ವಾಲ್ಮೀಕಿ ವಿರಚಿತ ರಾಮಾಯಣ, ವ್ಯಾಸರ ಮಹಾಭಾರತ ಕಾವ್ಯಕಲ್ಪಿತ ಕಥನ, ಭಾವಗೀತೆ ಎನ್ನಬಹುದು. ಇಂತಹ ಮಹನೀಯರ ಬದುಕು, ಬವಣೆ ಬಗ್ಗೆ ಅರಿತು ದೇಶದ ಆಸ್ತಿಯಾಗಬೇಕು ಎಂದು ಮೈಸೂರು ವಿವಿ ಸಹಾಯಕ ಪ್ರಾಧ್ಯಾಪಕಿ ಡಾ.ಎಚ್‌.ಪಿ.ಜ್ಯೋತಿ ಆಶಿಸಿದರು. ತಾಲೂಕು ನಾಯಕರ ಸಂಘ ರಾಷ್ಟ್ರೀಯಹಬ್ಬಗಳ ಆಚರಣಾಸಮಿತಿಯ ಸಹಯೋಗದಲ್ಲಿ ನಗರದ ಮುನೇಶ್ವರ ಕಾವಲ್‌ ಮೈದಾನದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.

Advertisement

ಸಮುದಾಯದವರು ಒಗ್ಗಟ್ಟಾಗಬೇಕಿದೆ: ದೇಶದ ಸಂಸ್ಕೃತಿ, ಕುಟುಂಬ ಎಂಬುದು ರಾಮಾಯಣದ ಪರಿಕಲ್ಪನೆಯಾಗಿದೆ. ಮಹರ್ಷಿ ವಾಲ್ಮೀಕಿಯವರ ಆದರ್ಶವನ್ನು ಗಾಂಧೀಜಿ ಸಹ ಅನುಸರಿಸಿದ್ದರು. ಜತೆಗೆ ಪ್ರಪಂಚದ ಪ್ರಥಮ ಸ್ತ್ರೀವಾದಿಯಾಗಿದ್ದವರು, ಇಂತಹ ಮಹರ್ಷಿ ಶೋಷಿತ ಜನಾಂಗದಲ್ಲಿ ಹುಟ್ಟಿರುವ ಕಣ್ಮಣಿ. ನಾಯಕ ಸಮುದಾಯದಲ್ಲಿ ಒಗ್ಗಟ್ಟಿಲ್ಲದಿರುವುದು ಕಾಣುತ್ತಿದ್ದೇವೆ. ಎಲ್ಲರೂ ಭವಿಷ್ಯಕ್ಕಾಗಿ ಒಗ್ಗಟ್ಟಾಗಬೇಕಿದೆ, ಮುಖ್ಯವಾಗಿ ಶಿಕ್ಷಣಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಮಾತನಾಡಿ, ಕುವೆಂಪುರವರು ತಮ್ಮ ರಾಮಾಯಣ ದರ್ಶನದಲ್ಲಿ ವಾಲ್ಮೀಕಿಯವರ ರಾಮಾಯಣವನ್ನು ವಿಭಿನ್ನ ಶೈಲಿಯಲ್ಲಿ ಬರೆದಿದ್ದಾರೆ ಎಂದು ತಿಳಿಸಿದ್ದಾರೆ. ನಾಯಕ ಸಮುದಾಯದ ಯುವಕರು ವಾಲ್ಮೀಕಿಯವರ ಆದರ್ಶದ ಬಗ್ಗೆ ಅರಿಯಲು ರಾಮಾಯಣ ದರ್ಶನ ಓದಬೇಕು. ರಾಜನಹಳ್ಳಿ ಮಠಾಧಿಪತಿಗಳು, ದಿ.ಚಿಕ್ಕಮಾದು ಸೇರಿದಂತೆ ಸಮುದಾಯದ ಅನೇಕರು ಎಸ್‌.ಟಿ.ಪಂಗಡಕ್ಕೆ ಸೇರಿಸಲು ಶ್ರಮಿಸಿದ್ದಾರೆ. ಮುಂದೆ ನಾಯಕರ ಉಪ ಪಂಗಡ ಸೇರಿಸಲು ಕ್ರಮ ವಹಿಸಬೇಕಿದೆ ಎಂದರು.

ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ: ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ತಾಲೂಕು ನಾಯಕರ ಸಂಘದ ಅಧ್ಯಕ್ಷ ಅನಿಲ್‌ ಚಿಕ್ಕಮಾದು ಮಾತನಾಡಿ, ವಾಲ್ಮೀಕಿ ಬದುಕು, ಬರಹ ನಮ್ಮ ಜನಾಂಗದ ಅಸ್ಮಿತೆ, ಅದನ್ನು ಅನುಸರಿಸುವ ಮೂಲಕ ಪ್ರಾಜ್ಞರಾಗೋಣ, ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಒಗ್ಗಟ್ಟಾಗಿ ಸಾಗೋಣವೆಂದು ಮನವಿ ಮಾಡಿದರು.

ಜನಾಂಗದ ಮುಖಂಡ ಅಪ್ಪಣ್ಣ ಮಾತನಾಡಿ, ಜನಾಂಗದ ಬಗ್ಗೆ ಅಪಾರ ಕಾಳಜಿಹೊಂದಿದ್ದ ಮಾಜಿ ಶಾಸಕ ಚಿಕ್ಕಮಾದು ಹೋರಾಟ ಸಮುದಾಯದ ಯುವಕರಿಗೆ ಸ್ಫೂರ್ತಿಯಾಗಬೇಕು. ಸಮಾಜದ ಮುಖಂಡರು ಯಾವುದೇ ಪಕ್ಷದಲ್ಲಿ ಗುರ್ತಿಸಿಕೊಂಡಿರಿ ಆದರೆ ಸಮಾಜದ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಮುಂದಿನ ದಿನಗಳಲ್ಲಿ ಶಾಸಕ ಅನಿಲ್‌ ಚಿಕ್ಕಮಾದು ಸಮ್ಮುಖದಲ್ಲೇ ಸಭೆ ಆಯೋಜಿಸಿ ಗೊಂದಲಗಳನ್ನು ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದರು.

Advertisement

ಮುಖಂಡ ಅಣ್ಣಯ್ಯನಾಯಕ, ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಸದಸ್ಯ ಕಟ್ಟನಾಯಕ, ಶಿಕ್ಷಕ ಸೋಮಶೇಖರ್‌ ಮಾತನಾಡಿದರು. ತಹಶೀಲ್ದಾರ್‌ ಬಸವರಾಜ್‌, ಇಒ ಗಿರೀಶ್‌, ನಾಯಕ ಸಂಘದ ಮಾಜಿ ಅಧ್ಯಕ್ಷ ತಿಮ್ಮನಾಯಕ, ಶಿವಣ್ಣ, ಪ್ರಧಾನ ಕಾರ್ಯದರ್ಶಿ ರವಿ, ಮುಖಂಡ ಕೆಂಪನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಸಮುದಾಯದ ಮಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next