‘ಪ್ರೀತಿ ಏಕೆ ಭೂಮಿ ಮೇಲಿದೆ’…..ಆಹಾ! ಈ ಸಾಲುಗಳು ಕೇಳಿದ ತಕ್ಷಣ ನಮ್ಮ ಉತ್ತರ ‘ಬೇರೆ ಎಲ್ಲೂ ಜಾಗವಿಲ್ಲದೆ’ ಎಂದು ತಟ್ ಅಂತಾ ಹೇಳುಬಿಡುತ್ತೇವೆ.. ಹೌದು ಅದು ನಿಜಾನ ಅಲ್ವಾ ? ನಾವೆಲ್ಲ ಭೂಮಿ ಮೇಲಿದಿವಿ ಅಂದ್ರೆ ನಮ್ಮೆದೆಯೊಳಗಿನ ಪ್ರೀತಿ ಕಾರಣ ಎಂದಲ್ಲವೆ…ಮಾನವರು, ಪ್ರಾಣಿ, ಪಕ್ಷಿ, ಗಿಡ- ಮರ, ಹರಿಯುವ ನೀರು, ಉದಯಿಸುವ ರವಿ, ಬೆಳಗುವ ಚಂದಿರ…ಹೀಗೆ ಭೂಮಿ ಮೇಲಿನ ಚರಾಚರದಲ್ಲಿ ಪ್ರೀತಿ ಕಾಣುವ ಭಾವ ನಮ್ಮಲ್ಲಿದೆ ಎಂದರೆ ಅದನ್ನು ಒಪ್ಪದಿರುವಿರಾ..?
ಪ್ರೀತಿಯ ರೂಪಾಂತರಗಳಲಿ ಇರಬೇಕಾದ ಭಾವ ಸಂಗಮ
ಪ್ರೀತಿ ಅಂದ ತಕ್ಷಣ ನಮ್ಮ ಕಣ್ಣಿಗೆ ಬರುವ ಮೊದಲ ಚಿತ್ರ ಹುಡುಗ ಹುಡುಗಿ. ಇದು ಯುವ ಅವಸ್ಥೆಯ ಒಂದು ಸ್ಥಿತಿ. ಇದನ್ನು ಸಹ ಅಲ್ಲಗಳೆಯುವದು ಬೇಡ. ಇದರಿಂದಲೆ ಶುರು ಮಾಡಿ ತಿಳುವಳಿಕೆಯ ಪರಿಧಿ ಬದಲಿಸೋಣ ಅಲ್ವಾ ? ಇರಲಿ.. ಆದ್ರೆ ಜೀವ ಪಡೆದ ಅರೆಕ್ಷಣದಿಂದ ನಾವು ಬೆಳೆದದ್ದು ಪ್ರೀತಿ ಇಂದಲೇ. ಪ್ರೀತಿ ಇಲ್ಲದ ಮೇಲೆ ಬೀಜ ಮೊಳೆಯುವುದೆ?. ಪ್ರೀತಿ ಇಲ್ಲದೆ ಮೋಡ ಹನಿಯಾಗುವುದೆ?. ಪ್ರೀತಿ ಇಲ್ಲದೆ ಮೊಗ್ಗು ಹೂವಾಗಿ ಅರಳುವುದೆ. ಹೀಗೆ ಎಲ್ಲದಕ್ಕೂ ಆ ಮೇಲಿನವನ ಆಣತಿ ಕಾರಣ. ಇದು ಎಲ್ಲರು ತಿಳಿದ ಸತ್ಯವು ಹೌದು. ಆದ್ರೆ ಇವತ್ತು ನಮ್ಮ ಬದುಕು ಅಂತರ್ಜಾಲದಲ್ಲಿ ಅವಿತು ನಮ್ಮಿಂದ ಆ ಮುಗ್ದ ಪ್ರೀತಿಯನ್ನ ಕಸಿದು ತಿನ್ನುತ್ತಿದೆ. ಇಲ್ಲಿ ಮನಸ್ಸಿನ ಮಾತಾಗುತ್ತಿದೆ ಎಂದರೆ ಅಲ್ಲಿ ಗೊಂದಲಗಳಿಗೆ ಅವಕಾಶ ಇರಬಾರದು ಅಮ್ಮ,ಅಕ್ಕ .ತಮ್ಮ.ಅಣ್ಣ ತಂದೆ ಗೆಳತಿ ಗೆಳೆಯ ಪ್ರೇಮಿ ಎಲ್ಲರದ್ದು ಬೇರೆ ಬೇರೆ ಸ್ಥಾನ ಪಡೆಕೊಂಡಿರುತ್ತಾರೆ. ಅವು ರೂಪಾಂತರ ಗೊಂಡಾಗ ಅವುಗಳ ಮೌಲ್ಯ ಕುಸಿಯುತ್ತದೆ. ಹಾಗಾಗಿ ಭಾವ ಸಂಗಮ ಬಾಂಧವ್ಯದ ಆಳವಾಗಿರಲಿ, ವಿನಃ ದಡದಿ ಬಂದು ಅಪ್ಪಳಿಸುವ ಅಲೆಗೆ ಕೊಚ್ಚಿ ಹೋಗುವ ಮರಳಾಗದಿರಲಿ.
ಪ್ರೇಮಿಗಳ ದಿನಾಚರಣೆಯ ಬದಲಾವಣೆಯ ದಾರಿ
ಇದು ಸಣ್ಣ ಸಣ್ಣ ವಿಷಯಗಳನ್ನು ಸಂಭ್ರಮಿಸುವ ಕಾಲ. ಈ ವೇಗದ ಕಾಲದಲ್ಲಿ ಒಂದು ಮಗು ಗುಲಾಬಿ ಹೂವು ನೋಡಿದ ತಕ್ಷಣ ಇದು ಪ್ರೇಮಿಗಳ ದಿನದ ಪ್ರತೀಕ ಎಂದು ಹೇಳುವಷ್ಟು ವೇಗದ ಸಮಯ. ಮಗು ಹಾಗೆ ತಿಳಿದಿದೆ ಎಂದಾದರೆ ಅದಕ್ಕೆ ಪರಿಪೂರ್ಣವಾಗಿ ಹೇಳದೆ ನಾವು ತಪ್ಪು ಮಾಡುತ್ತೇವೆ. ದೇಶ ಪ್ರೇಮದಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧನಿಗೂ ಅದೆ ಗುಲಾಬಿ ಅಲ್ಲವೆ ನೀಡುವದು. ಅದೆ ಗುಲಾಬಿ ಅಲ್ಲವೆ ನನ್ನ ಅಕ್ಕನ ಮೂಡಿಯಲ್ಲಿ ನಕ್ಕದ್ದು, ಅದೆ ಗುಲಾಬಿ ಅಲ್ಲವೆ ಅಮ್ಮ ದೇವರ ಪಾದಕ್ಕಿಟ್ಟಿದ್ದು. ನೆಹರೂರವರ ಹುಟ್ಟು ಹಬ್ಬಕ್ಕೆ ಇಡುವುದು ಅದೆ ಗುಲಾಬಿ ಅಲ್ಲವೆ. ಹೀಗೆ ಹಲವು ಆಯಾಮಗಳಲ್ಲಿ ಪ್ರೀತಿ ಪಾತ್ರರಿಗೆ ಅಭಿನಂದನೆ ಹೇಳುವ ಹೂ ಯಾವಾಗ ಕೇವಲ ಹುಡುಗ ಹುಡುಗಿಯ ಪ್ರತೀಕವಾಯಿತು ?
ಇದನ್ನೊಮ್ಮೆ ಹಾಗೆ ಮಕ್ಕಳೊಂದಿಗೆ ಮಾತಾಡಿ. ಅಮ್ಮನ ದಿನ, ಶಿಕ್ಷಕರ ದಿನ, ರೈತ ದಿನ,ಸ್ನೇಹಿತರ ದಿನ ಹೀಗೆ ಎಲ್ಲ ದಿನಗಳಲ್ಲಿ ಇದು ಒಂದು ದಿನ. ನಿಮ್ಮ ಪ್ರೀತಿ ಪಾತ್ರರಿಗೆ ಗೌರವ ನೀಡಿ ಖುಷಿ ಪಡಿಸುವ ದಾರಿ ಅಷ್ಟೇ .ನಮ್ಮ ಮನದ ವಿಚಾರಧಾರೆ ಬದಲಿಸಿಕೊಂಡು ಕನಸಿನ ದಾರಿ ಸರಿ ಮಾಡಿಕೊಳ್ಳಲು ಪ್ರಯತ್ನ ಮಾಡಬೇಕಾಗಿದೆ.
ಹಾಗೆ ಸುಮ್ಮನೆ ಮನಸ್ಸಿನೊಂದಿಗೆ ಮಾತಾಡಿ
ಇಷ್ಟು ವರ್ಷದಲ್ಲಿ ಅಮ್ಮನ ಹರಕು ಸೀರೆ. ಅಪ್ಪನ ಬೆವರು, ತಂಗಿಯ ಕನಸು, ತಮ್ಮನ ಕೀಟಲೇ ಯಾವುದು ಕಾಣದ ಕಣ್ಣಿಗೆ ಪ್ರೇಮಿಗಳ ದಿನಕ್ಕಾಗಿ ಸಾಲ ಮಾಡಿ ತಂದೆ ತಾಯಿಯನ್ನ ಪೀಡಿಸಿ, ಒಬ್ಬರನ್ನ ಖುಷಿ ಪಡಿಸುವ ಬದಲು ನಮ್ಮ ಜವಾಬ್ದಾರಿ ಅರಿತು ಪ್ರಬುದ್ಧ ಮನಸ್ಥಿತಿ ಮೂಡಿದ ಮೇಲೆ ನಿರ್ಧಾರಗಳು ನಿಮ್ಮದಾಗಿರಲಿ. ಅದಕ್ಕಾಗಿ ಯಾರನ್ನೊ ಪೀಡಿಸಿ. ದುಡುಕಿನ ನಿರ್ಧಾರ ಮಾಡದಿರಲಿ, ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಜಾಲತಾನದಲ್ಲಿ ‘ಪ್ರೀತಿಗಾಗಿ ಸತ್ತ ಯುವಕ ಯುವತಿ’ ಅಂತಾ ಕೇಳಿ ಕೇಳಿ ಎಲ್ಲರಲ್ಲೂ ಭಯದ ಭಾವ ತುಂಬಿದೆ. ಒಂದು ದಿನ ಸಾಯಲೇ ಬೇಕು ಓ ಮನಸ್ಸೇ ಅದಕ್ಕಿಂತ ಮುಂಚೆ ನಿನ್ನ ಕನಸು ಕಂಡ ಮನಸ್ಸುಗಳ ನಗುವಿಗಾಗಿ ಬದುಕ ಬೇಕು. ಮತ್ತೆ ಹುಟ್ಟಲು ಮರುಜನ್ಮವಿಲ್ಲ, ಇರುವ ಜೀವನ ಪ್ರೀತಿಸಿ. ಭೂಮಿಮೇಲೆ ಮನುಷ್ಯನಾಗಿ ಹುಟ್ಟಿದ ಈ ಜೀವಕ್ಕೊಂದು ನಮ್ಮಿಂದ ನಮಗಾಗಿ ಹ್ಯಾಪಿ ವ್ಯಾಲಂಟೈನ್ಸ್ ಡೇ .
ನಮ್ಮ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಪ್ರತಿಯೊಬ್ಬ ವೀರರಿಗೂ ಪ್ರೀತಿಯ ಸಮರ್ಪಣಾ ಮನೋಭಾವದಿಂದ ನಮನ ಸಲ್ಲಿಸುತ್ತ ಪ್ರೀತಿ ನಿಮ್ಮ ಬದುಕಾಗಲಿ. ಮದರ್ ತೆರೆಸ್ಸಾರ ಕನಸಾಗಲಿ.ಎಲ್ಲರಿಗೂ ಒಳಿತಾಗಲಿ..
ಜಯಶ್ರೀ ವಾಲಿಶೆಟ್ಟರ್
ಕರ್ನಾಟಕ ಪಬ್ಲೀಕ್ ಸ್ಕೂಲ್
ಹಿರೇಸಿಂದೋಗಿ