ಕೋಟೇಶ್ವರ: ಕಾಳಾವರ ಗ್ರಾ.ಪಂ. ಸಭೆಯು ವಕ್ವಾಡಿಯಲ್ಲಿ ಬಾರ್ ಆರಂಭಿಸಲು ನೀಡಿದ ಅನುಮತಿಯ ವಿಚಾರದಲ್ಲಿ ಬಹಳಷ್ಟು ಚರ್ಚೆಗೆ ಎಡೆ ಮಾಡಿ ಸಾರ್ವಜನಿಕರ ಅಪೇಕ್ಷೆಯಂತೆ ಅನುಮತಿಯನ್ನು ಹಿಂಪಡೆದ ಘಟನೆ ಶನಿವಾರ ನಡೆಯಿತು.
ಕಾಳಾವರ ಗ್ರಾ.ಪಂ. ಅಧ್ಯಕ್ಷ ರವಿರಾಜ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಳಾವರ ಪರಿಸರದಲ್ಲಿ ದಿನೇದಿನೇ ಹೆಚ್ಚುತ್ತಿರುವ ಜಿಂಕೆಗಳ ಹಾವಳಿಯಿಂದ ಕೃಷಿಭೂಮಿಯು ಸಂಪೂರ್ಣವಾಗಿ ಧ್ವಂಸಗೊಳ್ಳುತ್ತಿದ್ದು ಇದಕ್ಕೊಂದು ಪರ್ಯಾಯ ವ್ಯವಸ್ಥೆ ಒದಗಿಸುವಲ್ಲಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಅಲ್ಲೇ ಸಮೀಪದಲ್ಲಿ ಕೋಳಿ ಫಾರ್ಮ್ ಘಟಕದ ಆರಂಭದ ಬಗ್ಗೆ ತೀರಾ ಆಕ್ಷೇಪ ವ್ಯವಕ್ತಪಡಿಸಿದ ಆ ಭಾಗದ ನಿವಾಸಿಗಳು ಅನುಮತಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು. ಅಸೋಡಿನಲ್ಲಿ ಡಾಮರ್ ಜೆಲ್ಲಿ ಮಿಶ್ರಣ ಘಟಕಕ್ಕೆ ನೀಡಿದ ಅನುಮತಿಯ ಬಗ್ಗೆ ಭಾರೀ ಚರ್ಚೆ ನಡೆಯಿತು.
ವಕ್ವಾಡಿಯ ಕೊರಗ ಕಾಲನಿಯ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ಮಂಜೂರಾತಿ ವಿಚಾರದಲ್ಲಿ ನಡೆದ ಚರ್ಚೆಯಲ್ಲಿ ಆ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಇಲಾಖೆ ಎಡವುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತ ವಾಯಿತು. ಈಶ್ವರ ದೇವಸ್ಥಾನದ ಭಾರೀ ಕೆರೆಯ ಅಕ್ಕಪಕ್ಕದಲ್ಲಿ ನಿತ್ಯ ಸಂಚಾರದ ರಸ್ತೆಯಿದ್ದು ಆವರಣವಿಲ್ಲದ ಕೆರೆಯ ಇಕ್ಕೆಲಗಳಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ನಡೆದುಕೊಂಡು ಹೋಗುತ್ತಿ ರುವ ಈ ಪ್ರದೇಶದಲ್ಲಿ ಆಯ ತಪ್ಪಿ ಕೆರೆಗೆ ಬೀಳುವ ಸಂಭವವಿದ್ದು ಅದಕ್ಕೊಂದು ಪರ್ಯಾಯ ವ್ಯವಸ್ಥೆ ಯಾಗಿ ಆವರಣ ಗೋಡೆ ನಿರ್ಮಿಸುವಂತೆ ಅಲ್ಲಿನ ನಿವಾಸಿಗಳು ಆಗ್ರಹಿಸಿದರು. ವಾರಾಹಿ ಕಾಲುವೆಯ ಸರ್ವೆಯು ದಾರಿ ತಪ್ಪುತ್ತಿದ್ದು ಮನ ಬಂದಂತೆ ಸರ್ವೇ ನಡೆಸಿ ಜನ ವಿರೋಧಿ ನೀತಿ ಅನುಸರಿಸುತ್ತಿರುವುದು ಸೂಕ್ತವಲ್ಲ ವೆಂದು ಗ್ರಾಮಸ್ಥರು ಒಕ್ಕೊರಲಿನಿಂದ ತಮ್ಮ ಅಭಿಪ್ರಾಯ ಮಂಡಿಸಿದರು.
ಕಾಳಾವರ ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ಆಚಾರ್ಯ, ಜಿ.ಪಂ. ಸದಸ್ಯೆ ಶ್ರೀಲತಾ ಎಸ್. ಶೆಟ್ಟಿ, ತಾ.ಪಂ. ಸದಸ್ಯೆ ಶೈಲಜಾ ಶೆಟ್ಟಿ, ಕಾಳಾವರ ಗ್ರಾ.ಪಂ. ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಳಾವರ ಪಿಡಿಒ ಮಧುಸೂದನ ಸ್ವಾಗತಿಸಿ, ವಂದಿಸಿದರು.