Advertisement

ವಾಜಪೇಯಿ, ರಾಜೀವ್‌ಗಾಂಧಿ ಆರೋಗ್ಯಶ್ರೀ 16ರಿಂದ ಬಂದ್‌

03:45 AM Jan 10, 2017 | Team Udayavani |

– ಸರ್ಕಾರದಿಂದ 100 ಕೋಟಿ ರೂ. ಬಾಕಿ
– ಆರೋಗ್ಯ ಸೇವೆ ಸ್ಥಗಿತಕ್ಕೆ ಖಾಸಗಿ ಆಸ್ಪತ್ರೆಗಳ ನಿರ್ಧಾರ
– ಈಗಾಗಲೇ ದಾಖಲಾಗಿರುವವರಿಗೆ ಚಿಕಿತ್ಸೆ ಮುಂದುವರಿಕೆ
ಬೆಂಗಳೂರು:
ಒಪ್ಪಂದದಡಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿದ್ದ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಜ.16ರಿಂದ ವಾಜಪೇಯಿ ಆರೋಗ್ಯ ಸೇವೆ, ರಾಜೀವ್‌ಗಾಂಧಿ ಆರೋಗ್ಯ ಯೋಜನೆ, ಜ್ಯೋತಿ ಸಂಜೀವಿನಿ ಯೋಜನೆಗಳ ಸೇವೆ ಸ್ಥಗಿತಗೊಳಿಸುವುದಾಗಿ ರಾಜ್ಯ ಆರೋಗ್ಯ ಸೇವಾ ಸಂಘಗಳ ಒಕ್ಕೂಟ ತಿಳಿಸಿದೆ.

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಹ ಸಲಹೆಗಾರ ಡಾ. ನಾಗೇಂದ್ರಸ್ವಾಮಿ, ಬಿಪಿಎಲ್‌ ಕಾರ್ಡು ಹೊಂದಿರುವವರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಐದು ಯೋಜನೆಗಳನ್ನು ಜಾರಿ ಮಾಡಿದ್ದು, ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಕಳೆದ ಆರು ತಿಂಗಳಿನಿಂದ ಒಪ್ಪಂದದ ಪ್ರಕಾರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಆದ್ದರಿಂದ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.

ಒಪ್ಪಂದದಂತೆ ರಾಜ್ಯದ ಸುಮಾರು 250ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ಯೋಜನೆಗಳ ಫ‌ಲಾನುಭವಿಗಳಿಗೆ ಸೇವೆ ನೀಡಲಾಗುತ್ತಿದೆ. 100 ಕೋಟಿಗೂ ಅಧಿಕ ಮೊತ್ತದ ಬಾಕಿ ಹಣ ಪಾವತಿಯಾಗಬೇಕಿದೆ. ಖಾಸಗಿ ಆಸ್ಪತ್ರೆಗಳ ಉದ್ಯೋಗಿಗಳಿಗೆ ವೇತನ, ಔಷಧಿಗಳಿಗೆ ಹಣ ಇತ್ಯಾದಿ ಅವಶ್ಯಕತೆಗಳಿಗೆ ಹಣದ ಕೊರತೆಯುಂಟಾಗಿದೆ. ಆದ್ದರಿಂದ ವಾಜಪೇಯಿ ಆರೋಗ್ಯ ಸೇವೆ, ಜ್ಯೋತಿ ಸಂಜೀವಿನಿ ಯೋಜನೆ ಮತ್ತು ರಾಜೀವ್‌ ಆರೋಗ್ಯ ಯೋಜನೆಗಳ ಸೇವೆ ನಿಲ್ಲಿಸಲಾಗುವುದು ಎಂದರು.

ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ ಚಿಕಿತ್ಸೆ ಮುಂದುವರೆಸಲಾಗುವುದು. ಜ.16ರಿಂದ ಹೊಸ ಫ‌ಲಾನುಭವಿಗಳಿಗೆ ಚಿಕಿತ್ಸೆಗೆ ಅವಕಾಶವಿಲ್ಲ. ಮಕ್ಕಳಿಗಿರುವ ಆರ್‌ಬಿಎಸ್‌ಕೆ ಮತ್ತು ಅಪಘಾತಕ್ಕೊಳಗಾದವರಿಗೆ ನೀಡುವ ಎಂಎಸ್‌ಎಚ್‌ಎಸ್‌ ಯೋಜನೆ ಮುಂದುವರಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ, ಎಫ್ಎಚ್‌ಎಯ ಡಾ.ಅಲೆಕ್ಸಾಂಡರ್‌ ಥಾಮಸ್‌, ಯುನಿಟಿ ಹೆಲ್ತ್‌ ಸರ್ವಿಸಸ್‌ ಪ್ರೈ.ಲಿ.ನ ಡಾ.ಅಜಮಲ್‌ ಹಬೀಬ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next