ತುಮಕೂರು: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಅಜಾತ ಶತ್ರು ನಡೆ ನುಡಿಯಿಂದ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದು, ಎಲ್ಲಾ ರಾಜಕೀಯ ಪಕ್ಷದಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಇಂದು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂದರೇ ಲಕ್ಷಾಂತರ ಕಾರ್ಯಕರ್ತರ ತ್ಯಾಗವೇ ಹೊರತು ಬೇರೇನೂ ಅಲ್ಲ ಎಂದು ಜನಸಂಘದ ಹಿರಿಯ ಕಾರ್ಯಕರ್ತ ದೇವರಾಜ್ ತಿಳಿಸಿದರು.
ನಗರದ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಚೇರಿಯಲ್ಲಿ ಬುಧವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 96ನೇ ವರ್ಷದ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಇತರೆ ಪಕ್ಷಗಳಿಗಿಂತ ಭಿನ್ನ ಪಕ್ಷವಾಗಿದ್ದು, ವಾಜಪೇಯಿ ಎಂಬ ಮಾಂತ್ರಿಕ ಶಕ್ತಿಯ ಸೆಳೆತ ಇಂದು ಪಕ್ಷವನ್ನು ಉನ್ನತ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದರು.
ಸಭ್ಯತೆ ಅನುಸರಿಸಿ: ಅಟಲ್ ಬಿಹಾರಿ ವಾಜಪೇಯಿ ಅವರ ಸಭ್ಯತೆ ಅನುಕರಣೆ ಮಾಡಿಕೊಂಡು ಮುನ್ನಡೆಯೋಣ, ಅವರ ಸ್ಮರಣೆಯಿಂದ ನಮ್ಮಲ್ಲಿ ಮತ್ತಷ್ಟು ಒಳ್ಳೆಯ ಗುಣಗಳು ವೃದ್ಧಿಯಾಗಲಿ ಎಂದು ಆಶಿಸಿದರು.
ಅಪೂರ್ವ ರತ್ನ: ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಎಸ್. ಶಿವಪ್ರಸಾದ್ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಕ್ಷೇತ್ರದಲ್ಲಿ ಎಂದೂ ಮರೆಯಲಾರದ ಅಪೂರ್ವ ರತ್ನ. ಎಲ್ಲಾ ಪಕ್ಷದವರು ಪಕ್ಷಾತೀತವಾಗಿ ಒಪ್ಪಿಕೊಂಡಿದ್ದ ಜನನಾಯಕ. ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪಕ್ಷದ ರಾಷ್ಟ್ರೀಯ ಹಿರಿಯ ಮುಖಂಡರಾದ ಎಲ್. ಕೆ ಅಡ್ವಾಣಿ, ಮುರಳಿ ಮನೋಹರ ಜೋಶಿಯವರೊಂದಿಗೆ ಪಕ್ಷ ಬೆಳೆಸಿ, ಅಧಿಕಾರಕ್ಕೆ ತಂದು ಪ್ರಧಾನ ಮಂತ್ರಿಗಳಾಗಿ ದೇಶಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಜಿ.ಬಿ.ಜ್ಯೋತಿಗಣೇಶ್, ರಾಜ್ಯ ಕಾರ್ಯಕಾರಣಿ ಸದಸ್ಯ ಬಿ.ಡಿ. ಗೋಪಾಲಕೃಷ್ಣ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ್, ಉಪಾಧ್ಯಕ್ಷ ಟಿ.ಆರ್.ಸದಾಶಿವಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಸಿ.ಎನ್. ರಮೇಶ್, ಕಾರ್ಮಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಕೊಪ್ಪಳ್ ನಾಗರಾಜ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಹನುಮಂತರಾಜು, ಪಾಲಿಕೆ ಸದಸ್ಯರಾದ ಮಂಜುಳ ಆದರ್ಶ್, ನಿರ್ಮಲಾ ಶಿವಕುಮಾರ್, ಗಿರಿಜಾ, ಎಚ್. ಮಲ್ಲಿಕಾರ್ಜುನ್ ಹಾಗೂ ಕಾರ್ಯಕರ್ತರು ಇದ್ದರು.
ಭಾರತ ರತ್ನ, ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಜಕೀಯವಾಗಿ ಎಲ್ಲರೂ ಮೆಚ್ಚುವ ನಾಯಕರಾಗಿದ್ದರು. ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಹುಟ್ಟುಹಬ್ಬದ ಈ ದಿನ ಎಲ್ಲರೂ ಅವರ ಉತ್ತಮ ಆದರ್ಶ ಮೈಗೂಡಿಸಿಕೊಂಡು ಪಕ್ಷದ ಸಂಘಟನೆಗೆ ಒತ್ತು ನೀಡಬೇಕು. ಅವರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
-ಜಿ.ಬಿ.ಜ್ಯೋತಿ ಗಣೇಶ್, ಶಾಸಕ