ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ವೈಕುಂಠ ದ್ವಾರ ದರ್ಶನವು ಹೆಚ್ಚಿನ ಭಕ್ತರಿಗೆ ದೊರೆಯಬೇಕೆಂಬ ಕಾರಣದಿಂದ 2023ರ ಜ.2ರಿಂದ 11ರವರೆಗಿನ ಎಲ್ಲಾ ವಿಶೇಷ ದರ್ಶನಗಳು ಮತ್ತು ಆರ್ಜಿತ ಸೇವೆಗಳನ್ನು ಟಿಟಿಡಿ ರದ್ದುಪಡಿಸಿದೆ.
“ವಿಶೇಷವಾಗಿ ಜ.2ರಂದು ವೈಕುಂಠ ಏಕಾದಶಿ ಮತ್ತು ಜ.3ರಂದು ವೈಕುಂಠ ದ್ವಾದಶಿ ಇದೆ. ಅಲ್ಲದೇ ಕಳೆದ ಎರಡು ವರ್ಷಗಳಿಂದ 10 ದಿನಗಳ ಕಾಲ ವೈಕುಂಠ ದ್ವಾರವು ತೆರೆಯಲಾಗುತ್ತಿದೆ. ಹಾಗಾಗಿ ಜ.2ರಿಂದ 11ರವೆರೆಗೆ ವೈಕುಂಠ ದ್ವಾರ ದರ್ಶನ ಲಭ್ಯವಾಗಲಿದೆ,’ ಎಂದು ಟಿಟಿಡಿ ಇಒ ಎ.ವಿ.ಧರ್ಮಾರೆಡ್ಡಿ ತಿಳಿಸಿದರು.
“ಮುಂಜಾನೆಯ ನಿತ್ಯ ಆಚರಣೆಗಳ ನಂತರ ಬೆಳಗ್ಗೆ 5 ಗಂಟೆಗೆ ದರ್ಶನ ಆರಂಭವಾಗಲಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸುಮಾರು 80,000 ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. 300 ರೂ. ಟಿಕೆಟ್, ಶ್ರೀವಾಣಿ ಮತ್ತು ಎಸ್‌ಎಸ್‌ಡಿ ಟೋಕನ್ ಹೊಂದಿರುವ ಭಕ್ತರಿಗೆ ಜಯ-ವಿಜಯ ದ್ವಾರದ ಮೂಲಕ “ಮಹಾ ಲಘು ದರ್ಶನ’ಕ್ಕೆ ಅವಕಾಶ ಕಲ್ಪಿಸಲಾಗುವುದು,’ ಎಂದು ಮಾಹಿತಿ ನೀಡಿದರು.
“ಈ 10 ದಿನಗಳು ಪ್ರತಿದಿನ 25,000 ಭಕ್ತರಿಗೆ ಆನ್‌ಲೈನ್ ಮೂಲಕ 300 ರೂ. ಟಿಕೆಟ್ ವಿತರಿಸಲಾಗುವುದು. ಅಲ್ಲದೇ ತಿರುಪತಿಯ 9 ಸ್ಥಳಗಳಲ್ಲಿ ಹಾಗೂ ತಿರುಮಲದ ಒಂದು ಕಡೆ ಪ್ರತಿನಿತ್ಯ 50,000 ಸರ್ವ ದರ್ಶನ ಟಿಕೆಟ್‌ಗಳನ್ನು ವಿತರಿಸಲಾಗುವುದು. ಇದಕ್ಕೆ ಆಧಾರ್ ಕಡ್ಡಾಯವಾಗಿದೆ. ಜತೆಗೆ ಪ್ರತಿದಿನ 2,000 ಶ್ರೀವಾಣಿ ಟಿಕೆಟ್‌ಗಳನ್ನು ವಿತರಿಸಲಾಗುವುದು,’ ಎಂದು ವಿವರಿಸಿದರು.