ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಹತ್ಯೆಗೈದಿರುವುದು ವಿಜಯಪುರದ ಪರಶುರಾಮ್ ವಾಗ್ಮೋರೆ ಎಂಬುದು “ಪೋಡಿಯಾಟ್ರಿಕ್ ಗಾಟ್ ಅನಾಲಿಸಿಸ್’ ವರದಿಯಿಂದ ದೃಢಪಟ್ಟಿದೆ. ಈ ಮೂಲಕ ಎಸ್‌ಐಟಿಗೆ ಮಹತ್ವದ ಸಾಕ್ಷ್ಯ ದೊರೆತಿದೆ.
ವಿಜಯಪುರದ ಶೂಟರ್ ಪರಶುರಾಮ್ ವಾಗ್ಮೋರೆ ದೇಹದಾಕೃತಿಗೂ ಗೌರಿ ಲಂಕೇಶ್ ಮನೆ ಬಳಿ ಪತ್ತೆಯಾದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದ ವ್ಯಕ್ತಿಯ ದೇಹದ ಆಕೃತಿಗೂ ತಾಳೆ ಆಗುತ್ತಿದ್ದು, ಈತನೇ ಹತ್ಯೆಗೈದಿದ್ದಾನೆ ಎಂದು ಗುಜರಾತ್‌ನ ವಿಧಿ ವಿಜ್ಞಾನ ಪ್ರಯೋಗಾಲಯ ಕೇಂದ್ರದ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದು ಎಸ್‌ಐಟಿ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
2017 ಸೆ.5ರಂದು ರಾತ್ರಿ ಗೌರಿ ಲಂಕೇಶ್, ಕಚೇರಿಯಿಂದ ಮನೆಗೆ ಹೊರಟಾಗ ಅವರನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ಗೌರಿ ಅವರು ಮನೆಯ ಗೇಟ್ ತೆರೆದು ಒಳ ಪ್ರವೇಶಿಸುತ್ತಿದ್ದಂತೆ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಈ ವೇಳೆ ಮನೆ ಬಳಿಯ ಸಿಸಿ ಕ್ಯಾಮೆರಾದಲ್ಲಿ ಹಂತಕರ ಚಲನವಲನಗಳು ಸೆರೆಯಾಗಿತ್ತು. ಆದರೆ, ಅಸ್ಪಷ್ಟವಾಗಿತ್ತು.
ಈ ಪೈಕಿ ಹಂತಕ ಬಂದು ಹೋಗಿರುವು ದೃಶ್ಯವಿರುವ 9 ಸೆಕೆಂಡ್ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇದೇ ವೇಳೆ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಕೆಲ ತಿಂಗಳ ಹಿಂದೆ ವಿಜಯಪುರದ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಿತ್ತು. ಬಳಿಕ ಈತನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಇಡೀ ಕೃತ್ಯವನ್ನು ಮರುಸೃಷ್ಟಿಸಿ ಚಿತ್ರೀಕರಣ ಕೂಡ ಮಾಡಿಕೊಂಡಿತ್ತು.
ಈ ದೃಶ್ಯವಳಿ ಹಾಗೂ ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಕಳೆದ ಜೂನ್‌ನಲ್ಲಿ ಗುಜರಾತ್‌ನ ವಿಧಿ ವಿಜ್ಞಾನ ಪರೀಕ್ಷಾ ಕೇಂದ್ರಕ್ಕೆ ಎಸ್‌ಐಟಿ ಕಳಿಸಿಕೊಟ್ಟಿತ್ತು. ಎರಡೂ ದೃಶ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿರುವ ಗುಜರಾತ್‌ನ ವಿಧಿವಿಜ್ಞಾನ ಪರೀಕ್ಷಾ ಕೇಂದ್ರದ ಅಧಿಕಾರಿಗಳು, ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿ ಹೋದ ವ್ಯಕ್ತಿಯ ದೇಹದ ಚಲನವಲನಕ್ಕೂ ಪರಶುರಾಮ್ ವಾಗ್ಮೋರೆ ದೇಹದ ಆಕೃತಿ ಹಾಗೂ ಚಲನವಲನಕ್ಕೂ ಹೊಲಿಕೆ ಆಗುತ್ತಿದದೆ. ಪಾದಗಳು ಕೂಡ ತಾಳೆಯಾಗಿವೆ ಎಂದು ವರದಿ ನೀಡಿದೆ. ಜತೆಗೆ ವಾಗ್ಮೋರೆಯನ್ನು ಸಹ ನೇರವಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಏನಿದು ಪೋಡಿಯಾಟ್ರಿಕ್ ಗಾಟ್ ಅನಾಲಿಸಿಸ್?: ಪೋಡಿಯಾಟ್ರಿಕ್ ಅಂದರೆ ಪಾದಗಳಿಗೆ ಸಂಬಂಧಿಸಿದ ವೈಜ್ಞಾನಿಕ ಪರೀಕ್ಷೆ. ಗಾಟ್ ಅಂದರೆ ವ್ಯಕ್ತಿಯ ಆಳ್ತನ. ಪ್ರತಿ ವ್ಯಕ್ತಿಯು ನಡೆಯುವ ಶೈಲಿ ಆಧರಿಸಿ ಮಾಡುವ ವಿಶ್ಲೇಷಣೆಯೇ ಪೋಡಿಯಾಟ್ರಿಕ್ ಗಾಟ್ ಅನಾಲಿಸಿಸ್.
ಸಾಮಾನ್ಯವಾಗಿ ಈ ರೀತಿಯ ಪರೀಕ್ಷೆ ಮಾಡುವಾಗ ವ್ಯಕ್ತಿಯ ದೇಹದ ಆಕೃತಿ, ಚಲನವಲನ ಹಾಗೂ ಪಾದದ ರಚನೆ ಕುರಿತು ಸೂಕ್ಷ್ಮವಾಗಿ ಪರಾಮರ್ಶೆ, ಪರೀಕ್ಷೆ ನಡೆಸಲಾಗುತ್ತದೆ. ಸಾಮಾನ್ಯ ಸ್ಥಿತಿ ಹಾಗೂ ವಿಚಲಿತಗೊಂಡ ಸಂದರ್ಭದಲ್ಲಿ ವ್ಯಕ್ತಿಯ ದೇಹ ಹಾಗೂ ಪಾದದ ಚಲನವಲನಗಳ ಹೊಂದಾಣಿಕೆ ಬಗ್ಗೆ ಅಧ್ಯಯನ ಮಾಡಲಾಗುತ್ತದೆ.
ಅದೇ ರೀತಿ ವಾಗ್ಮೋರೆಯನ್ನು ಗುಜರಾತ್‌ನ ವಿಧಿ ವಿಜ್ಞಾನ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದು ಈತನ ದೇಹ ಹಾಗೂ ಪಾದಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಆಗ ಗೌರಿ ಮನೆ ಬಳಿಯ ಸಿಸಿ ಕ್ಯಾಮೆರಾ ದೃಶ್ಯಗಳು ಹಾಗೂ ವಾಗ್ಮೋರೆಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಘಟನೆಯನ್ನು ಮರುಸೃಷ್ಟಿ ಮಾಡಿದ ವಿಡಿಯೋಗಳಿಗೂ ತಾಳೆಯಾಗಿದೆ ಎಂದು ವಿಧಿ ವಿಜ್ಞಾನ ಪರೀಕ್ಷಾಲಯ ವರದಿ ನೀಡಿದೆ.