Advertisement

ಬಯಲಾಟ ಮೂಲೆಗುಂಪಾಗಲು ವಿದ್ಯಾವಂತರೇ ಕಾರಣ

03:10 PM Jul 15, 2017 | |

ದಾವಣಗೆರೆ: ಯಕ್ಷಗಾನ ಕಲೆ ಉಳಿದು, ಬೆಳೆಯುತ್ತಿರುವುದಕ್ಕೇ ವಿದ್ಯಾವಂತರು ಕಾರಣಾದರೆ, ಬಯಲಾಟ ಮೂಲೆ ಗುಂಪಾಗಲೂ ಸಹ ಅವರೇ ಕಾರಣ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ| ಮಲ್ಲಿಕಾರ್ಜುನ ಕಲಮರಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಶುಕ್ರವಾರ ಕುವೆಂಪು ಕನ್ನಡ ಭವನದಲ್ಲಿ ಯಕ್ಷಗಾನ ಬಯಲಾಟ ಕಲಾ ಸಂಭ್ರಮದಲ್ಲಿ ಸಮಾರೋಪ ನುಡಿಗಳನ್ನಾಡಿದ ಅವರು,
ಕರಾವಳಿ ಭಾಗದಲ್ಲಿ ವಿದ್ಯೆ ಕಲಿತು ಸುಶಿಕ್ಷಿತರಾದವರು ಯಕ್ಷಗಾನವನ್ನು ಪ್ರೀತಿಸಿದರು. ಜೊತೆಗೆ ಅದನ್ನು ತಾವೂ ಸಹ ಅಭ್ಯಾಸ ಮಾಡಿಕೊಂಡು ಬಂದರು. ಇದರಿಂದ ಕಲೆ ಉಳಿದಿದ್ದು ಮಾತ್ರವಲ್ಲ, ಒಂದು ಹೊಸ ಮೌಲ್ಯ ಕಂಡುಕೊಂಡಿತು. ಆದರೆ, ಬಯಲಾಟದ
ವಿಷಯದಲ್ಲಿ ಇದು ವ್ಯತಿರಿಕ್ತವಾಯಿತು ಎಂದರು.

ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿದ್ದ ಬಯಲಾಟ ಇತರೆ ಭಾಗಗಳಲ್ಲಿ ಹರಡಿಕೊಳ್ಳುತ್ತಿತ್ತು. ಆದರೆ, ಅಲ್ಲಿನ ಗ್ರಾಮೀಣ
ಯುವ ಜನಾಂಗ ನಗರಕ್ಕೆ ಬಂದು ವಿದ್ಯಾಭ್ಯಾಸ ಕಲಿತ ನಂತರ ಆ ಕಲೆಗೆ ಪ್ರಾಮುಖ್ಯತೆ ಕೊಡಲಿಲ್ಲ. ಇದರಿಂದ ಆ ಕಲೆಗಿದ್ದ ಆರಾಧಕರ ಸಂಖ್ಯೆ ಕಡಮೆಯಾಗುತ್ತಾ ಬಂದಿತು. ಈಗಲೂ ಕೆಲ ನಡು, ಇಳಿ ವಯಸ್ಸಿನವರು ಈ ಬಯಲಾಟದ ಬಗ್ಗೆ ಅಭಿಮಾನ ಹೊಂದಿದ್ದಾರೆ. ಅವರಿಂದಲೇ ಕಲೆ ಇನ್ನೂ ಉಳಿದುಕೊಂಡಿದೆ ಎಂದು ಹೇಳಿದರು.

ಯಕ್ಷಗಾನ ಬಯಲಾಟ ಅಕಾಡೆಮಿ ಯಕ್ಷಗಾನಕ್ಕೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತದೆ ಎಂಬ ಆರೋಪ ಇತ್ತು. ಇದೀಗ
ಎರಡೂ ಬೇರೆ ಬೇರೆ ಆಗುತ್ತಿವೆ. ಎರಡೂ ಕಲೆಗಳಿಗೆ ಸಮಾನ ಪ್ರಾಮುಖ್ಯತೆ ಕೊಡಬೇಕು ಎಂಬುದು ಇದರ ಹಿಂದಿನ ಸದುದ್ದೇಶ.
ಆದರೆ, ಅಕಾಡೆಮಿ ಬೇರೆ ಆದ ನಂತರ ಕಲೆಯ ಪ್ರಸರಣ ಪ್ರಮಾಣ ಕಡಮೆಯಾಗಬಾರದು. ಯಕ್ಷಗಾನ ಕೇವಲ ದಕ್ಷಿಣ ಕರ್ನಾಟಕಕ್ಕೆ,
ಬಯಲಾಟ ಕೇವಲ ಉತ್ತರ ಕರ್ನಾಟಕಕ್ಕೆ ಎಂಬಂತೆ ಆಗಬಾರದು. ಎರಡೂ ಕಲೆಗಳನ್ನೂ ಎಲ್ಲಾ ಕಡೆ ಪಸರಿಸುವಂತಹ ಕೆಲಸವನ್ನು
ಅಕಾಡೆಮಿಗಳು ಮಾಡಬೇಕು ಎಂದು ಅವರು ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಬಾರಿಕೇರ ಕರಿಯಪ್ಪ, ಯಕ್ಷಗಾನ ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ ಎನ್‌.ಎಸ್‌. ರಾಜು, ಯಕ್ಷಗಾನ
ಬಯಲಾಟ ಅಕಾಡೆಮಿಯ ರಿಜಿಸ್ಟಾರ್‌ ಎಸ್‌. ಎಚ್‌. ಶಿವರುದ್ರಪ್ಪ, ಅಕಾಡೆಮಿ ಸದಸ್ಯ ಡಾ| ಬಿ.ಎಂ. ಗುರುನಾಥ್‌ ವೇದಿಕೆಯಲ್ಲಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ಬೆಳಗಾವಿಯ ಶಿವಲಿಂಗಪ್ಪ ಮತ್ತು ತಂಡದವರು ಸಣ್ಣಾಟ, ಸಾಲಿಗ್ರಾಮ ಗಣೇಶ್‌ ಶೆಣೈ ಮತ್ತು
ತಂಡ ಗದಾಯುದ್ಧ ಯಕ್ಷಗಾನ ಪ್ರಸಂಗ, ದಾವಣಗೆರೆಯ ಹನುಮಂತಾಚಾರ್‌ ಮತ್ತು ತಂಡ ದೇವಧೂತ ಪ್ರಸಂಗ ಬಯಲಾಟ
ಪ್ರಸ್ತುತ ಪಡಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next