Advertisement

ವಾಡಿ: ಪಟಾಕಿಯ ಕಿಡಿ ಹೊತ್ತಿ ಶಾಲಾ ಕಟ್ಟಡದ ಮೇಲೆ ಧಗಧಗಿಸಿದ ಅಗ್ನಿ

07:54 PM Mar 05, 2022 | Team Udayavani |

ವಾಡಿ: ಪಟ್ಟಣದ ಖಾಸಗಿ ಶಾಲೆಯೊಂದರ ನಾಲ್ಕು ಅಂತಸ್ಥಿನ ಎತ್ತರದ ಕಟ್ಟಡದ ಮೇಲೆ ಶನಿವಾರ ಅಗ್ನಿ ಅವಘಡ ಸಂಭವಿಸಿ, ಕ್ರೀಡಾ ಸಾಮಾಗ್ರಿಗಳು ಭಸ್ಮಗೊಂಡ ಘಟನೆ ಸಂಭವಿಸಿದೆ.

Advertisement

ಪಟ್ಟಣದ ರೈಲು ನಿಲ್ದಾಣ ಸಮೀಪದ ಬಸವೇಶ್ವರ ವೃತ್ತದಲ್ಲಿರುವ ಮಹಾತ್ಮಾ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಮಾಳಿಗೆಯ ಮೇಲೆ ಶನಿವಾರ ಸಂಜೆ ಈ ದುರಂತ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಯಿಂದ ಹೊರಟ ದಟ್ಟವಾದ ಹೊಗೆ ನಗರದ ಜನರನ್ನು ಬೆಚ್ಚಿಬೀಳಿಸಿತು.

ಶಾಲಾ ಕಟ್ಟಡದ ಮಾಳಿಗೆಯ ಮೇಲೆ ಶನಿವಾರ ಮಧ್ಯಾಹ್ನ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಂಡು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೂರಾರು ಜನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಪಾಲ್ಗೊಂಡಿದ್ದರು ಎನ್ನಲಾಗಿದ್ದು, ಹತ್ತನೇ ತರಗತಿಯ ಮಕ್ಕಳು ಪಟಾಕಿಗಳನ್ನು ಸುಟ್ಟು ಸಂಭ್ರಮಿಸಿದ್ದು,. ಇದೇ ಸ್ಥಳದಲ್ಲಿ ಮಕ್ಕಳಿಂದ ಮಲ್ಲಗಂಭ ಪ್ರದರ್ಶನ ನಡೆದಿದ್ದು, ಮಲ್ಲಗಂಭದ ಕಸರತ್ತಿನ ವೇಳೆ ಸುರಕ್ಷತೆಗಾಗಿ ಹತ್ತಾರು ಗಾದಿಗಳನ್ನು ಹಾಕಲಾಗಿತ್ತು. ಪ್ರದರ್ಶನದ ನಂತರ ಅವುಗಳನ್ನು ಮಾಳಿಗೆ ಮೇಲೆಯೇ ಇಟ್ಟು ಶಿಕ್ಷಕರು ಶಾಲೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ಬಿದ್ದಿದ್ದ ಪಟಾಕಿಯ ಕಿಡಿಯೊಂದು ಗಾದಿಗೆ ತಗುಲಿ ಬೆಂಕಿ ಹತ್ತಿಕೊಂಡಿದೆ. ಪರಿಣಾಮ ಹತ್ತಾರು ಗಾದಿಗಳು ಮತ್ತು ಇತರ ಕ್ರೀಡಾ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next