ವಾಡಿ: ಕೊಳೆ ಮಡುಗಟ್ಟಿ , ಗಬ್ಬು ವಾಸನೆ ಹರಡಿದ್ದ ಎಸಿಸಿ ಕಾರ್ಮಿಕರ ಕಾಲೋನಿ ಅಧಿಕಾರಿಗಳ ದಿಟ್ಟ ಕ್ರಮದಿಂದ ಸ್ವಚ್ಛಗೊಂಡಿದೆ.
ಕಟ್ಟಡದ ಸಂದು-ಸಂದುಗಳಲ್ಲಿ ಬೇರು ಬಿಟ್ಟಿದ್ದ ಗಿಡಮರಗಳಿಗೆ ಕೊಡಲಿ ಪೆಟ್ಟು ಹಾಕಲಾಯಿತು. ಕಸ, ಘನತ್ಯಾಜ್ಯ, ಮುಳ್ಳುಕಂಟಿ ವಿಲೇವಾರಿ ಕಾರ್ಯ ಭರದಿಂದ ಸಾಗುವ ಮೂಲಕ ಕಾರ್ಮಿಕರ ಮನೆಗಳಿಗಂಟಿದ್ದ ದುರ್ಗಂಧಕ್ಕೆ ಕೊನೆಗೂ ಮುಕ್ತಿ ದೊರಕಿತು.
ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿಯ ಕಾರ್ಮಿಕರ ಕಾಲೋನಿ ಕಳೆದ ಹಲವು ತಿಂಗಳುಗಳಿಂದ ಶುಚಿತ್ವದಿಂದ ವಂಚಿತವಾಗಿ ಅನಾರೋಗ್ಯ ವಾತಾವರಣ ಸೃಷ್ಟಿಸಿತ್ತು. ಬಿರುಕುಬಿಟ್ಟ ಕಟ್ಟಡಗಳಿಗೆ ತೇಪೆ ಹಚ್ಚುವ ಕಾರ್ಯ ಮಾತ್ರ ಸಾಗುತ್ತಿತ್ತು. ಬಡಾವಣೆಯ ಹದಗೆಟ್ಟ ಸಿಮೆಂಟ್ ರಸ್ತೆಗಳಿಗೆ ಅಡ್ಡಾದಿಡ್ಡಿ ಡಾಂಬರ್ ತೇಪೆ ಬಳಿಯಲಾಗಿತ್ತು. ವಿಶ್ವದ ಗಮನ ಸೆಳೆದ ಸಿಮೆಂಟ್ ಕಾರ್ಖಾನೆ ಕಾರ್ಮಿಕರ ಮನೆಗಳ ಸುತ್ತಲೂ ಮುಳ್ಳುಕಂಟಿ ಬೆಳೆದಿತ್ತು. ಅಲ್ಲದೇ, ಎಲ್ಲೆಡೆ ಕೊಳೆ ಹರಡಿ, ಘನತ್ಯಾಜ್ಯ, ಹಂದಿ ಮತ್ತು ಬೀದಿ ನಾಯಿಗಳ ಓಡಾಟದಿಂದ ಕಾರ್ಮಿಕರ ನೆಮ್ಮದಿ ಹಾಳಾಗಿತ್ತು. ಗುರುವಾರ ಬೆಳಗ್ಗೆ ಕಾರ್ಮಿಕರು ನಿದ್ದೆಯಿಂದ ಏಳುವ ಮುಂಚೆಯೇ ಕೊಳೆ ವಿಲೇವಾರಿ ಕಾರ್ಯ ಶುರುವಾಗಿತ್ತು. ಟ್ರ್ಯಾಕ್ಟರ್‌ಗಳಲ್ಲಿ ಕಸ ತುಂಬಲಾಗುತ್ತಿತ್ತು. ಕಾಲೋನಿ ನಿರ್ವಹಣೆ ನೋಡಿಕೊಳ್ಳುತ್ತಿದ್ದ ಎಸಿಸಿ ನೌಕರ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು, ಗೋಡೆಗಳ ಸಂದಿನಲ್ಲಿ ಬೆಳೆದಿದ್ದ ಆಲದ ಮರಗಳ ಬಳ್ಳಿಗಳನ್ನು ಕತ್ತರಿಸಲು ಆದೇಶ ನೀಡುತ್ತಿದ್ದರು.
ಇದಕ್ಕೂ ಮುನ್ನ ಎಸಿಸಿ ಘಟಕ ಕಚೇರಿಯಲ್ಲಿ ಕಂಪನಿ ಮುಖ್ಯಸ್ಥ ಕೆ.ಆರ್.ರೆಡ್ಡಿ, ಎಚ್ಆರ್ ಮುಖ್ಯಸ್ಥ ಪುಷ್ಕರ್ ಚೌಧರಿ, ಪ್ತ್ರ್ಯಾಂಟ್ ಆಪರೇಷನ್ ಮುಖ್ಯಸ್ಥ ಜೀತೇಂದ್ರಕುಮಾರ ಸೇರಿದಂತೆ ಇನ್ನುಳಿದ ಆಡಳಿತ ಮಂಡಳಿ ಸದಸ್ಯರು, ಕಾಲೋನಿ ನಿರ್ವಹಣಾ ಸಿಬ್ಬಂದಿಗಳ ಸಭೆ ನಡೆಸಿದರು. ನಂತರ ಕಾರ್ಮಿಕರ ಕಾಲೋನಿ ನಿರ್ವಹಣೆ ಕಾರ್ಯ ಸಮರ್ಪಕವಾಗಿ ನಡೆಯಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಎಚ್ಚೆತ್ತ ಎಸಿಸಿ ಆಡಳಿತ ಮಂಡಳಿಯಿಂದ ಕಾರ್ಮಿಕರ ಕಾಲೋನಿಯ ನೈರ್ಮಲ್ಯ ವ್ಯವಸ್ಥೆ ರಕ್ಷಣೆಯಾಗಿದ್ದು, ಕಾರ್ಮಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಜೂ.12 ರಂದು ‘ಗಬ್ಬು ನಾರುತ್ತಿದೆ ಎಸಿಸಿ ಕಾರ್ಮಿಕರ ಕಾಲೋನಿ’ ಎನ್ನುವ ತಲೆಬರಹದಡಿ ‘ಉದಯವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.