ಮುಂಬಯಿ: ವಡಾಲ ಎನ್‌ಕೆಇಎಸ್ ಡಿಗ್ರಿ ಕಾಲೇಜ್ ಆಫ್ ಆರ್ಟ್ಸ್, ಕಾಮರ್ಸ್ ಆ್ಯಂಡ್ ಸಾಯನ್ಸ್ ಇದರ ವಾರ್ಷಿಕೋತ್ಸವ ಸಂಭ್ರಮವು ಜ. 7 ರಿಂದ ಜ. 11 ರವರೆಗೆ ಐದು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. ಎನ್‌ಕೆಇಎಸ್ ಸೊಸೈಟಿಯ ಅಧ್ಯಕ್ಷ ಪಾರ್ಥಸಾರಥಿ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾರೈಸಿದರು.
ಮೊದಲನೆ ಎರಡು ದಿನ ಕಾಲೇಜಿಗೆ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಕೂಟಗಳನ್ನು ಆಯೋಜಿಸಲಾಗಿತ್ತು. ನಂತರದ ಮೂರು ದಿನ ಅಂತರ್ ಕಾಲೇಜು ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಕೂಟಗಳನ್ನು ಆಯೋಜಿಸಲಾಗಿತ್ತು. ಪ್ರಥಮ ದಿನ ಪಾರಂಪಾರಿಕ ಆಟಗಳಾದ ಲಗೋರಿ, ಹಗ್ಗಜಗ್ಗಾಟ, ಒಳಾಂಗಣ, ಕ್ರಿಕೆಟ್ ಇನ್ನಿತರೇ ಕ್ರೀಡಾಕೂಟಗಳು ನಡೆಯಿತು.
ಎರಡನೇ ದಿನ ನೃತ್ಯ, ಹಾಡುಗಾರಿಕೆ, ಇನ್ನಿತರ ಸ್ಪರ್ಧೆಗಳು ನಡೆದವು . ಮೂರನೇ ದಿನ ಮುಖ ಶೃಂಗಾರ, ಅಡುಗೆ, ರಂಗೋಳಿ, ಮೆಹಂದಿ, ಹಾಡುಗಾರಿಕೆ ಇನ್ನಿತರ ಸ್ಪರ್ಧೆಗಳಿದ್ದವು.
ನಗರದ ಹತ್ತಾರು ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದವು. ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಚಿತ್ರಾ ನಟರಾಜನ್ ಅವರು ಮಾತನಾಡಿ, ಮೊದಲನೇ ವರ್ಷದಲ್ಲಿಯೇ ಈ ಕಾಲೇಜು ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು, ಶ್ಲಾಘನೀಯ ಎಂದರು. ಅಧ್ಯಾಪಕ ವೃಂದದರಾದ ಕು| ಪಲ್ಲವಿ ಚವ್ಹಾಣ್, ಡಯನಾ, ಸರಸ್ವತಿ ಗುಪ್ತಾ, ಅರುಲಾ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ವಿಶ್ವಸ್ತ ಅನಂತ ಬನವಾಸಿ ಅವರು ಮಾತನಾಡಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಕಲಿಕೆಯೊಂದಿಗೆ ಅಲ್ಪಾವಧಿಯ ಉದ್ಯೋಗದಲ್ಲಿ ತೊಡಗಿಸಿಕೊಂಡ ಇಲ್ಲಿನ ವಿದ್ಯಾರ್ಥಿಗಳಿಗೆ ಸಂಸ್ಥೆ ಸಹಕರಿಸುತ್ತಿರುವುದು ಅಭಿನಂದನೀಯವಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಶಶಿಕಾಂತ ಜೋಶಿ ಅವರು ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ನಿರ್ದೇಶನದಲ್ಲಿ ಒಟ್ಟುಗೂಡಿ ಈ 5 ದಿನದ ಕಾರ್ಯಕ್ರಮ ಹೇಗೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದು ಇನ್ನಿತರೇ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದೀರಿ ಎಂದು ಹೇಳಿದರು.
ಸಂಸ್ಥೆಯ ಕೋಶಾಧ್ಯಕ್ಷ ಭವಾನಿ ಭಾರ್ಗವ ಅವರು ಮಾತನಾಡಿ, ಮುಂಬರುವ ವರ್ಷಗಳಲ್ಲಿ ಇದೇ ರೀತಿ ಕಾಲೇಜು ಎಲ್ಲಾ ವಿಭಾಗಗಳಲ್ಲಿ ಮುಂದೆ ಬರಲಿ ಎಂದು ಹಾರೈಸಿದರು. ವಿದ್ಯಾರ್ಥಿನಿ ಸಾನಿಯಾ ಅವರು ವಂದಿಸಿದರು.