Advertisement

“ಸಂಧಾನ’ವಿಫ‌ಲ: ಆದೇಶ ಸಿಗುವವರೆಗೆ ಪಾದಯಾತ್ರೆ ಸ್ಥಗಿತವಿಲ್ಲ ಎಂದ ಶ್ರೀಗಳು

12:43 AM Feb 05, 2021 | Team Udayavani |

ಚಿತ್ರದುರ್ಗ: ಕುರುಬ ಸಮುದಾಯಕ್ಕೆ ಎಸ್‌ಟಿ ಹಾಗೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಿಗೆ ಆಗ್ರಹಿಸಿ ಉಭಯ ಸಮುದಾಯದ ಶ್ರೀಗಳ ಪಾದಯಾತ್ರೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಗುರುವಾರ ಸರಕಾರದ ಸಂದೇಶ ಹೊತ್ತು ಬಸವಜಯ ಮೃತ್ಯುಂಜಯ ಶ್ರೀ ಹಾಗೂ ವಚನಾನಂದ ಶ್ರೀ ಬಳಿಗೆ ತೆರಳಿದ್ದ ಸಚಿವರಾದ ಮುರುಗೇಶ ನಿರಾಣಿ ಹಾಗೂ ಸಿ.ಸಿ. ಪಾಟೀಲ್‌ ಬರಿಗೈಯಲ್ಲಿ ಮರಳಿದ್ದಾರೆ.

Advertisement

ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಿಗೆ ಆಗ್ರಹಿಸಿ ನಿರಂಜನಾನಂದ ಪುರಿ ಶ್ರೀ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಈಗಾಗಲೇ ಬೆಂಗಳೂರು ತಲುಪಿದ್ದರೆ, ಪಂಚಮಸಾಲಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 2ಎ ಮೀಸಲಿಗೆ ಆಗ್ರಹಿಸಿ ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಶ್ರೀ ನೇತೃತ್ವದ ಪಾದಯಾತ್ರೆ ಕೂಡ ರಾಜಧಾನಿ ಸನಿಹಲ್ಲೇ ಬಂದು ನಿಂತಿದೆ. ಇದರಿಂದ ಎಚ್ಚೆತ್ತ ಸಿಎಂ ಗುರುವಾರ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹಾಗೂ ಸಣ್ಣ ಕೈಗಾರಿಕೆ ಸಚಿವ ಸಿ.ಸಿ.ಪಾಟೀಲ್‌ ನೇತೃತ್ವದ ನಿಯೋಗವನ್ನು ಸಂಧಾನಕ್ಕೆ ಕಳುಹಿಸಿದ್ದರು. ಆದರೆ ಸರಕಾರದ ಆದೇಶ ಕೈಗೆ ಸಿಗುವವರೆಗೆ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ಶ್ರೀಗಳು ಹೇಳಿದ್ದಾರೆ.

ಯಾರ್ಯಾರಿದ್ದರು?
ಸಚಿವರಾದ ಸಿ.ಸಿ.ಪಾಟೀಲ್‌, ಮುರುಗೇಶ್‌ ನಿರಾಣಿ, ಶಾಸಕರಾದ ಅರವಿಂದ ಬೆಲ್ಲದ, ಆರ್‌. ಶಂಕರ್‌, ಮಹೇಶ ಕುಮಟಳ್ಳಿ, ಅರುಣಕುಮಾರ್‌ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಮೋಹನ ಲಿಂಬಿಕಾಯಿ ಮತ್ತಿತರರು ನಿಯೋಗದಲ್ಲಿದ್ದರು.

ಸಂದೇಶ ಏನು?
ಹಿರಿಯೂರು ತಾಲೂಕಿನ ಐಮಂಗಲ ಬಳಿ ಉಭಯ ಶ್ರೀಗಳನ್ನು ಸಚಿವರು ಹಾಗೂ ಶಾಸಕರ ನಿಯೋಗ ಭೇಟಿಯಾಯಿತು. ಸಮುದಾಯದ ಬೇಡಿಕೆಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ನಿಟ್ಟಿನಲ್ಲಿ ಆಡಳಿತಾತ್ಮಕ ಪ್ರಕ್ರಿಯೆ ನಡೆಸಲು ಒಪ್ಪಿದ್ದಾರೆ. ಶಾಶ್ವತ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಿಗೆ ಈ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಆದೇಶ ನೀಡಲಿದ್ದಾರೆ ಎಂದು ವಿವರಿಸಿದರು.

ಶ್ರೀಗಳು ಏನೆಂದರು?
ಇದನ್ನು ನಯವಾಗಿಯೇ ತಿರಸ್ಕರಿಸಿದ ಉಭಯ ಶ್ರೀಗಳು, ಸರಕಾರ ನಮ್ಮ ಮನವಿಗೆ ಸ್ಪಂದಿಸಿರುವುದು ಉತ್ತಮ ಬೆಳವಣಿಗೆ. ಆದರೆ, ಮೀಸಲಾತಿ ಆದೇಶ ಪ್ರತಿ ನಮ್ಮ ಕೈಗೆ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ. ಪಾದಯಾತ್ರೆ ಬೆಂಗಳೂರು ತಲುಪುವುದ ರೊಳಗೆ ಸರ್ಕಾರದ ಆದೇಶದ ಪ್ರತಿ ನಮ್ಮ ಕೈ ಸೇರು ವಂತಾಗಲಿ. ಈ ನಿಟ್ಟಿನಲ್ಲಿ ಸಮುದಾಯದ ಎಲ್ಲ ಸಚಿವರು, ಶಾಸಕರು ಪ್ರಯತ್ನ ಮಾಡಲಿ ಎಂದು ಸ್ಪಷ್ಟಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next