Advertisement

ವಚನ ಸಾಹಿತ್ಯ ಸಂರಕ್ಷಕ ಮಡಿವಾಳರ ಮಾಚಯ್ಯ

02:58 AM Feb 01, 2018 | |

12ನೇ ಶತಮಾನದ ಶಿವ ಶರಣರು ಬರೆದ ವಚನಗಳನ್ನು ಜೋಪಾನವಾಗಿಡಲು ಮಾಚಯ್ಯ ನವರಲ್ಲಿ ನೀಡುತ್ತಿದ್ದರಂತೆ. ವಚನಗಳನ್ನು ಧ್ವಂಸ ಮಾಡಲು ಹಲವಾರು ಬಾರಿ ರಾಜನಾದ ಬಿಜ್ಜಳ ದಾಳಿ ಮಾಡಿದಾಗ ಬಿಜ್ಜಳನ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿ ಶಿವಶರಣರ ಲಕ್ಷಾಂತರ ವಚನಗಳನ್ನು ಸಂರಕ್ಷಿಸಿದ ಖ್ಯಾತಿ ಮಾಚಿದೇವರಿಗೆ ಸಲ್ಲುತ್ತದೆ.

Advertisement

ಇಂದು ಗುರು ಮಾಚಿದೇವರ ಜನ್ಮದಿನ. ಈ ವರ್ಷದಿಂದ ಫೆಬ್ರವರಿ 1ರಂದು ಕರ್ನಾಟಕ ಸರಕಾರ ಮಾಚಿದೇವರ ಜನ್ಮ ದಿನಾಚರಣೆಯನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಮಾಡಲು ಆದೇಶ ನೀಡಿರುವುದು ನಿಜಶರಣನಿಗೆ ಸಂದ ನಿಜವಾದ ಗೌರವವಾಗಿದೆ. 

ಮಡಿವಾಳ ಸಮಾಜದ ಮೂಲ ಪುರುಷ ಕಲ್ಯಾಣ ನಾಡಿನ ಕ್ರಾಂತಿ ಪುರುಷ ವಚನ ಸಾಹಿತ್ಯ ಸಂರಕ್ಷಕ ಮಡಿವಾಳ ಮಾಚಿ ದೇವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಿಪ್ಪರಿಗೆಯಲ್ಲಿ ಜನಿಸಿದವರು. ಕ್ರಿ. ಶ. 1120ರಿಂದ 1230ರ ಒಳಗೆ ಅವರ ಜನನ ವಾಗಿರಬಹುದೆಂದು ಊಹಿಸಲಾಗಿದೆ. 

ಕ್ರಿ. ಶ. 12ನೇ ಶತಮಾನದಲ್ಲಿ ಹಿಂದುಳಿದ ಹಾಗೂ ಶ್ರಮಜೀವಿ ಗಳ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇ ವರು ಒಬ್ಬರು. ಮೇಲುಕೀಲು, ಬಡವರು, ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಗೊಳಗಾದವರ ಬಗ್ಗೆ ಚಿಂತಿಸಿ, ವ್ಯಕ್ತಿ – ವ್ಯಕ್ತಿಗಳ ನಡುವೆ ಇರುವ ಅಂತರವನ್ನು ಹೋಗಲಾಡಿಸಲು ಹೋರಾಡಿ ದರು. ಆಧ್ಯಾತ್ಮಿಕ ಪ್ರವೃತ್ತಿಯ ಮುಖಾಂತರ, ಬಾಹ್ಯ ಕರ್ಮಗಳ ಮುಖಾಂತರ ಜನರಲ್ಲಿ ಭಕ್ತಿ ಪ್ರಧಾನ ಆಧ್ಯಾತ್ಮಿಕ ಚಿಂತನೆಗಳನ್ನು ಮೂಡಿಸಿ ಮನಸ್ಸಿನಲ್ಲಿದ್ದ ಭಕ್ತಿಯ ಬುಗ್ಗೆ ಬಾಯಿ ತೆರೆದು ಪ್ರವಾಹವಾಗಿ ವಚನಗಳ ಮುಖಾಂತರ ಹೊರಹೊಮ್ಮಿಸಿದರು. ಮಡಿವಾಳ ಮಾಚಯ್ಯನವರು ಸುಮಾರು 3 ಲಕ್ಷಕ್ಕೂ ಅಧಿಕ ವಚನಗಳನ್ನು ಬರೆದಿದ್ದಾರೆ. ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ಕೇವಲ 345 ವಚನಗಳು ಲಭ್ಯವಾಗಿರುತ್ತದೆ. ಮಾಚಿದೇವರ ವಚನದ ಅಂಕಿತನಾಮ “ಕಲಿದೇವರ ದೇವಾ’ ಎನ್ನುವುದಾಗಿದೆ.

“ಎತ್ತೆತ್ತ ನೋಡಿದಡೆತ್ತತ್ತ ಬಸವನೆಂಬ ಬಳ್ಳಿ 
ಎತ್ತಿ ನೋಡಿದಡೆ ಲಿಂಗ ಎಂಬ ಗೊಂಚಲು
ಒತ್ತಿ ಹಿಂಡಿದಡೆ ಭಕ್ತಿ ಎಂಬ ರಸವಯ್ಯ
ಆಯತವು ಬಸವಣ್ಣನಿಂದ ಸ್ವಾಯತವು ಬಸವಣ್ಣನಿಂದ ಸನ್ನಿಹಿತವು ಬಸವಣ್ಣನಿಂದ
ಗುರು ಬಸವಣ್ಣನಿಂದ ಲಿಂಗ ಬಸವಣ್ಣನಿಂದ ಜಂಗಮ ಬಸವಣ್ಣನಿಂದ
ಪಾದೋದಕ ಬಸವಣ್ಣನಿಂದ ಪ್ರಸಾದ ಬಸವಣ್ಣನಿಂದ
ಅತ್ತ ಬಲ್ಲಡೆ ನೀವು ಹೇಳಿರೇ ಇತ್ತ ಬಲ್ಲಡೆ ನೀವು ಕೇಳಿರೇ
ಬಸವಾ ಬಸವಾ ಬಸವಾ ಎಂದು
ಮಜ್ಜನಕ್ಕರೆಯದವನ ಭಕ್ತಿ ಶೂನ್ಯ ಕಾಣಾ ಕಲಿದೇವರ ದೇವಾ’ 
ಎನ್ನುವ ತನ್ನ ವಚನದ ಮುಖೇನ ಎಲ್ಲಾ ಕಡೆ ಬಸವಣ್ಣನವರನ್ನೇ ಕಾಣುವುದನ್ನು ವಿವರಿಸಿದ್ದಾರೆ.

Advertisement

ಮಾಚಿದೇವರ ಹುಟ್ಟು 
ಮಾಚಿದೇವರು ವೀರಭದ್ರ ಅವತಾರಿ ಎನ್ನುವುದು ವಚನ ಮತ್ತು ಚರಿತ್ರೆಯಿಂದ ನಮಗೆ ತಿಳಿದು ಬರುತ್ತದೆ. ದಕ್ಷ ಬ್ರಹ್ಮನು ನಿರೀಶ್ವರ ಯಾಗವನ್ನು ಮಾಡಲು ನಿರ್ಧರಿಸಿದನು. ಮಗಳು ಮತ್ತು ಅಳಿಯನಾದ ದಾಕ್ಷಾಯಿಣಿ ಮತ್ತು ಶಿವನನ್ನು ಯಾಗಕ್ಕೆ ಆಮಂತ್ರಿಸಲಿಲ್ಲ. ಇದನ್ನು ತಿಳಿದ ದಾಕ್ಷಾಯಿಣಿಯು ಯಾಗ ಶಾಲೆಗೆ ಬಂದು ಯಜ್ಞದಲ್ಲಿ ಪಾಲ್ಗೊಂಡಾಗ ದಕ್ಷನು ಅವಳ ಪತಿ ಈಶ್ವರನನ್ನು ಅವಮಾನಗೊಳಿಸಿದನು. ಅದನ್ನು ಕಂಡು ತಡೆಯಲಾರದೆ ದಾಕ್ಷಾಯಿಣಿಯು ಅದೇ ಹೋಮಕುಂಡಲಕ್ಕೆ ಹಾರಿದಳು. ಸುದ್ದಿ ತಿಳಿದ ಶಿವನ ಕೋಪ ಹಿಮ್ಮಡಿಯಾಗಿ ವೀರಭದ್ರನನ್ನು ಸೃಷ್ಟಿಸಿ ದಕ್ಷನ ಯಜ್ಞವನ್ನು ನಾಶಗೊಳಿಸಲು ನೇಮಿಸಿದನು. ಶಿವನ ಆಜ್ಞೆಯಂತೆ ದಕ್ಷನ ತಲೆಯನ್ನೇ ಯಜ್ಞಕುಂಡಕ್ಕೆ ಆಹುತಿ ನೀಡಿ ಯಜ್ಞವನ್ನು ಭಂಗಗೊಳಿಸಿ ಮತ್ತೆ ಕೈಲಾಸವನ್ನು ಸೇರಿದನು. ವಿಜಯದ ಉನ್ಮಾದ ದಲ್ಲಿದ್ದ ವೀರಭದ್ರನು ಪರಶಿವನ ಸಭೆಯನ್ನು ಪ್ರವೇಶಿಸಿದಾಗ ರಕ್ತಸಿಕ್ತವಾದ ಉತ್ತರೀಯದ ಸೆರಗು ಶಿವಭಕ್ತನೊಬ್ಬನಿಗೆ ತಾಗಿತು. ಕೋಪಗೊಂಡ ಶಿವನು ವೀರಭದ್ರನಿಗೆ ಶಾಪ ನೀಡಿ ಭೂಲೋಕದಲ್ಲಿ ಶಿವಭಕ್ತರ ಮೈಲಿಗೆಯ ವಸ್ತ್ರಗಳನ್ನು ಶುಚಿಗೊಳಿಸಿ ಮಡಿ ಮಾಡಿ ಬಾ ಎಂದು ಆದೇಶ ನೀಡಿದನು. ಬಿಜಾಪುರ ಜಿಲ್ಲೆಯ ದೇವರ ಹಿಪ್ಪರಿಗೆಯಲ್ಲಿ ಪರ್ವತಯ್ಯ ಮತ್ತು ಸುಜ್ಞಾನಾಂಬಿಕೆಯ ಮಗನಾಗಿ ವೀರಭದ್ರ ಜನಿಸಿದನು ಎಂಬ ಪ್ರಚಲಿತ ನಂಬಿಕೆಯಿದೆ. ಹಿಪ್ಪರಿಗೆಯಲ್ಲಿ ಮಾಚಿದೇವರ ದೇವಸ್ಥಾನವಿದ್ದು, ಇಂದಿಗೂ ಅಲ್ಲಿ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.

ವಚನ ಸಾಹಿತ್ಯದ ಸಂರಕ್ಷಣೆ 
ಮಡಿವಾಳ ಮಾಚಿದೇವರು ಬಸವಣ್ಣನವರಿಗಿಂತ ಹಿರಿಯರು. ಬಸವಣ್ಣನವರ ಎಲ್ಲಾ ಸಮಾಜ ಸುಧಾರಕ ಚಟುವಟಿಕೆಗಳಲ್ಲಿ ಅತ್ಯಂತ ಸಮೀಪದಲ್ಲಿದ್ದು ಸಹಕರಿಸುತ್ತಿದ್ದರು. ಬಸವೇಶ್ವರರು ಮಾಚಿದೇವರನ್ನು “ಮಾಚಿ ತಂದೆ’ ಎಂದು ಸಂಭೋದಿಸುತ್ತಿದ್ದರು. ವಿಶ್ವದ ಮೊದಲನೆಯ ಸಂಸತ್‌ ಎಂದೇ ಹೆಸರಾದ ಅನುಭವ ಮಂಟಪವನ್ನು ಬಸವೇಶ್ವರರು ಸ್ಥಾಪಿಸಿದಾಗ ಅದರ ಎಲ್ಲಾ ಉಸ್ತುವಾರಿಯನ್ನು ಮಾಚಿದೇವರೇ ನೋಡಿಕೊಳ್ಳುತ್ತಿದ್ದರು ಎನ್ನು ವುದು ಇತ್ತೀಚೆಗೆ ಸಂಶೋಧಕರ ಮುಖೇನ ಲಭಿಸಿದ ಕೆಲವು ದಾಖಲೆಯಲ್ಲಿ ಕಂಡುಬರುತ್ತದೆ. 12ನೇ ಶತಮಾನದ ಶಿವ ಶರಣರು ಬರೆದ ವಚನಗಳನ್ನು ಜೋಪಾನವಾಗಿಡಲು ಮಾಚಯ್ಯ ನವರಲ್ಲಿ ನೀಡುತ್ತಿದ್ದರಂತೆ. ವಚನಗಳನ್ನು ಧ್ವಂಸ ಮಾಡಲು ಹಲವಾರು ಬಾರಿ ರಾಜನಾದ ಬಿಜ್ಜಳ ದಾಳಿ ಮಾಡಿದಾಗ ಬಿಜ್ಜಳನ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿ ಶಿವಶರಣರ ಲಕ್ಷಾಂತರ ವಚನಗಳನ್ನು ಸಂರಕ್ಷಿಸಿದ ಖ್ಯಾತಿ ಮಾಚಿದೇವರಿಗೆ ಸಲ್ಲುತ್ತದೆ.

ಮಡಿವಾಳ ಜನಾಂಗ 
ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಒಂದು ರಾಜ್ಯಮಟ್ಟದ ಮಡಿವಾಳ ಜನಾಂಗದ ಸಮಾವೇಶದಲ್ಲಿ 5 ಲಕ್ಷಕ್ಕೂ ಅಧಿಕ ಮಡಿವಾಳರು ಪಾಲ್ಗೊಂಡಿದ್ದರು. ಒಂದು ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಮಡಿವಾಳ ಜನಾಂಗವಿದೆ. ಈ ರಾಷ್ಟ್ರದ 18 ರಾಜ್ಯಗಳಲ್ಲಿ ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದು ಕರ್ನಾಟಕದಲ್ಲಿಯೂ ಈ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ನಿರಂತರ ಹೋರಾಟ ನಡೆಯುತ್ತಲೇ ಬಂದಿರುತ್ತದೆ. ಪ್ರಸ್ತುತ ಈ ಜನಾಂಗ ಪ್ರವರ್ಗ 2ಎ ಯಲ್ಲಿ ಗುರುತಿಸಿಕೊಂಡಿದೆ.

ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ಭಕ್ತಿ ಭಂಡಾರಿ ಬಸವಣ್ಣನವರು ತಮ್ಮ ವಚನದಲ್ಲಿ 
“ಎನ್ನ ಕಾಯಕವ ಶುದ್ಧ ಮಾಡಿದವ ಮಡಿವಾಳ
ಎನ್ನ ಮನವ ನಿರ್ಮಲ ಮಾಡಿದಾತ ಮಡಿವಾಳ
ಎನ್ನ ಅಂತರಂಗವ ಬೆಳಗಿದಾತ ಮಡಿವಾಳ
ಎನ್ನ ಬಹಿರಂಗವ ಬೆಳಗಿದಾತ ಮಡಿವಾಳ
ಕೂಡಲ ಸಂಗಮದೇವ ಎನ್ನ ನಿಮಗೆ ಯೋಗ್ಯವ ಮಡಿದಾತ ಮಡಿವಾಳ’ 

ಎಂದು ಹೇಳಿದ್ದಾರೆ. ಸುಮಾರು 9 ವರ್ಷಗಳ ಹಿಂದೆ ಗುರು ಮಾಚಿ ದೇವರ ಮಹಾ ಸಂಸ್ಥಾನದ ಮಠವನ್ನು ಸ್ಥಾಪಿಸಲು 21ನೇ ಶತಮಾನದ ಶರಣ ಸಂಸ್ಕೃತಿಯ ಯುಗಪುರುಷ ಡಾ| ಶಿವ ಮೂರ್ತಿ ಮುರುಗ ಶರಣರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮದ ಸಂದರ್ಭದಲ್ಲಿ ಅಂದಿನ ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಲು ಬಂದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ರಾಜಕಾರಣಿಗಳು ಮತ್ತು ಮಡಿವಾಳರನ್ನು ಉದ್ದೇಶಿಸಿ “ಎಲ್ಲಾ ರಾಜಕಾರಣಿಗಳು ಮಡಿವಾಳರಂತೆ ಆಗಬೇಕು’ ಎಂದು ಹೇಳಿದ್ದರು. ಅಂದರೆ ಮಡಿವಾಳರು ಬಟ್ಟೆಗಳನ್ನು ಹೇಗೆ ಶುದ್ಧೀಕರಣ ಮಾಡುತ್ತಾರೋ ಅದೇ ರೀತಿ ರಾಜಕಾರಣಿಗಳು ಸಮಾಜವನ್ನು ಕೋಮು, ಗಲಭೆ ಭ್ರಷ್ಟಾಚಾರಗಳಿಂದ ಶುದ್ಧ ಮಾಡಬೇಕೆನ್ನುವುದು ಶ್ರೀಗಳ ಮಾತಿನ ಒಳ ಅರ್ಥ. ವಿಶ್ವ ಧರ್ಮದ ನೈತಿಕ ಆಚರಣೆ ತತ್ವಗಳ ಮೇಲೆ ಶಿವಶರಣರು ಸೃಷ್ಟಿಸಿದ ವಚನಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆೆ. ಶಿವಶರಣರು ಬೋಧಿಸಿದ ತತ್ವಗಳನ್ನು ಪ್ರಪಂಚದ ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ರೂಢಿಸಿಕೊಂಡು ಬಂದಾಗ ಬದುಕಿನಲ್ಲಿ ಏಕತೆಯನ್ನು  ರೂಪಿಸಿಕೊಂಡು ಮಾನವೀಯ ಮೌಲ್ಯಗಳ ಅಡಿಯಲ್ಲಿ ನೆಮ್ಮದಿಯ ಬದುಕನ್ನು ಕಾಣಬಹುದು. ಶಿವಶರಣರು ಸಾರಿದ ತತ್ವಗಳು ಪ್ರಪಂಚದ ಎಲ್ಲರೂ ಪಾಲಿಸಲೇಬೇಕಾದ ಮನುಷ್ಯ ಜೀವನದ ಸೂತ್ರಗಳಾಗಿವೆ. ಶಿವಶರಣರ ಆದರ್ಶ ತತ್ವಗಳು, ವಿಚಾರಧಾರೆಗಳು ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿದೆ. ಶಿವಶರಣರ ವಚನ ಸಾಹಿತ್ಯವನ್ನು ಸಂರಕ್ಷಿಸಿದ ಮಡಿವಾಳ ಮಾಚಿದೇವರ ಜಯಂತೋತ್ಸವವನ್ನು ಸರಕಾರದ ಕಾರ್ಯಕ್ರಮವನ್ನಾಗಿ ಆಚರಿಸಲು ಕಾರಣೀಭೂತರಾದ ಸರಕಾರಕ್ಕೆ ನಾಡಿನ ಸಮಸ್ತ ಮಡಿವಾಳ ಜನಾಂಗ ಋಣಿಯಾಗಿದೆ.

ಎಚ್‌. ಆನಂದ ಮಡಿವಾಳ (ನ್ಯಾಯವಾದಿ)

Advertisement

Udayavani is now on Telegram. Click here to join our channel and stay updated with the latest news.

Next