ಬೀದರ್: ಗುರುನಾನಕ ಪಬ್ಲಿಕ್ ಸ್ಕೂಲ್ ಸ್ಥಾಪನೆಯ ಸುವರ್ಣ ಮಹೋತ್ಸವ ಅಂಗವಾಗಿ ನಗರದಲ್ಲಿ ರವಿವಾರ (ಜ.12) ಆಯೋಜಿಸಿದ್ದ ‘ಬೀದರ್ ಮ್ಯಾರಥಾನ್ʼಗೆ ಖ್ಯಾತ ಬಾಲಿವುಡ್ ನಟ, ನಿರ್ದೇಶಕ ಸೋನು ಸೂದ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಚಾಲನೆ ನೀಡಿದರು.
ಇಲ್ಲಿನ ನೆಹರೂ ಕ್ರೀಡಾಂಗಣದಿಂದ 21 ಕಿ.ಮೀ, 10 ಕಿ.ಮೀ, 5 ಕಿ.ಮೀ. ಮತ್ತು 3 ಕಿ.ಮೀ. ಪ್ರತ್ಯೇಕ ಮ್ಯಾರಾಥಾನ್ ನಡೆದವು. ಕ್ರೀಡಾಂಗಣದಿಂದ ಶುರುವಾದ ಓಟವು ಮಡಿವಾಳ ವೃತ್ತ, ಬಹುಮನಿ ಕೋಟೆ, ಗವಾನ್ ಚೌಕ್, ಚೌಬಾರಾ, ಕರ್ನಾಟಕ ಕಾಲೇಜು, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಮೈಲೂರು ಕ್ರಾಸ್, ಜಿಎನ್‌ಡಿ ಇಂಜಿನಿಯರಿಂಗ್ ಕಾಲೇಜ್ ಮತ್ತು ರಿಂಗ್ ರಸ್ತೆ ಮಾರ್ಗವಾಗಿ ಪುನ: ನೆಹರೂ ಕ್ರೀಡಾಂಗಣಕ್ಕೆ ಬಂದು ಮುಕ್ತಾಯಗೊಂಡಿತು.
ಈ ವೇಳೆ ಮಾತನಾಡಿದ ನಟ ಸೋನು ಸೂದ್, ಕ್ರೀಡೆ ಮತ್ತು ಆರೋಗ್ಯದಿಂದ ಭಾರತ ಸದೃಢವಾಗುತ್ತದೆ. ಶಿಕ್ಷಣದೊಂದಿಗೆ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಬೇಕು. ವ್ಯಾಯಾಮ ಮಾಡಿ ಆರೋಗ್ಯ ಸದೃಢವಾಗಿ ಇಟ್ಟುಕೊಳ್ಳಬೇಕು. ಮ್ಯಾರಾಥಾನ್‌ನಂತ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಬೇರೆಯವರಿಗೆ ಸಹಾಯ ಮಾಡುವುದನ್ನು ರೂಢಿಸಿಕೊಳ್ಳಬೇಕು. ನಾನು ಬೇರೆಯವರಿಗೆ ಸಹಾಯ ಮಾಡಿದ್ದು ವ್ಯರ್ಥ ಹೋಗುವುದಿಲ್ಲ. ದೇವರು ಅದರ ಹಲವು ಪಟ್ಟು ನಮಗೆ ಕೊಡುತ್ತಾನೆ ಎಂದು ಹೇಳಿದರು.
ಸಾಧನೆ ಮಾಡಬೇಕು ಎನಿಸಿದರೆ ಇಂದೇ ಉತ್ಸಾಹದಿಂದ ಪ್ರಾರಂಭ ಮಾಡಬೇಕು. ನಾಳೆಯವರೆಗೆ ಕಾಯಬಾರದು. ತನಗಾಗಿ ಎಲ್ಲರೂ ಬದುಕುತ್ತಾರೆ. ಆದರೆ ಸಮಾಜಕ್ಕಾಗಿ, ದೇಶಕ್ಕಾಗಿ ಬದುಕುವವರ ಸಂಖ್ಯೆ ಕಡಿಮೆಯಾಗಿದೆ. ದೇಶಕ್ಕೆ ಏನಾದರೂ ಕೊಡುಗೆ ನೀಡಿ ಹೆಸರು ಉಳಿಸಿಕೊಳ್ಳಬೇಕು. ಪುಸ್ತಕ ಮುಚ್ಚುವ ವ್ಯಕ್ತಿಗಳಾಗದೆ ಪುಟಗಳನ್ನು ತೆರೆದು ಓದುವ ಆದರ್ಶ ಸಾಧಕರಾಗಬೇಕೆಂದು ಮಕ್ಕಳಿಗೆ ಕರೆ ನೀಡಿದರು.
ಕೋವಿಡ್ ಸಂದರ್ಭದಲ್ಲಿ ನಾವು ಮಾಡಿದ ಕಾರ್ಯ ಜನಮೆಚ್ಚುಗೆಗೆ ಕಾರಣವಾಗಿದೆ. ಗುರುನಾನಕ್ ಶಿಕ್ಷಣ ಸಂಸ್ಥೆ ಮುಖ್ಯಸ್ಥರು ಆದೇಶ ಮಾಡಿದರೆ ನಮ್ಮ ಜನಸೇವೆ ಬೀದರ ಜಿಲ್ಲೆಗೂ ವಿಸ್ತರಿಸಲಾಗುವುದು. ದೇಶಕ್ಕೆ ಏನಾದರೂ ಕೊಡುಗೆ ನೀಡಿ ಹೆಸರು ಉಳಿಸಿಕೊಳ್ಳಬೇಕು. ಪುಸ್ತಕ ಮುಚ್ಚುವ ವ್ಯಕ್ತಿಗಳಾಗದೆ ಪುಟಗಳನ್ನು ತೆರೆದು ಓದುವ ಆದರ್ಶ ಸಾಧಕರಾಗಬೇಕು. ಸಾಧನೆ ಮಾಡಬೇಕು ಎನಿಸಿದರೆ ಇಂದೇ ಉತ್ಸಾಹದಿಂದ ಪ್ರಾರಂಭ ಮಾಡಬೇಕು. ನಾಳೆವರೆಗೆ ಕಾಯಬಾರದು. ತನಗಾಗಿ ಎಲ್ಲರೂ ಬದುಕುತ್ತಾರೆ. ಆದರೆ ಸಮಾಜಕ್ಕಾಗಿ, ದೇಶಕ್ಕಾಗಿ ಬದುಕುವವರ ಸಂಖ್ಯೆ ಕಡಿಮೆಯಾಗಿರುವುದು ಬೇಸರದ ಸಂಗತಿ ಎಂದು ಸೋನು ಸೂದ್ ಹೇಳಿದರು.
ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ಮಾತನಾಡಿ, ಮ್ಯಾರಥಾನ್‌ನಲ್ಲಿ ಎರಡು ಸಾವಿರ ಜನರು ನೊಂದಣಿ ಮಾಡಿಸಿಕೊಂಡಿದ್ದಾರೆ. ಸೋನು ಸೂದ್ ಅವರು ಬೀದರ್ ಗೆ ಬಂದಿದ್ದು ಖುಷಿ ಎನಿಸಿದೆ. ಅವರ ಸಮಾಜಮುಖಿ ಕಾರ್ಯ ಮತ್ತು ಆದರ್ಶಗಳು ಇತರರಿಗೆ ಮಾದರಿಯಾಗಿವೆ. ತನ್ನ ಹಿಂದೆ ಯಾರೋ ಇದ್ದಾರೆ ಎಂದು ಬೆಳೆಯದೆ, ಸ್ವಯಂ ಆತ್ಮವಿಶ್ವಾಸದಿಂದ ಮತ್ತು ಭರವಸೆಯಿಂದ ಸಾಧನೆ ಮಾಡಬೇಕು. ಸಾಧನೆಗೆ ಸಂಕ್ಷಿಪ್ತ ಮಾರ್ಗ ಹುಡುಕದೆ ಸತತ ಪರಿಶ್ರಮ ಮತ್ತು ಸಮಯಪಾಲನೆಯಿಂದ ಮುಂದೆ ಬರಬೇಕೆಂದು ಮಕ್ಕಳಿಗೆ ಹುರಿದುಂಬಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ. ಎಸ್. ಬಲಬೀರಸಿಂಗ್, ಬೆಳಗಾವಿ ಜಿ.ಪಂ. ಸಿಇಒ ರಾಹುಲ್ ಶಿಂಧೆ, ಪುನೀತ್ ಸಿಂಗ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.