ನವದೆಹಲಿ: ಕೋವಿಡ್ 19 ಲಸಿಕೆ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದಲ್ಲಿ ಕೋವಿಡ್ ಲಸಿಕೆ ಇನ್ನೂ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥವಾಗುತ್ತಿದ್ದು, ಇದನ್ನು ತಡೆಯಲು ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಲಕ್ನೋ: ಊಟದ ಜತೆ ಸಲಾಡ್ ಕೊಡಲಿಲ್ಲ ಎಂದು ಕುಡಿದ ಅಮಲಿನಲ್ಲಿ ಪತ್ನಿಯನ್ನೇ ಕೊಂದ ಪತಿ!
ಲಸಿಕೆಯ ರೋಗ-ನಿರೋಧಕ ಗುಣದ ವಿವಿಧ ಅಂಶಗಳ ಬಗ್ಗೆ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದರು, ಅಲ್ಲದೇ ಕೋವಿಡ್ ಲಸಿಕೆ ಲಭ್ಯತೆ ಮತ್ತು ಲಸಿಕೆ ಸರಬರಾಜು ಕುರಿತ ಮಾರ್ಗಸೂಚಿಯ ಬಗ್ಗೆ ಅಧಿಕಾರಿಗಳು ವಿವರಣೆ ನೀಡಿರುವುದಾಗಿ ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವರಿಸಿದೆ.
ಕೋವಿಡ್ ಲಸಿಕೆ ಅಭಿಯಾನ ನಡೆಯುತ್ತಿರುವ ಈ ಸಂದರ್ಭದಲ್ಲಿ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆ ವ್ಯರ್ಥವಾಗುತ್ತಿದೆ. ಹೀಗೆ ಲಸಿಕೆ ವ್ಯರ್ಥವಾಗದಂತೆ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಪ್ರಧಾನಿ ಮೋದಿ ಅವರು ಸಭೆಯಲ್ಲಿ ಸೂಚಿಸಿರುವುದಾಗಿ ವರದಿ ಹೇಳಿದೆ.
ದೇಶದಲ್ಲಿ ಶುಕ್ರವಾರದವರೆಗೆ (ಜೂನ್ 04) 22,75 ಕೋಟಿ ಲಸಿಕೆಯನ್ನು ನೀಡಲಾಗಿದೆ. ಇದರಲ್ಲಿ ವ್ಯರ್ಥವಾದ ಲಸಿಕೆ ಅಂಕಿಅಂಶವೂ ಸೇರಿದೆ ಎಂದು ವರದಿ ತಿಳಿಸಿದೆ. ಈ ಸಭೆಯಲ್ಲಿ ರಾಜ್ ನಾಥ್ ಸಿಂಗ್, ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಕೇಂದ್ರ ಸಚಿವರು ಪಾಲ್ಗೊಂಡಿದ್ದರು.
ಭಾರತದಲ್ಲಿ ಕೋವಿಡ್ 19 ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಲು ಲಸಿಕೆ ತಯಾರಿಕೆಯ ವಿವಿಧ ಉತ್ಪಾದಕರ ನೆರವು ಪಡೆಯಲಾಗಿದೆ ಎಂಬುದನ್ನು ಪ್ರಧಾನಿಯವರಿಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು ಎಂದು ವರದಿ ತಿಳಿಸಿದೆ.