ಹೊಸದಿಲ್ಲಿ: ವಾರಕ್ಕೆ ನಾಲ್ಕು ದಿನಗಳ ಕಾಲ ಮಾತ್ರ ಲಸಿಕೆ ಹಾಕುವ ಕಾರ್ಯಕ್ರಮ ಆಯೋಜಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ. ಈ ಮೂಲಕ ಇತರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸಿಕೊಡಲು ವ್ಯವಸ್ಥೆ ಇರುವಂತೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಸರಕಾರ ರವಿವಾರ ತಿಳಿಸಿದೆ.
ಕೋವಿಡ್ ಲಸಿಕೆ ನೀಡಿಕೆಯ ಎರಡನೇ ದಿನದ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ ಅಗ್ನಾನಿ ಹೆಚ್ಚಿನ ರಾಜ್ಯಗಳು ವಾರಕ್ಕೆ ನಾಲ್ಕು ದಿನ ಮಾತ್ರ ಲಸಿಕೆ ನೀಡಲು ನಿರ್ಧರಿಸಿವೆ. ಗೋವಾ ಮತ್ತು ಉತ್ತರ ಪ್ರದೇಶ ವಾರಕ್ಕೆ 2, ಮಿಜೋರಾಂ 5, ಆಂಧ್ರಪ್ರದೇಶ 6 ದಿನಗಳ ಕಾಲ ಲಸಿಕೆ ನೀಡುವುದಾಗಿ ಹೇಳಿವೆ ಎಂದಿದ್ದಾರೆ.
ರವಿವಾರವಾದ್ದರಿಂದ ಕೇವಲ 17,072 ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ. ಇದು ವರೆಗೆ ಲಸಿಕೆ ಸ್ವೀಕರಿಸಿದ 447 ಪ್ರತಿಕೂಲ ಪರಿಣಾಮಗಳು ದೃಢಪಟ್ಟಿವೆ ಎಂದಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ, ಅರುಣಾ ಚಲ ಪ್ರದೇಶ, ಕೇರಳ, ಮಣಿಪುರ ಮತ್ತು ತಮಿಳುನಾಡುಗಳ 553 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗಿದೆ ಎಂದಿದ್ದಾರೆ. ಎರಡು ದಿನಗಳ ಅವಧಿಯಲ್ಲಿ 2,24,301 ಮಂದಿಗೆ ಅದನ್ನು ನೀಡಲಾಗಿದೆ. ಇದೊಂದು ಪ್ರಾಥಮಿಕ ವರದಿ ಎಂದು ಅಗ್ನಾನಿ ಹೇಳಿದ್ದಾರೆ. ಜ.16, ಜ.17ರಂದು 447 ಪ್ರತಿಕೂಲ ಪರಿಣಾಮಗಳು ದೃಢಪಟ್ಟಿವೆ. ಜ್ವರ, ತಲೆನೋವು, ವಾಕರಿಕೆ ಲಕ್ಷಣಗಳು ಕಂಡುಬಂದಿವೆ. ಇವು ಸಾಮಾನ್ಯ ಲಕ್ಷಣಗಳಾಗಿವೆ ಎಂದಿದ್ದಾರೆ ಹೆಚ್ಚುವರಿ ಕಾರ್ಯದರ್ಶಿ. ಇದೇ ವೇಳೆ ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಾತನಾಡಿ ರಾಜ್ಯದಲ್ಲಿ 52 ಪ್ರತಿಕೂಲ ಪರಿಣಾಮಗಳು ದೃಢಪಟ್ಟಿವೆ ಎಂದಿದ್ದಾರೆ.
ಲಸಿಕೆ ರಾಜಕೀಯ: ಪಶ್ಚಿಮ ಬಂಗಾಲದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮೀಸಲಾಗಿ ಇರುವ ಡೋಸ್ ತೃಣಮೂಲ ಕಾಂಗ್ರೆಸ್ ನಾಯಕರಿಗೆ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ರಾಜ್ಯಕ್ಕೆ ಕೇಂದ್ರದಿಂದ ಅಗತ್ಯ ಇರುವಷ್ಟು ಲಸಿಕೆ ಪೂರೈಕೆಯಾಗಿಲ್ಲ ಎಂಬ ಸಿಎಂ ಮಮತಾ ಬ್ಯಾನರ್ಜಿ ಆರೋಪಕ್ಕೆ ಪ್ರತಿಯಾಗಿ ವಿಪಕ್ಷ ಈ ಆರೋಪ ಮಾಡಿದೆ. ಪೂರ್ವ ವರ್ಧಮಾನ ಜಿಲ್ಲೆಯಲ್ಲಿ ಶನಿವಾರ ಟಿಎಂಸಿಯ ಇಬ್ಬರು ಶಾಸಕರು ಲಸಿಕೆ ಹಾಕಿಸಿಕೊಂಡಿದ್ದರು.
ಚೇತರಿಕೆ ಪ್ರಮಾಣ ಶೇ.96: ದೇಶದಲ್ಲಿ ಸೋಂಕಿನಿಂದ ಚೇತರಿಕೆ ಪ್ರಮಾಣ ಶೇ.96. 58 ಆಗಿದೆ. ಜತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 2,08,826 ಎಂದು ಕೇಂದ್ರ ಸರಕಾರ ತಿಳಿಸಿದೆ. ಶನಿವಾರದಿಂದ ರವಿವಾರದ ಅವಧಿಯಲ್ಲಿ 15, 144 ಹೊಸ ಪ್ರಕರಣ ಮತ್ತು 181 ಮಂದಿ ಅಸುನೀಗಿದ್ದಾರೆ.
ದೇಶದಲ್ಲಿ ಲಸಿಕೆ ಅಭಿಯಾನದ ಮೂಲಕ ಪೋಲಿಯೋ ವನ್ನು ಹೊಡೆದೋಡಿಸಲಾಗಿದೆ. ಅದೇ ರೀತಿ ಕೋವಿಡ್ ವಿರುದ್ಧ ಜಯ ಸಾಧಿಸಲಿದ್ದೇವೆ. ಲಸಿಕೆ ಕಂಡುಹಿಡಿದ ಕ್ಷಣ ದೇಶಕ್ಕೆ ಹೆಮ್ಮೆಯ ವಿಚಾರ. –
ಅಮಿತಾಭ್ ಬಚ್ಚನ್, ಬಾಲಿವುಡ್ ನಟ