ದೇವನಹಳ್ಳಿ: ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಲಸಿಕೆ ಹಾಕಿಸಿಕೊಂಡು ಹೋಗುತ್ತಿರುವುದ ರಿಂದ ಸ್ಥಳೀಯರು ಲಸಿಕೆಯಿಂದ ವಂಚಿತರಾಗುತ್ತಿದ್ದಾರೆಂದು ನಾಗರಿಕರು ಆರೋಪಿಸಿದ್ದಾರೆ.
ಲಸಿಕೆಗೆ ನಿತ್ಯ 150 ಮಂದಿಗೆ ನಿಗದಿಪಡಿಸಲಾಗಿದೆ. ಆದರೆ, ಬೆಂಗಳೂರಿನಿಂದ ಬೆಳಗ್ಗೆಯೇ ಕಾರುಗಳಲ್ಲಿ ಆಗಮಿಸಿ ಲಸಿಕಾ ಕೇಂದ್ರಗಳಲ್ಲಿ ಸರತಿಯಲ್ಲಿ ನಿಂತು ಪಡೆಯುತ್ತಿದ್ದಾರೆ. ರೈತಾಪಿ ವರ್ಗದ ಜನ ಹಾಗೂ ಕೂಲಿ ಕಾರ್ಮಿಕರು ನಿತ್ಯ ಕೆಲಸ ಮುಗಿಸಿ ಲಸಿಕೆ ಹಾಕಿಸಿಕೊಳ್ಳಲು ಬರುತ್ತಾರೆ. ಬರುವ ವೇಳೆಗೆ ಬೆಂಗಳೂರಿಗರೇ ಸೇರಿಕೊಂಡರೆ ಸ್ಥಳೀಯರಿಗೆ ಎಲ್ಲಿ ಲಸಿಕೆ ಸಿಗುತ್ತದೆ. ಈಗಾಗಲೇ ಬೆಂಗಳೂರಿಗರು ಲಸಿಕೆಗೆ ಎಲ್ಲಾ ದಿನಾಂಕ ನಿಗದಿಪಡಿಸಿಕೊಂಡಿದ್ದಾರೆ. ಸ್ಥಳೀಯ ರಿಗೆ ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕೆಲವೇ ಕೆಲವರಿಗೆ ಅಂತರ್ಜಾಲ ಮತ್ತು ತಾಂತ್ರಿಕತೆ ಬಗ್ಗೆ ತಿಳಿದಿರುತ್ತದೆ. ಗ್ರಾಮೀಣ ಪ್ರದೇಶದ ಜನರಿಗೆ ಸ್ಮಾರ್ಟ್ ಫೋನ್‌ಗಳ ಬಗ್ಗೆ ಸಾಕಷ್ಟು ಅರಿವಿಲ್ಲದೆ ವಂಚಿತರಾಗುತ್ತಿದ್ದಾರೆ. ಮುಖ್ಯವಾಗಿ ಲಸಿಕಾ ಕೇಂದ್ರ ಗಳಲ್ಲಿ ಸಾಮಾಜಿಕ ಅಂತರವೇ ಕಂಡು ಬರುತ್ತಿಲ್ಲ. ಸರ್ಕಾರ ಇನ್ನಾದರೂ ಲಸಿಕಾ ಕೇಂದ್ರಗಳ ಬಳಿ ಮೂಲಭೂತ ಸೌಕರ್ಯ ವ್ಯವಸ್ಥೆಗೆ ಮುಂದಾಗಬೇಕು.
ಲಸಿಕೆ ಹಾಕುವ ತನಕ ಲಸಿಕೆ ಹಾಕಿಸಿಕೊಳ್ಳುವವರಿಗೆ ಚೇರ್ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ಹೇಳುವ ಪ್ರಕಾರ ಸರ್ಕಾರದ ಆದೇಶ ಬರುವವರೆಗೂ ನಾವು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರ ಲಸಿಕೆ ಹಾಕಬಹುದು, ಬೆಂಗಳೂರಿನವರು ಮೊದಲೇ ಆನ್‌ಲೈನ್‌ನಲ್ಲಿ ನೋಂದಾಯಿಸಿ ದಿನಾಂಕ ನಿಗದಿಪಡಿಸಿ ಕೊಂಡಿದ್ದು ಆನ್‌ಲೈನ್ ಮುಖಾಂತರ ಸರ್ಟಿಫಿಕೇಟ್ ಪಡೆದಿದ್ದಾರೆ. ಈ ರೀತಿ ಇರುವಾಗ ಸಮಸ್ಯೆ ಹೆಚ್ಚು ಕಾಣಿಸುತ್ತಿದೆ. ಈ ಕುರಿತು ಸರ್ಕಾರದ ಗಮನಕ್ಕೂ ತಂದಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. 18-44 ವರ್ಷ ವಯಸ್ಸಿನವರಿಗೆ ಲಸಿಕೆ ಸಮಸ್ಯೆ ಕಾಡ ತೊಡಗುತ್ತಿದೆ.
ಕೊವ್ಯಾಕ್ಸಿನ್ ಲಸಿಕೆ 1 ಓಪನ್ ಮಾಡಲು 10 ಜನ ಇರಬೇಕು. ಇಲ್ಲದಿದ್ದರೆ ವ್ಯರ್ಥವಾಗುತ್ತದೆ. ಕೆಲವರು ಮೊದಲ ಡೋಸ್ ತೆಗೆದುಕೊಂಡವರು 2ನೇ ಡೋಸ್‌ಗೆ ಕಾಯುತ್ತಿದ್ದಾರೆ. ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಿದೆ:ಇನ್ನು ಕೆಲವರು ಲಸಿಕೆ ಖಾಲಿ ಎಂದು ವಾಪಸ್ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿಂದೆ ಲಸಿಕೆ ಹಾಕಿಸಿಕೊಳ್ಳಲು ಕರೆದು ಕರೆದು ಹಾಕಿಸಲಾಗುತ್ತಿತ್ತು. ಈಗ ಜನ ಬಂದರೂ ಲಸಿಕೆ ಇಲ್ಲದಂತಾಗಿದೆ.