ಮಲ್ಪೆ: ಕೋವಿಡ್ ಲಸಿಕೆಯನ್ನು ನೀಡುವುದರಲ್ಲಿ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಯಾವುದೇ ರೀತಿಯ ರಾಜಕೀಯ ಮಾಡದೇ ಆದಷ್ಟು ಬೇಗ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲಸಿಕಾ ಅಭಿಯಾನ ನಡೆಸುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ತೆಂಕನಿಡಿಯೂರು ಗ್ರಾಮಪಂಚಾಯತ್ ಸದಸ್ಯರಾದ ಪ್ರಖ್ಯಾತ್ ಶೆಟ್ಟಿ ಆಗ್ರಹಿಸಿದ್ದಾರೆ.
ಈಗಾಗಲೇ ಕೋವಿಡ್ ಲಸಿಕೆ ಸರಬರಾಜು ಸೂಕ್ತ ರೀತಿಯಲ್ಲಿ ನಡೆಯದೆ ಹಲವಾರು ಮಂದಿಗ ಪ್ರಥಮ ಡೋಸ್ ಕೂಡ ಪಡೆಯದೆ ಪರದಾಡುತ್ತಿದ್ದಾರೆ. ಕೆಲವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಲಸಿಕಾ ಕೇಂದ್ರವನ್ನಾಗಿ ಗುರುತಿಸದೆ ಇರುವುದರಿಂದ ಅಂತಹ ಗ್ರಾಮೀಣ ಪ್ರದೇಶದ ಜನರು ಲಸಿಕೆ ಪಡೆಯಲು ದೂರದ ಉಡುಪಿಗೆ ಆಗಮಿಸಬೇಕಾದ ಪರಿಸ್ಥಿತಿ ಇದೆ. ಈ ನಡುವೆ ಹಲವಾರು ಹಿರಿಯ ನಾಗರಿಕರು ದೂರದ ಉಡುಪಿಗೆ ತೆರಳಲಾಗದೆ ಪ್ರಥಮ ಡೋಸ್ ಕೂಡ ಪಡೆದಿರುವುದಿಲ್ಲ. ಸರಕಾರದ ಅಸಮರ್ಪಕ ಲಸಿಕೆ ಪೊರೈಕೆಯಿಂದ ಇಂದು ಸಾಮಾನ್ಯ ಜನರು ಲಸಿಕೆಯಿಂದ ವಂಚಿತರಾಗುವಂತಾಗಿದೆ.
ಇದನ್ನೂ ಓದಿ: ಕೋವಿಡ್ ನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳನ್ನು ನೇರವಾಗಿ ದತ್ತು ಪಡೆಯಲು ಅವಕಾಶವಿಲ್ಲ
ಕೆಲವೊಂದು ರಾಜಕೀಯ ಪಕ್ಷದ ಕಾರ್ಯಕರ್ತರು ಸಹಾಯವಾಣಿ ಹೆಸರಿನಲ್ಲಿ ಅವರ ಬೆಂಬಲಿಗರಿಗೆ ಮಾತ್ರ ಲಸಿಕೆ ಲಭ್ಯತೆಯ ಬಗ್ಗೆ ಮಾಹಿತಿ ನೀಡುತ್ತಿರುವುದು ಸರಿಯಲ್ಲ. ದೇಶದ ಪ್ರತಿಯೊಬ್ಬ ನಾಗರಿಕರಿಗೆ ಕೂಡ ಲಸಿಕೆ ಪಡೆಯುವ ಹಕ್ಕಿದ್ದು ಅದನ್ನು ಅದನ್ನು ಅನಗತ್ಯವಾಗಿ ರಾಜಕೀಯ ಬೆರೆಸುವುದು ಸರಿಯಲ್ಲ. ಇದನ್ನು ಸಂಬಂಧಿತ ಪಕ್ಷದ ನಾಯಕರು ಹಾಗೂ ಜನಪ್ರತಿನಿಧಿಗಳು ಅರಿಯ ಬೇಕಾಗಿದೆ ಮತ್ತು ಪ್ರತಿಯೊಬ್ಬರಿಗೂ ಲಸಿಕೆ ಪಡೆಯಲು ಅವಕಾಶ ಮಾಡಿಕೊಡಬೇಕಾಗಿದೆ.
ಇನ್ನಾದರೂ ಸರಕಾರ, ಜಿಲ್ಲಾಡಳಿತ ಮತ್ತು ಶಾಸಕರು ಎಚ್ಚೆತ್ತು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭಿಸುವಂತೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಕಾಫಿನಾಡಿಗರ ಮನ ಗೆದ್ದಿದ್ದ ಸಹಕಾರ ಸಾರಿಗೆಗೆ ಬೀಗ: ಬಿಗಿ ಪೊಲೀಸ್ ಭದ್ರತೆಯಲ್ಲಿ ಜಪ್ತಿ