ಮುಂಬಯಿ: ಎರಡು ಕೊರೊನಾ ಲಸಿಕೆಗಳಿಗೆ ದೇಶದ ಔಷಧ ನಿಯಂತ್ರಣ ನಿರ್ದೇಶನಾಲಯ ಒಪ್ಪಿಗೆ ನೀಡಿರುವುದು ಮುಂಬಯಿ ಷೇರು ಪೇಟೆಯಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಸತತ 9ನೇ ದಿನವೂ ಸೆನ್ಸೆಕ್ಸ್ ಏರಿಕೆ ಕಂಡಿದ್ದು, ಹೂಡಿಕೆದಾರರು ಖರೀದಿಯ ಭರಾಟೆಯಲ್ಲಿ ತೊಡಗಿದ್ದಾರೆ.
ಪರಿಣಾಮ ಸೋಮವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 307.82 ಅಂಕ ಏರಿಕೆ ದಾಖಲಿಸಿ, 48,176.80ರಲ್ಲಿ ವಹಿ ವಾಟು ಅಂತ್ಯಗೊಳಿಸಿದೆ. ಇದೇ ರೀತಿ, ನಿಫ್ಟಿ 114.40 ಅಂಕ ಏರಿಕೆಯಾಗಿ, 14,139.90ರಲ್ಲಿ ಕೊನೆಗೊಳ್ಳುವ ಮೂಲಕ ಸಾರ್ವಕಾಲಿಕ ದಾಖಲೆ ಮಾಡಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ, ಜಾಗತಿಕ ಆರ್ಥಿಕತೆಯ ಧನಾತ್ಮಕ ಸ್ಥಿತಿ, ವಿವಿಧ ಕ್ಷೇತ್ರಗಳ ಉತ್ತೇಜನಕಾರಿ ದತ್ತಾಂಶಗಳು ಕೂಡ ಸೆನ್ಸೆಕ್ಸ್ ಏರಿಕೆಗೆ ಕಾರಣವಾದವು.
ಬಿಎಸ್‌ಇಯಲ್ಲಿ ಒಎನ್‌ಜಿಸಿ ಷೇರುಗಳ ಮೌಲ್ಯ ಶೇ.4.02ರಷ್ಟು ಹೆಚ್ಚಳವಾದರೆ, ಟಿಸಿ ಎಸ್, ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಸನ್ ಫಾರ್ಮಾ ಕೂಡ ಲಾಭಗಳಿಸಿದವು. ಇನ್ನೊಂದೆಡೆ, ಕೋಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಏಷ್ಯನ್ ಪೈಂಟ್ಸ್, ಎಚ್‌ಡಿಎಫ್ಸಿ ಬ್ಯಾಂಕ್, ಪವರ್ ಗ್ರಿಡ್ ಮತ್ತು ಟೈಟಾನ್ ಷೇರುಗಳು ಕುಸಿತದ ಕಹಿ ಅನುಭವಿಸಿದವು.
877 ರೂ. ಜಿಗಿದ ಚಿನ್ನದ ದರ: ದಿಲ್ಲಿಯ ಚಿನಿವಾರ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನದ ದರ 877 ರೂ. ಏರಿಕೆಯಾಗಿ, 10 ಗ್ರಾಂಗೆ 50,619ರೂ.ಗೆ ತಲುಪಿದೆ. ಬೆಳ್ಳಿಯೂ ಏರಿಕೆಯ ಹಾದಿಯಲ್ಲಿದ್ದು, 2,012 ರೂ. ಹೆಚ್ಚಳ ಕಂಡು, ಕೆಜಿಗೆ 69,454 ರೂ. ಆಗಿದೆ. ಈ ನಡುವೆ ಡಾಲರ್ ಎದುರು ರೂಪಾಯಿ ಮೌಲ್ಯ 9 ಪೈಸೆ ಏರಿಕೆಯಾಗಿ, 73.02ಕ್ಕೇರಿದೆ. ರೂಪಾಯಿ ದರ ಈ ಮಟ್ಟಕ್ಕೇರಿದ್ದು ಕಳೆದ 4 ತಿಂಗಳಲ್ಲಿ ಇದೇ ಮೊದಲು.