ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಸಾರ್ವತ್ರಿಕ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 1,23,283 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಮೂರು ದಿನ ಆಯೋಜನೆ: ದೇಶದ ಮಕ್ಕಳಲ್ಲಿ ಪೋಲಿಯೋ ಸಂಪೂರ್ಣ ಮುಕ್ತವಾಗಿದ್ದರೂ ಹೊರ ದೇಶಗಳಲ್ಲಿ ಇನ್ನೂ ಅನೇಕ ಪೋಲಿಯೋ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಆರೋಗ್ಯ ಇಲಾಖೆ ಜ.19 ರಿಂದ 21ರ ವರೆಗೂ ಮೂರು ದಿನಗಳ ಕಾಲ ಹಮ್ಮಿಕೊಂಡಿದೆ.
1.23 ಲಕ್ಷ ಮಕ್ಕಳ ಗುರಿ: ಜಿಲ್ಲೆಯಲ್ಲಿ ಒಟ್ಟು 1,23,286 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಬಾಗೇಪಲ್ಲಿ ತಾಲೂಕು 15,622, ಚಿಕ್ಕಬಳ್ಳಾಪುರ- 21,547, ಚಿಂತಾಮಣಿ-18,064, ಗೌರಿಬಿದನೂರು- 22,744, ಗುಡಿಬಂಡೆ- 5,515, ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 20,681 ಮಕ್ಕಳು ಸೇರಿ 1,23,286 ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದು ನಗರದ ಜಿಲ್ಲಾಡಳಿತ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎಂ.ಯೋಗೇಶ್‌ಗೌಡ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಲಸಿಕಾ ಅಭಿಯಾನಕ್ಕೆ ಅನುಕೂಲವಾಗುವಂತೆ ಜಿಲ್ಲಾದ್ಯಂತ 643 ಪೋಲಿಯೋ ಬೂತ್, 62 ಸಂಚಾರಿ ಬೂತ್ ಮತ್ತು 35 ಟ್ರಾನ್ಸಿಟ್ ತಂಡಗಳನ್ನು ನಿಯೋಜಿಸಲಾಗಿದೆ ಎಂದರು. ಈ ತಂಡಗಳು ಜಿಲ್ಲಾದ್ಯಂತ ಮಕ್ಕಳಿಗೆ ಲಸಿಕೆ ಹಾಕುವ ಕೆಲಸ ನಿರ್ವಹಿಸುತ್ತವೆ ಎಂದು ಹೇಳಿದರು. ಬೂತ್‌ಗಳಿಗೆ ಬರದೇ ಹೊರಗುಳಿದ ಮಕ್ಕಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಜ.20 ರವರೆಗೆ ಹಾಗೂ ನಗರ ಪ್ರದೇಶದಲ್ಲಿ ಜ.22ರವರೆಗೆ ಮನೆ ಮನೆಗಳಿಗೆ ಭೇಟಿ ನೀಡುವ ಮೂಲಕ ಲಸಿಕೆ ನೀಡಲಾಗುವುದು ಎಂದರು. ವಿಶೇಷವಾಗಿ ಇಟ್ಟಿಗೆ ಕಾರ್ಖಾನೆ, ಕೋಳಿ ಫಾರಂ, ರೈಲು ನಿಲ್ದಾಣ, ಬಸ್ ನಿಲ್ದಾಣ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಲಸಿಕಾ ಅಭಿಯಾನ ಆಯೋಜಿಸಲಾಗಿದೆ ಎಂದರು.
131 ಮೇಲ್ವಿಚಾರಕರು: ಅಭಿಯಾನವನ್ನು ಯಶಸ್ವಿಗೊಳಿಸಲು ಒಟ್ಟು 2,572 ಕ್ಷೇತ್ರ ಸಿಬ್ಬಂದಿ ಹಾಗೂ ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು 131 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಆಶಾ ಕಾರ್ಯಕರ್ತೆಯರು ಹಾಗೂ ಕ್ಷೇತ್ರ ಸಿಬ್ಬಂದಿಗಳು ಅಂತರ್ ವ್ಯಕ್ತಿ ಸಂವಹನ ಮತ್ತು ಕರಪತ್ರ ವಿತರಣೆ ಮುಖಾಂತರ ವ್ಯಾಪಕ ಪ್ರಚಾರ ಮಾಡಿ ಸಾರ್ವಜನಿಕರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಅರಿವು ಮೂಡಿಸಲಾಗಿದೆ ಎಂದರು.
ಭಾನುವಾರವಾದರೂ ಕಡ್ಡಾಯವಾಗಿ ಗ್ರಾಪಂ ಕಚೇರಿಗಳು ತೆರೆದು ಸಿಬ್ಬಂದಿ ಲಸಿಕಾ ಅಭಿಯಾನಕ್ಕೆ ಸಹಕರಿಸುವಂತೆ ಈಗಾಗಲೇ ಜಿಪಂ ವತಿಯಿಂದ ಸೂಚನೆ ನೀಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂತಾನ ಹಾಗೂ ಮಕ್ಕಳ ಆರೋಗ್ಯ ವಿಭಾಗದ ಅಧಿಕಾರಿ ಡಾ. ಚನ್ನಕೇಶವರೆಡ್ಡಿ, ಡಾ.ಪ್ರಕಾಶ್, ಆರೋಗ್ಯ ಶಿಕ್ಷಣಾಧಿಕಾರಿ ಮಹೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇತ್ತೀಚಿನ ದಿನಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಕೊಳ್ಳುವ ವಿಚಾರದಲ್ಲಿ ಕೆಲವರು ಪೋಷಕರನ್ನು ತಪ್ಪುದಾರಿಗೆ ಎಳೆಯಲು ಇಲ್ಲಸಲ್ಲದ ವದಂತಿಗಳನ್ನು ಸೃಷ್ಠಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಆದ್ದರಿಂದ ಜಿಲ್ಲೆಯ ಪೋಷಕರು ಯಾವುದೇ ರೀತಿಯ ಉಹಾಪೋಹ ಅಥವ ವದಂತಿಗಳಿಗೆ ಕಿವಿಗೂಡದೇ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಹನಿ ಹಾಕಿಸಿಕೊಳ್ಳಬೇಕು. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಯಾವುದೇ ರೀತಿ ದುಷ್ಪರಿಣಾಮ ಬೀರುವುದಿಲ್ಲ
-ಡಾ.ಎಂ.ಬಿ.ಯೋಗೇಶ್‌ಗೌಡ, ಜಿಲ್ಲಾ ಆರೋಗ್ಯಾಧಿಕಾರಿ