Advertisement

ಲಸಿಕೆ ವಿತರಣೆ ದಾಖಲೆ : ದೇಶಾದ್ಯಂತ ವೇಗ ಪಡೆದ ಲಸಿಕೆ ಅಭಿಯಾನ

02:05 AM Jun 27, 2021 | Team Udayavani |

ಹೊಸದಿಲ್ಲಿ/ಬೆಂಗಳೂರು : ದೇಶಾದ್ಯಂತ ಜೂ. 21ರಿಂದ ಲಸಿಕೆ ಮೇಳ ಆರಂಭವಾದ ಬಳಿಕ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು, ಪ್ರತೀ ದಿನ ಸುಮಾರು 70 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ. ಕರ್ನಾಟಕದಲ್ಲೂ ದಿನಂಪ್ರತಿ ಸುಮಾರು 5 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ.

Advertisement

ಕಳೆದ ಆರು ದಿನಗಳಲ್ಲಿ ದೇಶದಲ್ಲಿ ಒಟ್ಟು 3.92 ಕೋಟಿ ಡೋಸ್‌ ಲಸಿಕೆ ಹಾಕಲಾಗಿದೆ. ಶನಿವಾರ ಪ್ರಧಾನಿ ಮೋದಿ ಅವರು ಲಸಿಕೆ ಅಭಿಯಾನದ ಪ್ರಗತಿಯ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಅಭಿಯಾನದಲ್ಲಿ ಖಾಸಗಿ ಎನ್‌ಜಿಒಗಳನ್ನು ಸೇರಿಸಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ. ಈಗಿನ ವೇಗದಲ್ಲೇ ಅಭಿಯಾನ ಮುಂದುವರಿಯಲಿ ಎಂದೂ ಸೂಚಿಸಿದ್ದಾರೆ. ದೇಶದ 125 ಜಿಲ್ಲೆಗಳಲ್ಲಿ 45 ವರ್ಷ ಮೀರಿದ ಶೇ. 50ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. 16 ಜಿಲ್ಲೆಗಳಲ್ಲಿ ಇದೇ ವಯಸ್ಕರ ಗುಂಪಿನ ಶೇ. 90ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಪ್ರಧಾನಿಗೆ ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.

ಇನ್ನೆಷ್ಟು ದಿನ ಬೇಕು?
ದೇಶದ ಎಲ್ಲರಿಗೂ ಎರಡು ಡೋಸ್‌ ಲಸಿಕೆ ಹಾಕಲು ಒಟ್ಟು 1,880 ದಶಲಕ್ಷ ಡೋಸ್‌ ಬೇಕು. ಸದ್ಯ 280 ದಶಲಕ್ಷ ಡೋಸ್‌ ಲಸಿಕೆ ಹಾಕಲಾಗಿದೆ. ದೇಶದ ಎಲ್ಲರಿಗೂ ಎರಡು ಡೋಸ್‌ ಲಸಿಕೆ ನೀಡಿ ಮುಗಿಸಲು ಇನ್ನೂ 228 ದಿನ ಬೇಕು. ಅಂದರೆ 2022ರ ಫೆ. 3ಕ್ಕೆ ಈ ಪ್ರಕ್ರಿಯೆ ಮುಗಿಯಲಿದೆ. ಅದೂ ಕಳೆದ ಆರು ದಿನಗಳಲ್ಲಿ ನೀಡಿದ ವೇಗದಲ್ಲೇ ಲಸಿಕೆ ನೀಡಿದರೆ ಮಾತ್ರ!

ರಾಜ್ಯದಲ್ಲಿ ದುಪ್ಪಟ್ಟು
ಲಸಿಕೆ ಮೇಳ ಆರಂಭವಾದ ಅನಂತರ ರಾಜ್ಯದಲ್ಲಿ ಲಸಿಕೆ ವಿತರಣೆ ಪ್ರಮಾಣ ದುಪ್ಪಟ್ಟಾಗಿದ್ದು, ಕಳೆದ ಆರು ದಿನಗಳಲ್ಲಿ ನಿತ್ಯ ಸರಾಸರಿ ಐದು ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ.

ಜೂ. 21ರ ಬೃಹತ್‌ ಲಸಿಕೆ ಮೇಳದ ಒಂದೇ ದಿನ 11.11 ಲಕ್ಷ ಮಂದಿಗೆ ಲಸಿಕೆ ನೀಡುವ ಮೂಲಕ ದೇಶದಲ್ಲಿಯೇ ಎರಡನೇ ಸ್ಥಾನ ಪಡೆದುದು ದಾಖಲೆಯಾಗಿತ್ತು.

Advertisement

ಮೇಳ ಪೂರ್ವದ ದಿನಗಳಿಗೆ ಹೋಲಿಸಿದರೆ ಸದ್ಯ ದುಪ್ಪಟ್ಟು ಜನ ಲಸಿಕೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಬೆಂಗಳೂರು, ಬೆಳಗಾವಿ, ಬಳ್ಳಾರಿ, ತುಮಕೂರು ಮತ್ತು ಮಂಡ್ಯದಲ್ಲಿ ಅತೀ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ. ರಾಜ್ಯಕ್ಕೆ ಸಾಕಷ್ಟು ಲಸಿಕೆ ದಾಸ್ತಾನು ಲಭ್ಯವಾಗಿದೆ. ಜತೆಗೆ ಲಸಿಕೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮೇಳಕ್ಕೆ ಮುನ್ನ ರಾಜ್ಯದಲ್ಲಿ ಮೂರು ಸಾವಿರದಷ್ಟು ಕೇಂದ್ರಗಳಲ್ಲಿ ಮಾತ್ರ ಲಸಿಕೆ ವಿತರಿಸಲಾಗುತ್ತಿತ್ತು. ಸದ್ಯ ಅವುಗಳ ಸಂಖ್ಯೆ ನಾಲ್ಕೂವರೆ ಸಾವಿರಕ್ಕೆ ಹೆಚ್ಚಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 4.7 ಕೋಟಿ ಜನರಿದ್ದು, 1.81 ಕೋಟಿ ಜನರು ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಈ ಮೂಲಕ ಶೇ. 39ರಷ್ಟು ಗುರಿ ಸಾಧನೆಯಾಗಿದೆ. ಈವರೆಗೆ ಒಟ್ಟು 2.16 ಕೋಟಿ ಡೋಸ್‌ ಲಸಿಕೆ ವಿತರಿಸುವ ಮೂಲಕ ದಕ್ಷಿಣ ಭಾರತದಲ್ಲೇ ಕರ್ನಾಟಕ ನಂ. 1 ಆಗಿದೆ. ಈವರೆಗೆ 1.91 ಕೋಟಿ ಡೋಸ್‌ ಕೊವಿಶೀಲ್ಡ್‌, 24.5 ಲಕ್ಷ ಕೊವ್ಯಾಕ್ಸಿನ್‌ ವಿತರಿಸಲಾಗಿದೆ. 35.3 ಲಕ್ಷ ಮಂದಿ ಎರಡೂ ಡೋಸ್‌ ಪೂರ್ಣಗೊಳಿಸಿದ್ದಾರೆ.

ದಾಸ್ತಾನು ಲಭ್ಯ
ರಾಜ್ಯದಲ್ಲಿ ಸದ್ಯ ಎಂಟು ಲಕ್ಷ ಡೋಸ್‌ಗಳಷ್ಟು ಕೊರೊನಾ ಲಸಿಕೆ ದಾಸ್ತಾನು ಇದ್ದು, ಜೂ. 30ರಂದು 10 ಲಕ್ಷ ಡೋಸ್‌ ಕೇಂದ್ರ ಸರಕಾರದಿಂದ ಲಭ್ಯವಾಗಲಿದೆ. ಲಸಿಕೆ ದಾಸ್ತಾನು ಕೊರತೆಯಾಗುವುದಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು
ತಿಳಿಸಿದ್ದಾರೆ.

ದಕ್ಷಿಣ ಕನ್ನಡ: 1.27 ಲಕ್ಷಕ್ಕೂ ಹೆಚ್ಚು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ದಿನಗಳಲ್ಲಿ 1,27,208 ಮಂದಿಗೆ ಲಸಿಕೆ ನೀಡಲಾಗಿದೆ. ಅದರಲ್ಲೂ ಜೂ. 21ರಂದು ಒಂದೇ ದಿನ 44,392 ಮಂದಿ ಲಸಿಕೆ ಪಡೆದು ಅತೀ ಹೆಚ್ಚು ಲಸಿಕೆ ನೀಡಿದ ರಾಜ್ಯದ 6ನೇ ಜಿಲ್ಲೆಯಾಗಿ ದಕ್ಷಿಣ ಕನ್ನಡ ಗುರುತಿಸಿಕೊಂಡಿತ್ತು. 6 ದಿನಗಳಲ್ಲಿ ಜಿಲ್ಲೆಯ 781 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ, 259 ಮಂದಿ 2ನೇ ಡೋಸ್‌ ಲಸಿಕೆ ಪಡೆದಿದ್ದಾರೆ. 769 ಮಂದಿ ಮುಂಚೂಣಿ ಕಾರ್ಯಕರ್ತರು ಮೊದಲ ಮತ್ತು 102 ಮಂದಿ 2ನೇ ಡೋಸ್‌ ಪಡೆದಿದ್ದಾರೆ. 18ರಿಂದ 44 ವರ್ಷದ 64,833 ಮಂದಿ ಮೊದಲ ಮತ್ತು 1,403 ಮಂದಿ 2ನೇ ಡೋಸ್‌ ಪಡೆದಿದ್ದಾರೆ. 45ರಿಂದ 60 ವರ್ಷದ 39,102 ಮಂದಿ ಮೊದಲ, 1,574 ಮಂದಿ 2ನೇ ಡೋಸ್‌ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ 16,645 ಮಂದಿ ಮೊದಲ, 1,740 ಮಂದಿ 2ನೇ ಡೋಸ್‌ ಸ್ವೀಕರಿಸಿದ್ದಾರೆ.

ಉಡುಪಿ: 64 ಸಾವಿರಕ್ಕೂ ಅಧಿಕ
ಉಡುಪಿ: ಜಿಲ್ಲೆಯಲ್ಲಿ ಜೂ. 21ರ ಬಳಿಕ ಇದುವರೆಗೆ 64 ಸಾವಿರಕ್ಕೂ ಅಧಿಕ ಡೋಸ್‌ಗಳನ್ನು ವಿತರಿಸಲಾಗಿದೆ. ಜೂ. 21ರಂದು ನಡೆದ ಲಸಿಕೆ ಮಹಾಮೇಳದಲ್ಲಿ ಜಿಲ್ಲೆಯ 125ಕ್ಕೂ ಹೆಚ್ಚು ಕಡೆಗಳಲ್ಲಿ ಸುಮಾರು 28 ಸಾವಿರಕ್ಕೂ ಅಧಿಕ ಲಸಿಕೆ ಡೋಸ್‌ಗಳನ್ನು ನೀಡಲಾಗಿತ್ತು. ಆ ಬಳಿಕ ಜೂ. 22ರಂದು 9,466, ಜೂ. 23ರಂದು 11,425, ಜೂ. 24ರಂದು 8,448, ಜೂ. 25ರಂದು 2,924 ಮತ್ತು ಜೂ. 26ರಂದು 3,799 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next