ದೇವನಹಳ್ಳಿ: ಹಾಲು ಉತ್ಪಾದಕ ರೈತರು ಕೆಚ್ಚಲು ಬಾವು ಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ರೈತರು ರಾಸುಗಳಿಗೆ ತಪ್ಪದೇ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಬೇಕು ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ದೇವನಹಳ್ಳಿ ಶಿಬಿರದ ಉಪ ವ್ಯವಸ್ಥಾಪಕ ಡಾ.ಸಿ.ಎಂ. ಪೂರ್ಣಚಂದ್ರ ತೇಜಸ್ವಿ ತಿಳಿಸಿದರು.
ತಾಲೂಕಿನ ಆಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಜನರು ಆರ್ಥಿಕವಾಗಿ ಸದೃಢವಾಗಲು ಸಹಕಾರ ಸಂಘಗಳು ಆಸರೆಯಾಗಿವೆ. ಸಹಕಾರ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.ಕ್ರಮಬದ್ಧ ಆಹಾರದಿಂದ ಗುಣಮಟ್ಟದ ಹಾಲು ಉತ್ಪಾದನೆ ಆಗುತ್ತದೆ. ಕರುಗಳ ಸಾಕಾಣಿಕಾ ಕ್ರಮ ಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದರು.
ರಾಸುಗಳಿಗೆ ಹುಳಿನೀರು, ಮುಸುರೆ ನೀರು ಇಡಬಾರದು. ಪೌಷ್ಟಿಕ ಆಹಾರ ನೀಡಬೇಕು. ಜಂತುಹುಳು ಔಷಧ ನೀಡಬೇಕು. ಕೆಚ್ಚಲು ಬಾವು ಬರದಂತೆ ನೋಡಿ ಕೊಳ್ಳಬೇಕು. ಕೊಟ್ಟಿಗೆಗಳನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ರೈತರು ಆರ್ಥಿಕವಾಗಿ ಸದೃಢರಾಗಬೇಕಾದರೆ ಹೈನುಗಾರಿಕೆ ಅನುಕೂಲ ಆಗಿದೆ ಎಂದು ಹೇಳಿದರು.
ಹಾಲಿಗೆ 5 ರೂ. ಪ್ರೋತ್ಸಾಹಧನ: ಶಿಬಿರದ ಸಹಾಯಕ ವ್ಯವಸ್ಥಾಪಕ ಡಿ.ಕೆ.ಮಂಜುನಾಥ್ ಮಾತನಾಡಿ, ರೈತರಿಗೆ ಬೆಂಗಳೂರು ಹಾಲು ಒಕ್ಕೂಟ ಸಾಕಷ್ಟು ಸೌಲಭ್ಯ ನೀಡಿದೆ. ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಮಿಷನ್, ಮ್ಯಾಟ್ ನೀಡುತ್ತಿದೆ. ಅತಿ ಹೆಚ್ಚು ಅಂಕ ಪಡೆದ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗು ತ್ತಿದೆ. ಸಂಘಗಳಿಗೆ ಗುಣಮಟ್ಟದ ಹಾಲನ್ನು ನೀಡ ಬೇಕು. ಸರ್ಕಾರದಿಂದ ಗುಣಮಟ್ಟ ಆಧಾರಿತ ಮೇಲೆ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದೆ ಎಂದರು.
ಸಂಘಕ್ಕೆ 2.36 ಲಕ್ಷ ರೂ. ನಿವ್ವಳ ಲಾಭ: ಆಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ. ಮುನಿರಾಜು ಮಾತನಾಡಿ, ಹಾಲು ಸರಬರಾಜು ಮಾಡುವ ಸದಸ್ಯರ ಸಂಖ್ಯೆ ಹೆಚ್ಚಿಸುವುದು. ಹಾಲು ಶೇಖರಣೆ ಪ್ರಮಾಣವನ್ನು 915.0 ಲೀಟರ್ ನಿಂದ 1,200 ಲೀಟರ್ ಗೆ ಹೆಚ್ಚಿಸುವುದು. ಉತ್ಪಾದಕರಿಗೆ ಬೇಕಾಗುವ ಲಭ್ಯವಿರುವ ಎಲ್ಲಾ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುವುದು. ರಾಸುಗಳ ಗುಂಪು ವಿಮಾಯೋಜನೆ ಮತ್ತು ರಾಸುಗಳಿಗೆ ಕಾಲುಬಾಯಿ
ಲಸಿಕೆ ಬಳಕೆಯನ್ನು ಸಂಘದ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರುವುದು. ಹೆಚ್ಚು ಹಾಲು ಸರಬರಾಜು ಮಾಡಿದ ಒಬ್ಬ ಸದಸ್ಯರಿಗೆ ಕೊಡುಗೆ ನೀಡಲಾಗುವುದು. 2.36 ಲಕ್ಷ ರೂ. ನಿವ್ವಳ ಲಾಭ ಗಳಿಸಲಾಗಿದೆ ಎಂದರು.
ವಿಸ್ತರಣಾಧಿಕಾರಿ ಕೆ. ವಿಜಯಕುಮಾರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪಟಾಲಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಎಚ್.ಮಂಜುನಾಥ್, ಉಪಾಧ್ಯಕ್ಷ ಆರ್.ಜೋಗಪ್ಪ, ನಿರ್ದೇಶಕ ಎಸ್.ಪುಟ್ಟಣ್ಣ, ಎಸ್.ಚಂದ್ರಶೇಖರ್, ಎಚ್. ಮಾರುತಿ, ಗೋಪಾಲ್, ಶ್ರೀನಿವಾಸಾಚಾರಿ, ಎ.ಎಂ. ಮುನಿಆಂಜಿನಪ್ಪ, ಮುನಿ ತಾಯಮ್ಮ, ಪಿಳ್ಳಮ್ಮ, ಮುಖಂಡ ಮುನೇಗೌಡ, ಬಸವರಾಜು, ಈರಣ್ಣ, ಕೆಂಪಣ್ಣ, ಆನಂದಮೂರ್ತಿ, ಹಾಲು ಪರೀಕ್ಷಕ ಜೆ. ಆಂಜನೇಯ, ಗುಮಾಸ್ತ ಎ. ಮಂಜುನಾಥ್, ಸಹಾಯ ಎಂ.ಮುನಿರಾಜು ಹಾಗೂ ಮತ್ತಿತರರು ಇದ್ದರು.