Advertisement
ಜಿಲ್ಲೆಯಲ್ಲಿ 16 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು, ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ಸಂಖ್ಯೆ ಕೇವಲ 3129. ಅರ್ಧದಷ್ಟು ಹುದ್ದೆಗಳು ಖಾಲಿಯಿದ್ದು, ಇರುವ ನೌಕರರೇ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕಂದಾಯ, ಆರೋಗ್ಯ, ಜಿಪಂ, ಕೃಷಿ, ತೋಟಗಾರಿಕೆ, ಅರಣ್ಯ, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಸೇರಿದಂತೆ ಸಾರ್ವಜನಿಕರಿಗೆ ಹತ್ತಿರದಲ್ಲಿರುವ ಹಲವು ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಪ್ರಮಾಣವೇ ಹೆಚ್ಚಾಗಿದೆ.
Related Articles
Advertisement
ಸಾರ್ವಜನಿಕರಿಗೆ ಸಮಸ್ಯೆ: ಜಿಲ್ಲೆಯ ಬಹುತೇಕ ಎಲ್ಲ ಇಲಾಖೆಗಳಲ್ಲೂ ಮಂಜೂರಾಗಿರುವ ಸಂಖ್ಯೆಯ ಸರಿಸುಮಾರು ಅರ್ಧದಷ್ಟು ಖಾಲಿ ಹುದ್ದೆಗಳಿವೆ. ಇದರಿಂದ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಲು ತೊಡಕಾಗುತ್ತಿದೆ. ಜನಸಂಖ್ಯೆ ಹೆಚ್ಚಿದಂತೆ ಹೆಚ್ಚುವರಿ ಹುದ್ದೆಗಳನ್ನು ಸೃಜಿಸುವುದು ಬದಿಗಿರಲಿ, ಅನೇಕ ವರ್ಷಗಳ ಹಿಂದೆಯೇ ಮಂಜೂರಾಗಿರುವ ಹುದ್ದೆಗಳನ್ನೂ ಪೂರ್ತಿಯಾಗಿ ಭರ್ತಿ ಮಾಡದಿರುವುದರಿಂದ ಸರ್ಕಾರದ ಯೋಜನೆಗಳನ್ನು ಕಾಲಮಿತಿಯಲ್ಲಿ ಜನರಿಗೆ ತಲುಪಿಸಲು ಸಮಸ್ಯೆಯಾಗುತ್ತಿದೆ. ಅದರಲ್ಲೂ ಆರೋಗ್ಯ, ಶಿಕ್ಷಣ, ಕಂದಾಯ, ಪಂಚಾಯತ್ ರಾಜ್, ಪಶುಸಂಗೋಪನೆ, ಕೃಷಿ ಮುಂತಾದ ಸಾರ್ವಜನಿಕರೊಂದಿಗೆ ನಿತ್ಯವೂ ಸಂಪರ್ಕದಲ್ಲಿರುವ ಹಲವು ಇಲಾಖೆಗಳಲ್ಲಿ ಹುದ್ದೆಯ ಕೊರತೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ.
ಜಿಲ್ಲೆಯಲ್ಲಿ ಮಂಜೂರಾಗಿರುವ 6612 ಹುದ್ದೆಗಳಲ್ಲಿ 3129 ಹುದ್ದೆಗಳು ಖಾಲಿ ಇವೆ. ಈ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಅವರಿಗೆ ವರದಿ ಸಲ್ಲಿಸಲಾಗಿದೆ. ಖಾಲಿ ಹುದ್ದೆಗಳಿಂದಾಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಮೇಲಿನ ಒತ್ತಡ ಹೆಚ್ಚುತ್ತಿದ್ದು, ಈ ಬಗ್ಗೆಯೂ ಅವರ ಗಮನಕ್ಕೆ ತರಲಾಗಿದೆ. -ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ
ಖಾಲಿ ಹುದ್ದೆ ಭರ್ತಿಗೆ ಸಾರ್ವಜನಿಕರ ಆಗ್ರಹ
ಒಂದು ದಿನಕ್ಕೆ ಆಗಬೇಕಾದ ಕೆಲಸಕ್ಕೆ ಸಾರ್ವಜನಿಕರು ಹಲವು ಬಾರಿ ಕಚೇರಿಗೆ ಅಲೆದಾಡುವಂತಾಗುತ್ತಿದೆ. ಇತ್ತೀಚೆಗೆ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಅವೆಲ್ಲವನ್ನೂ ಈಗಿರುವ ಸಿಬ್ಬಂದಿಯೇ ಅನುಷ್ಠಾನಕ್ಕೆ ತರಬೇಕಿದೆ. ಇದರಿಂದ ನೌಕರರ ಮೇಲಿನ ಒತ್ತಡ ಹೆಚ್ಚುತ್ತಲೇ ಸಾಗಿದೆ. ಇದನ್ನು ತಪ್ಪಿಸಲು ಸರ್ಕಾರ ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಜಿಲ್ಲೆಯ ಸಾರ್ವಜನಿಕರ ಆಗ್ರಹವಾಗಿದೆ.