Advertisement

ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟಿದ್ದು ವಚನಕಾರರು

02:29 PM Mar 26, 2017 | Team Udayavani |

ಧಾರವಾಡ: ಅಸಮಾನತೆಯಿಂದ ಸಮಾನತೆ, ದಾನದಿಂದ ದಾಸೋಹ, ಸ್ತ್ರೀ ನಿಂದನೆಯಿಂದ ಸ್ತ್ರೀ ವಂದನೆ, ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದವರೆಗೆ ಈ ಸಮಾಜವನ್ನು ತಂದದ್ದು 12ನೇ ಶತಮಾನದ ವಚನಕಾರರು ಮತ್ತು ವಚನಸಾಹಿತ್ಯ ಆಗಿದೆ ಎಂದು ಸಾಹಿತಿ ಡಾ| ಮಲ್ಲಿಕಾರ್ಜುನ ಮೈತ್ರಿ ಹೇಳಿದರು. 

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸಾಹಿತ್ಯ ಭವನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಅನುಭಾವ ಗೋಷ್ಠಿಯಲ್ಲಿ ವಚನ ಸಾಹಿತ್ಯ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಆತ್ಮ ವಿಮೋಚನೆ ಮೂಲಕ ತಮ್ಮದೇ ಆದ ಬದ್ಧತೆಯನ್ನು ವಚನಕಾರರು ಮೆರೆದಿದ್ದಾರೆ. ಅನುಭಾವಕ್ಕೆ ಭಕ್ತಿ ನೆಲೆ ಇರುವುದರಿಂದ ಅದು ಅದ್ಭುತವಾದ ಶಕ್ತಿಯನ್ನು ಪಡೆದುಕೊಂಡಿದೆ ಎಂದು ಹೇಳಿದರು.

 ಬದುಕಿಗೆ ಶಕ್ತಿ ಕೊಡುವ ಅಭಿವ್ಯಕ್ತಿ ಸ್ವಾತಂತ್ರದಂಥ ಅದ್ಭುತವಾದ ಶಕ್ತಿ ವಚನ ಸಾಹಿತ್ಯಕ್ಕಿದೆ. ಸಾಮಾಜಿಕವಾಗಿ ಬದ್ಧತೆಯಿಂದ ಈ ನೆಲದ ಮೇಲೆ ಬಾಳಿ ಹೋದವರು ನಮ್ಮ ಶರಣರು. ಅಸಮಾನತೆ ನೆಲೆಯ ವಿರುದ್ಧ ಹೋರಾಡಿ ತಮ್ಮದೇ ಆದ ವ್ಯಾಖ್ಯಾನಗಳನ್ನು ಅವರು ಕೊಟ್ಟಿದ್ದಾರೆ. ಆತ್ಮ ಕಲ್ಯಾಣದ ಜೊತೆಗೆ ಲೋಕ ಕಲ್ಯಾಣವನ್ನೂ ಅವರು ತಮ್ಮ ವಚನ ಸಾಹಿತ್ಯದ ಮೂಲಕ ಮಾಡಿದ್ದಾರೆ ಎಂದರು. 

ತತ್ವ ಎಂಬ ಪದ ಶ್ರೇಷ್ಠ: ತತ್ವಪದ ಸಾಹಿತ್ಯ ಎಂಬ ವಿಷಯ ಕುರಿತು ಅಣ್ಣಿಗೇರಿಯ ಸಹ ಪ್ರಾಧ್ಯಾಪಕ ಡಾ| ಎ.ಸಿ. ವಾಲಿ ಮಾತನಾಡಿ, ತೆರೆಮರೆಗೆ ಸರಿದಿದ್ದ ತತ್ವಪದ ಇದೀಗ ಪುನಃ ಜನಪ್ರಿಯತೆಗೆ ಬಂದಿದೆ. ಅನುಭಾವದ ಮೂಲಕ ದೇವನತ್ತ ಮನುಷ್ಯನ ಮನಸ್ಸು ಒಯ್ಯುವವರೇ ತತ್ವಪದಕಾರರು. ತತ್ವವು ಸತ್ವ, ಗತ್ತು, ಕಿಮ್ಮತ್ತು ಹೊಂದಿದೆ.

ಸಂಸಾರದ ಜಂಜಡಗಳಿಂದ ಹೊರಬರಲು ತತ್ವದ ಮೊರೆ ಹೋದವರೇ ಹೆಚ್ಚು. ಉತ್ತರ ಕರ್ನಾಟಕ ಭಾಗದಲ್ಲಿಯೇ ಹೆಚ್ಚು ತತ್ವಪದಕಾರರು ಕಾಣಸಿಗುತ್ತಾರೆ ಎಂದರು. ಜೀವನದ ಹುಡುಕಾಟದಲ್ಲಿ ಕಣ್ಣಿಗೆ ಕಾಣದಂತಿರುವುದನ್ನು ಸಾಹಿತ್ಯದ ಮೂಲಕ ತಂದು ಕೊಡುವುದು ಕಷ್ಟ. ತತ್ವದಲ್ಲಿ ಗುರುವೇ ಕೇಂದ್ರ ವಸ್ತು. 

Advertisement

18-19ನೇ ಶತಮಾನವನ್ನು ಕತ್ತಲೆ ಯುಗವೆಂದು ಕರೆದಿದ್ದಾರೆ. ಆದರೆ ಆ ಯುಗದಲ್ಲಿಯೇ ಬೆಳಕು ಕಂಡಿದ್ದು. ಕಡಕೋಳ ಮಡಿವಾಳಪ್ಪ ಅವರ ತಾಯಿ ಗಂಗಮ್ಮ ಅವರಿಂದಲೇ ತತ್ವಪದ ಹುಟ್ಟಿದ್ದು ಎಂಬುದು ಕಂಡು ಬರುತ್ತಿದೆ. ಆಕೆ ಬದುಕಿನ ತಾಕಲಾಟಗಳಿಂದ ಮುಕ್ತಿ ಪಡೆಯಲು ಕೆಲ ತತ್ವಪದ ರಚಿಸಿದಳು.

ಈಕೆ ಮಗ ಮಡಿವಾಳಪ್ಪ ಎರಡನೇ ಅನುಭವ ಮಂಟಪ ನಿರ್ಮಿಸುವ ಮೂಲಕ ಮುಸ್ಲಿಂ ತತ್ವಪದಕಾರ ಶರೀಫ‌ರಿಗೂ ಮೊದಲು ಚನ್ನೂರ ಜಲಾಲಾ ಸಾಹೇಬ ತತ್ವಪದ ರಚಿಸಿದ ಕುರುಹುಗಳಿವೆ ಎಂದು ತಿಳಿಸಿದರು. ದೇ ಅಂದರೆ ದೇಹವಿಲ್ಲದ, ವ ಎಂದರೆ ವರ್ಣವಿಲ್ಲದ, ರು  ಎಂದರೆ ರೂಪವಿಲ್ಲದ ವ್ಯಕ್ತಿಯ ಜಪ ಮಾಡು ಎಂದು ತತ್ವಪದಕಾರರು ಹೇಳುತ್ತಾರೆ.

ಆ ನೆಲೆಗಟ್ಟಿನಲ್ಲಿ ಸಂತ ಶಿಶುನಾಳ ಶರೀಫರಿರಬಹುದು, ಗುರು ಗೋವಿಂದ ಭಟ್ಟರಿರಬಹುದು. ಎಲ್ಲ ತತ್ವಪದಕಾರರು ತತ್ವಪದಗಳನ್ನು ರಚಿಸಿದ್ದಾರೆ. ಸಂಸಾರವೆಂಬುದು ಸೆರೆಮನೆ ಇದ್ದಂತೆ ಎಂದು ಕೆಲವರು ಭಾವಿಸಿದರೆ, ಇದನ್ನು ತತ್ವಪದಕಾರರು ಸಂಸಾರವೆಂಬುದು ಕೆರವಿನ ಅಟ್ಟವಿದ್ದಂತೆ ಎಂಬುದಾಗಿ ಹೇಳುತ್ತಾರೆ ಎಂದರು. ಎಲ್ಲ ಸಾಹಿತ್ಯಗಳ ಮಧ್ಯೆ ಈ  ತತ್ವಪದ ಸಾಹಿತ್ಯ ಎಲ್ಲೋ ಒಂದು ಕಡೆ ಉಪೇಕ್ಷೆಗೆ ಒಳಗಾಯಿತು ಎಂಬ ನೋವಿದೆ.

ತತ್ವಪದ ಸಾಹಿತ್ಯ ಬದುಕಿನ ಮೌಲ್ಯಗಳನ್ನು ತಿಳಿಸುಕೊಡುವಂಥದ್ದು. ಈ ಸಾಹಿತ್ಯ ಇತ್ತೀಚೆಗೆ ಮತ್ತೆ ಜನ ಮನ್ನಣೆ ಪಡೆದುಕೊಳ್ಳುತ್ತಿರುವುದು ಸಂತಸದ ವಿಷಯ ಎಂದರು. ಡಾ| ಬಸವರಾಜ ಸಬರದ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ವಿ.ಸಿ. ಐರಸಂಗ, ಜಿಲ್ಲಾ ಕಸಾಪ ಅಧ್ಯಕ್ಷ  ಡಾ| ಲಿಂಗರಾಜ ಅಂಗಡಿ, ತಾಲೂಕು ಕಸಪಾ ಅಧ್ಯಕ್ಷ ಎಫ್‌.ಬಿ. ಕಣವಿ ಗೋಷ್ಠಿಯಲ್ಲಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next