Advertisement

ಶಿವಾಜಿ ನಗರದಲ್ಲಿ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್: ಸಚಿವ ಸೋಮಣ್ಣ ಉದ್ಘಾಟನೆ

05:26 PM May 22, 2021 | Team Udayavani |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ವ್ಯಾಪ್ತಿಯಲ್ಲಿ ಬರುವ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ವಾಸಿಸುತ್ತಿರುವ ಬಡವರು ಹಾಗೂ ಮಧ್ಯಮವರ್ಗಗಳ ಕುಟುಂಬದವರನ್ನು ಕೋವಿಡ್ ಸೋಂಕಿನಿಂದ ರಕ್ಷಿಸಲು ಕೋವಿಡ್ ಕೇರ್ ಸೆಂಟರುಗಳನ್ನು ಹೆಚ್ಚು ಹೆಚ್ಚಾಗಿ ಸಜ್ಜುಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಪೂರ್ವ ವಲಯ ಕೋವಿಡ್-19 ಮೇಲ್ವಿಚಾರಣೆ ಉಸ್ತುವಾರಿ ಹೊತ್ತಿರುವ ಸಚಿವ ವಿ.ಸೋಮಣ್ಣ ಹೇಳಿದರು.

Advertisement

ಶಿವಾಜಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸೆಂಟ್’ಜಾನ್ಸ್ ರಸ್ತೆಯ ಮಿಲಟರಿ ಕಾಂಪೌಂಡ್’ ನಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಭಾರತೀಯ ಸೈನ್ಯದ ಸಹಯೋಗದೊಂದಿಗೆ ಕೋವಿಡ್ ಸೊಂಕಿತರ ಚಿಕಿತ್ಸೆಗಾಗಿ ಸಜ್ಜುಗೊಳಿಸಲಾಗಿರುವ 100 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಆಲ್ ಅಮೀನ್ ಆಸ್ಪತ್ರೆಯಲ್ಲಿ ಶೇ.30ರಷ್ಟು ಹಾಸಿಗೆಗಳನ್ನು ಒದಗಿಸಲು ಆಡಳಿತ ಮಂಡಳಿ ಒಪ್ಪಿದ್ದು, ಆರಂಭಿಸಲಾಗುತ್ತಿರುವ ಆರೈಕೆ ಕೇಂದ್ರಕ್ಕೆ ಬರುವ ತುರ್ತು ರೋಗಿಗಳನ್ನು ಅಲ್ಲಿಗೆ ದಾಖಲಿಸಲು ವೈದ್ಯರಿಗೆ ಸೂಚಿಸಿದರು.

ಕೋವಿಡ್ ವ್ಯಾಪಿಸಿರುವ ಈ ಸಮಯದಲ್ಲಿ ಭಾರತೀಯ ಸೈನ್ಯದವರು ಸೇವಾ ಮನೋಭಾವದಿಂದ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಒತ್ತಾಸೆಯಾಗಿ ನಿಂತಿದ್ದಾರೆ, ಈ ಕೇಂದ್ರಕ್ಕೆ ಅಗತ್ಯವಿರುವ ಹೆಚ್ಚುವರಿ ಸೌಲಭ್ಯವನ್ನು ಬಿಬಿಎಂಪಿ ಒದಗಿಸಲಿದೆ ಎಂದೂ ಸಚಿವ ಶ್ರೀ ಸೋಮಣ್ಣ ಹೇಳಿದರು.

ಈ ಆಸ್ಪತ್ರೆಯ 100 ಹಾಸಿಗೆಗಳಲ್ಲಿ 45 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ಇರುತ್ತದೆ  ಎಂದು ಹೇಳಿದ ಸಚಿವರು ಆಸ್ಪತ್ರೆ ನುರಿತ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ಮಾತ್ರವಲ್ಲದೆ, ಆಂಬ್ಯುಲೆನ್ಸ್ ಸೌಕರ್ಯವನ್ನು ಹೊಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಗೌರವ್ ಗುಪ್ತ, ಪೂರ್ವ ವಲಯದ ನೋಡಲ್ ಅಧಿಕಾರಿಗಳೂ ಆಗಿರುವ ವಸತಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಭಾರತೀಯ ಸೈನ್ಯದ ಮೇಜರ್ ಜನರಲ್ ಜೆ.ವಿ.ಪ್ರಸಾದ್, ಬ್ರಿಗೇಡಿಯರ್ ಟಿ.ಪಿ.ಎಸ್. ವಾರ್ಧ್ವ, ಪಾಲಿಕೆಯ ಜಂಟಿ ಆಯುಕ್ತೆ ಪಲ್ಲವಿ ಹಾಗೂ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next