Advertisement

ಅಪೂರ್ವ ಅನುಭವ ನೀಡಿದ ಪ್ರಣತಿ ನಾಟ್ಯಾರಾಧನೆ

06:02 PM Jun 13, 2019 | Team Udayavani |

ನೈಜ ಹಿಮ್ಮೇಳವು ಸಿ. ಡಿ. ಹಿಮ್ಮೇಳದ ಹಾವಳಿಯಲ್ಲಿ ಪಳೆಯುಳಿಕೆಯಾಗಿ ಸಂಭವಿಸುವ ಈ ಕಾಲಘಟ್ಟದಲ್ಲಿ ಪ್ರಣತಿ ಬಳಸಿದ ಹಿಮ್ಮೇಳ ಕಲಾವಿದರು ಪ್ರದರ್ಶನದ ಯಶಸ್ಸಿನ ಸಮಪಾಲುದಾರರು. ನಟ್ಟುವಾಂಗವನ್ನು ದಕ್ಷತೆಯಿಂದ ನಡೆಸಿ ಶಿಷ್ಯೆಗೆ ಬೆಂಬಲ ನೀಡಿದ ಗುರು ವಿ| ಲಕ್ಷ್ಮೀ ಗುರುರಾಜ್‌ಅಭಿನಂದನಾರ್ಹರು.

Advertisement

ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಕಲಾವಿದ ಕುರಿಯ ವಿಠಲ ಶಾಸ್ತ್ರಿಗಳ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಕುರುಡಪದವಿನಲ್ಲಿ ಉಡುಪಿಯ ವಿ| ಪ್ರಣತಿ ಚೈತನ್ಯ ಪದ್ಯಾಣರ ಭರತನಾಟ್ಯ ಪ್ರದರ್ಶನ ಪ್ರಸ್ತುತಿಗೊಂಡಿತು.

ಈ ಪ್ರದರ್ಶನವು ಗಟ್ಟಿತನದ ನೈಜ ಹಿಮ್ಮೇಳ (ಸಿ.ಡಿ. ಹಿನ್ನೆಲೆ ಅಲ್ಲ) ದಿಂದ ಅರಳಿದ್ದು ಹಿಮ್ಮೇಳ ಕಲಾವಿದರ ಒಮ್ಮತದ ದುಡಿಮೆಗೆ ಸಂದ ಯಶಸ್ಸಾಯಿತು. ಕಲಾವಿದೆ ಪ್ರದರ್ಶನವನ್ನು ಅಮೃತವರ್ಷಿಣಿ ರಾಗ, ಆದಿತಾಳದ ಪುಷ್ಪಾಂಜಲಿಯೊಂದಿಗೆ ಶುದ್ಧ ಸಾಂಪ್ರದಾಯಿಕ ಶೈಲಿಯಲ್ಲಿ ನರ್ತಿಸಿ ಮುಂದೆ ಕ್ಲಿಷ್ಟವಾದ ಸಂಕೀರ್ಣ ಜಾತಿಯ ಮಯೂರ ಅಲರಿಪನ್ನು ನವಿಲಿನ ಅಂಗಾಂಗಗಳ ಲಾಸ್ಯ-ಕತ್ತು, ಕಣ್ಣು ರೆಕ್ಕೆಗೆದರಿ ಚಲಿಸುವ ಪರಿ-ಅಲರಿಪುವಿನ ತತ್ಕಾರಗಳೊಂದಿಗೆ ಮೇಳೈಸಿ ಮಯೂರಿಯಂತೆ ನರ್ತಿಸಿದರು. ಗುರುಲಕ್ಷ್ಮಿಯವರ ನಟ್ಟುವಾಂಗದ ಓಘ, ಚೈತನ್ಯ ಪದ್ಯಾಣರ ಮೃದಂಗದ ತತ್ಕಾರಗಳ ನುಡಿತ ಈ ನೃತ್ಯ ಬಂಧದ ಸೊಬಗನ್ನು ಹೆಚ್ಚಿಸಿದವು.

ಈ ನೃತ್ಯದ ಮುಂದುವರಿದ ಭಾಗವಾಗಿ ಕನ್ನಡಕೃತಿ ಕಲ್ಯಾಣಿರಾಗದ ಶೃಂಗಪುರಾಧೀಶ್ವರಿಗೆ ಶಾರದೆಯ ವಿವಿಧ ಭಂಗಿಗಳು, ಅನುಗ್ರಹವನ್ನು ಬಿಂಬಿಸುವ ಸನ್ನಿವೇಶಗಳು, ವಿ. ಅಕ್ಷತಾರವರ ಗಾನಸುಧೆ ಹಾಗೂ ವಯೊಲಿನಿನ ಶ್ರೀಧರ ಆಚಾರ್ಯರ ನಾದ ಮಾಧುರ್ಯಕ್ಕೆ ಒಪ್ಪವಾಗಿ ನರ್ತಿಸಲ್ಪಟ್ಟವು. ಕಲ್ಯಾಣಿಯ ಆರೋಹಣ ಅವರೋಹಣಗಳ ಚಿತ್ರಣ ಚೆನ್ನಾಗಿತ್ತು. ಕಾರ್ಯಕ್ರಮದ ಪ್ರಧಾನ ನೃತ್ಯವಾಗಿ ಪದವರ್ಣಂವನ್ನು ಸುಮಾರಾಗಿ ಸರಿಗಟ್ಟುವ ಜಯತುಭಕೊ¤àದ್ಧಾರ ಎಂಬ ವಾದಿರಾಜರ ಕೃತಿಯು ರಾಗ, ತಾಳಮಾಲಿಕೆಗಳಿಂದ, ಜತಿ ಹಾಗೂ ಸ್ವರ ವಿನ್ಯಾಸಗಳಿಂದ ಶಾಸ್ತ್ರೀಯ ಶೈಲಿಯಲ್ಲಿ ಸಂಯೋಜಿಸಲ್ಪಟ್ಟಿದ್ದು, ರಾಮಾಯಣದ ವಿವಿಧ ಸನ್ನಿವೇಶಗಳಾದ ಸೀತಾ ಕಲ್ಯಾಣ, ಮಾಯಾಮೃಗ ಶಬರಿ ಮುಂತಾದುವುಗಳ ಅಭಿವ್ಯಕ್ತಿಯಲ್ಲಿ ಪ್ರಣತಿ ಅಭಿನಯ ಸಾಮರ್ಥಯವನ್ನು ತೆರೆದಿಟ್ಟರು. ಅಲ್ಲದೆ ಜತಿ, ಸ್ವರಗಳ ನರ್ತನದಲ್ಲಿನ ಅಂಗಶುದ್ಧಿ, ಚುರುಕುತನಗಳ ಸೊಗಡನ್ನೂ ತೋರ್ಪಡಿಸಿದರು. “ಸಾಕೋನಿನ್ನಯ ಸ್ನೇಹ’ ಎಂಬ ಕಮಾಚ್‌ ರಾಗದ ಮಿಶ್ರಛಾಪಿನ ಜಾವಳಿ ನಾಯಕಿ- ನಾಯಕರ ಮಧುರ ಸರಸ-ವಿರಸದ ಬಾಂಧವ್ಯವನ್ನು ಶೃಂಗಾರಾತ್ಮಕವಾಗಿ ಪ್ರಕಟಿಸಲು ಪ್ರಣತಿ ಶಕ್ತರಾದರೂ ಇನ್ನಷ್ಟು ಪರಿಪಕ್ವತೆ ಬೇಕೆನಿಸಿತು.

ಪ್ರದರ್ಶನದ ಮಂಗಲ ನೃತ್ಯವಾಗಿ ರೇವತಿ ರಾಗದ ತಿಲ್ಲಾನ ಪರಾಶಕ್ತಿ ದೇವಿಯ ವರ್ಣನೆಯ ಸಾಹಿತ್ಯವುಳ್ಳ ಕೃತಿಯ ಜೋಡಣೆಯಿಂದಾಗಿ ಹೊಸತನದ ಅನುಭವ ನೀಡಿತು. ಇದರಲ್ಲಿ ದೇವಿಯ ಉಗ್ರರೂಪದ ವಿವಿಧ ವರ್ಣನೆಯೂ ಅದಕ್ಕೆ ಸಮರ್ಪಕವಾಗಿ ಹೆಣೆಯಲ್ಪಟ್ಟ ತಿಲ್ಲಾನದ ಸೊಲ್ಕಟ್ಟುಗಳಿಂದಾಗಿಯೂ, ಅರುಧಿ, ಅಡವು ವಿನ್ಯಾಸ, ಚಾಮುಂಡಿಯ ವಿವಿಧ ಭಂಗಿಗಳಿಂದಾಗಿ ವಿಶೇಷವಾಗಿ ರಂಜಿಸಿತು.

Advertisement

ನೈಜ ಹಿಮ್ಮೇಳವು ಇತ್ತೀಚೆಗೆ ಸಿ. ಡಿ. ಹಿಮ್ಮೇಳದ ಹಾವಳಿಯಲ್ಲಿ ಸಂಪೂರ್ಣವಾಗಿ ಪಳೆಯುಳಿಕೆಯಾಗಿ ಸಂಭವಿಸುವ ಈ ಕಾಲಘಟ್ಟದಲ್ಲಿ ಪ್ರಣತಿ ಬಳಸಿದ ಈ ಉತ್ತಮ ಹಿಮ್ಮೇಳ ಕಲಾವಿದರು ಪ್ರದರ್ಶನದ ಯಶಸ್ಸಿನ ಸಮಪಾಲುದಾರರು. ನಟ್ಟುವಾಂಗವನ್ನು ದಕ್ಷತೆಯಿಂದ ನಡೆಸಿ ಶಿಷ್ಯೆಗೆ ಬೆಂಬಲ ನೀಡಿದ ಗುರು ವಿ| ಲಕ್ಷ್ಮೀ ಗುರುರಾಜ್‌ರವರು ಅಭಿನಂದನಾರ್ಹರು.

ಗಾಯಕಿ ಅಕ್ಷತಾ ಹಾವಂಜೆಯವರ ಮಧುರ ಶಾರೀರ, ಲಯಬದ್ಧತೆ ಪ್ರಶಂಸಾರ್ಹ. ವಯೋಲಿನ್‌ನ ಶ್ರೀಧರ ಆಚಾರ್ಯರು ವೈವಿಧ್ಯದ ನುಡಿಸಾಣಿಕೆಯಿಂದ ನೃತ್ಯಕ್ಕೆ ಪೋಷಣೆಯಿತ್ತರು. ಯಕ್ಷಗಾನ ಹಿಮ್ಮೇಳವಾದಕ (ಚಂಡೆ, ಮದ್ದಳೆ) ಚೈತನ್ಯ ಪದ್ಯಾಣರು, ತಾವು ಕಲಿತ ಮೃದಂಗ ಅಭ್ಯಾಸದ ಸಮರ್ಪಕ ಬಳಕೆಯನ್ನು ಈ ಭರತನಾಟ್ಯದಲ್ಲಿ ಬಳಸಿ ಸೈ ಎನಿಸಿಕೊಂಡರು.

ಪ್ರತಿಭಾ ಎಂ.ಎಲ್‌. ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next