ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮುಂದಿನ ನೂತನ ಮುಖ್ಯಸ್ಥರನ್ನಾಗಿ ತಮಿಳುನಾಡು ಮೂಲದ ಡಾ.ವಿ.ನಾರಾಯಣನ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿರುವುದಾಗಿ ವರದಿ ತಿಳಿಸಿದೆ.
ಹಾಲಿ ಇಸ್ರೋ ಅಧ್ಯಕ್ಷ ಅವರ ಸ್ಥಾನಕ್ಕೆ ವಿ.ನಾರಾಯಣನ್ ಅವರನ್ನು ನೇಮಕ ಮಾಡಿದ್ದು, ಜನವರಿ 14ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ನಾರಾಯಣನ್ ಅವರು ಹಿರಿಯ ವಿಜ್ಞಾನಿಯಾಗಿದ್ದು, ಪ್ರಸ್ತುತ ಕೇರಳದ ವಾಲಿಯಾಮಾಲಾದ ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಮ್ಸ್ ಸೆಂಟರ್ (LPSC)ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿಬಂದಿ ಮತ್ತು ತರಬೇತಿ ಇಲಾಖೆಯು ವಿ.ನಾರಾಯಣನ್ ಅವರ ನೇಮಕಾತಿಯ ಆದೇಶವನ್ನು ಖಚಿತಪಡಿಸಿದೆ. 2025ರ ಜನವರಿ 14ರಿಂದ ಅನ್ವಯವಾಗುವಂತೆ ಎರಡು ವರ್ಷಗಳ ಕಾಲದ ಅವಧಿಗೆ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಆಯ್ಕೆ ಸಮಿತಿಯ ಶಿಫಾರಸಿಗೆ ಕೇಂದ್ರ ಸಚಿವ ಸಂಪುಟ ಅಂಕಿತ ಹಾಕಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ವಿ.ನಾರಾಯಣನ್ ಯಾರು?
ವಿ.ನಾರಾಯಣನ್ ಅವರು 1964ರಲ್ಲಿ ಕನ್ಯಾಕುಮಾರಿಯ ನಾಗರ್ ಕೊಯಿಲ್ ಸಮೀಪದ ಮೆಲಾಕಟ್ಟು ಎಂಬಲ್ಲಿ ಜನಿಸಿದ್ದರು. 1989ರಲ್ಲಿ ಖರಗ್ ಪುರ್ ಐಐಟಿಯಲ್ಲಿ ಕ್ರಯೋಜೆನಿಕ್ ಎಂಜಿನಿಯರಿಂಗ್ ನಲ್ಲಿ ಎಂಟೆಕ್ ನಲ್ಲಿ ಫಸ್ಟ್ ರಾಂಕ್ ನೊಂದಿಗೆ ಪದವಿ ಗಳಿಸಿದ್ದರು. ನಂತರ 2001ರಲ್ಲಿ ಖರಗ್ ಪುರ್ ಐಐಟಿಯಲ್ಲಿ ಬಾಹ್ಯಾಕಾಶ ಎಂಜಿನಿಯರಿಂಗ್ ನಲ್ಲಿ ಪಿಎಚ್ ಡಿ ಪಡೆದಿದ್ದರು.
ನಾರಾಯಣನ್ ಅವರು 1984ರಲ್ಲಿ ಇಸ್ರೋ ಸಂಸ್ಥೆಗೆ ಸೇರ್ಪಡೆಗೊಂಡಿದ್ದರು. ಭಾರತೀಯ ಬಾಹ್ಯಾಕಾಶ ಯೋಜನೆಯಲ್ಲಿ ಸುಮಾರು 40 ವರ್ಷಗಳ ದೀರ್ಘಕಾಲದ ಅನುಭವ ಹೊಂದಿದ್ದಾರೆ. ಹಲವು ವರ್ಷಗಳಿಂದ ಅವರು ರಾಕೆಟ್ ಮತ್ತು ಸ್ಪೇಸ್ ಕ್ರಾಫ್ಟ್ ನ ಪ್ರೊಪಲ್ಶನ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದರು.
ಲಾಂಚ್ ವಹಿಕಲ್ಸ್ ನ ಕ್ರೈಯೋಜೆನಿಕ್ ಪ್ರೊಪಲ್ಶನ್ ಸಿಸ್ಟಮ್ಸ್ ತಯಾರಿ ಸೇರಿದಂತೆ ಇಸ್ರೋದಲ್ಲಿ ಹಲವು ಪ್ರಮುಖ ಪಾತ್ರವಹಿಸಿದ್ದರು. ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಮ್ಸ್ ಸೆಂಟರ್ ನ ನಿರ್ದೇಶಕರಾಗಿ ವಿ.ನಾರಾಯಣನ್ ಅವರು ರಾಕೆಟ್ ಗಳ ಪ್ರೊಪಲ್ಶನ್ ಸಿಸ್ಟಮ್ಸ್ ಹಾಗೂ ಸೆಟಲೈಟ್ಸ್ ನಿರ್ವಹಣೆ ಜತೆಗೆ ಉಡ್ಡಯನ ವಾಹನಗಳ ಕಂಟ್ರೋಲ್ ಸಿಸ್ಟಮ್ಸ್, ಬಾಹ್ಯಾಕಾಶ ವ್ಯವಸ್ಥೆಯಲ್ಲಿನ ಆರೋಗ್ಯ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ಇದಕ್ಕೂ ಮೊದಲು ನಾರಾಯಣನ್ ಅವರು ಹ್ಯೂಮನ್ ರೇಟೆಡ್ ಸರ್ಟಿಫಿಕೇಶನ್ ಬೋರ್ಡ್ ನ ಅಧ್ಯಕ್ಷರಾಗಿದ್ದರು. ಅಲ್ಲದೇ ವೃತ್ತಿ ಜೀವನದ ಆರಂಭದಲ್ಲಿ ಸೌಂಡಿಂಗ್ ರಾಕೆಟ್ಸ್, ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ ನ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದರು.
ಪ್ರತಿಷ್ಠಿತ ಪ್ರಶಸ್ತಿಗೆ ಭಾಜನ:
ನೂತನವಾಗಿ ಇಸ್ರೋ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿ.ನಾರಾಯಣನ್ ಅವರನ್ನು ಪ್ರತಿಷ್ಠಿತ ಪ್ರಶಸ್ತಿಗಳು ಅರಸಿ ಬಂದಿದ್ದವು. ಎಂಟೆಕ್ ನಲ್ಲಿ ಮೊದಲ ರಾಂಕ್ ಗಳಿಸಿದ್ದಕ್ಕಾಗಿ ಖರಗ್ ಪುರ್ ಐಐಟಿಯಿಂದ ಬೆಳ್ಳಿ ಪದಕ ಪಡೆದಿದ್ದರು. ದಿ ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ಚಿನ್ನದ ಪದಕ ನೀಡಿ ಗೌರವಿಸಿತ್ತು. ರಾಕೆಟ್ ಮತ್ತು ತಂತ್ರಜ್ಞಾನ ಸಂಬಂಧಿ ವಿಷಯಕ್ಕಾಗಿ ಎಎಸ್ ಐ ಪ್ರಶಸ್ತಿಗೆ ಭಾಜನರಾದ ಹೆಗ್ಗಳಿಕೆ ನಾರಯಣನ್ ಅವರದ್ದಾಗಿದೆ.