Advertisement
ರಮೀಳಾ ಉಮಾಶಂಕರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಉಪಮೇಯರ್ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಆದರೆ, ಬಿಜೆಪಿಯಿಂದ ಉಪಮೇಯರ್ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಭದ್ರೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು.
Related Articles
Advertisement
ಹೈಡ್ರಾಮ ನಡುವೆ ಆಯ್ಕೆ: ಉಪಮೇಯರ್ ಹಾಗೂ ಸ್ಥಾಯು ಸಮಿತಿ ಸದಸ್ಯರ ಚುನಾವಣಾ ಪ್ರಕ್ರಿಯೆ ಆರಂಭವಾದರೂ, ಮೂರು ಸಮಿತಿಗಳಿಗೆ ಕೆಲವೇ ಸದಸ್ಯರು ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಕಾರಣದಿಂದ ಪ್ರಾದೇಶಿಕ ಆಯುಕ್ತರು ಚುನಾವಣೆ ಪ್ರಕ್ರಿಯೆಯನ್ನು 12.30ವರೆಗೆ ಮುಂದೂಡಿದರು.
ಚುನಾವಣೆ ಪ್ರಕ್ರಿಯೆ ಮತ್ತೆ ಆರಂಭವಾದಾಗ ಮೊದಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ವೇಳೆ 13 ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಕೊನೆಗೆ ಕಾಂಗ್ರೆಸ್‌ನ ಆರ್ಯ ಶ್ರೀನಿವಾಸ್ ಹಾಗೂ ಪಕ್ಷೇತರ ಲಕ್ಷ್ಮೀನಾರಾಯಣ್ ನಾಮಪತ್ರ ಹಿಂಪಡೆದು ಉಳಿದ 11 ಸದಸ್ಯರು ಅವಿರೋಧ ಆಯ್ಕೆಯಾದರು.
ನಂತರ ನಡೆದ ನಗರ ಯೋಜನೆ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಗೆ ಕಾಂಗ್ರೆಸ್‌ನಿಂದ 7 ಸದಸ್ಯರು ಹಾಗೂ ಬಿಜೆಪಿಯಿಂದ 6 ಮಂದಿ ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಎರಡು ನಾಮಪತ್ರಗಳು ಹೆಚ್ಚಿಗೆ ಬಂದಿದ್ದರಿಂದ ಚುನಾವಣಾಧಿಕಾರಿಗಳು, ನಾಮಪತ್ರ ಹಿಂಪಡೆಯಲು ಕಾಲಾವಕಾಶ ನೀಡಿದರು. ಈ ವೇಳೆ ಕಾಂಗ್ರೆಸ್‌ನ ರಾಜಣ್ಣ ಅವರು ನಾಮಪತ್ರ ವಾಪಸ್ ಪಡೆದರು. ಆದರೆ, ಬಿಜೆಪಿ ಸದಸ್ಯರು ನಾಮಪತ್ರ ಹಿಂಪಡೆಯದೆ ಚುನಾವಣೆ ನಡೆಸಿ ಎಂದು ಒತ್ತಾಯಿಸಿದರು.
ಬಿಜೆಪಿ ಸದಸ್ಯರು ನಾಮಪತ್ರ ವಾಪಸ್ ಪಡೆಯದಿದ್ದಾಗ ಶಿವಯೋಗಿ ಸಿ. ಕಳಸದ ಅವರು, ಸದಸ್ಯರ ಆಯ್ಕೆಗೆ ಮತದಾನ ನಡೆಸಲಾಗುವುದು. ಒಮ್ಮೆ ಮತದಾನ ಪ್ರಕ್ರಿಯೆ ಆರಂಭವಾದರೆ, ಪ್ರತಿಯೊಂದು ಸದಸ್ಯ ಸ್ಥಾನಕ್ಕೂ ಚುನಾವಣೆ ನಡೆಯಲಿದೆ. ಈ ಪ್ರಕ್ರಿಯೆ ನಡೆಸಲು ಒಂದು ವಾರ ಬೇಕಾಗಬಹುದು ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಶಾಸಕರಾದ ರಾಮಲಿಂಗಾರೆಡ್ಡಿ, ಮುನಿರತ್ನ, ಬಿ.ಬಸವರಾಜು ಸೇರಿ ಇತರರು ಬಿಜೆಪಿ ಶಾಸಕರಾದ ಆರ್.ಅಶೋಕ್, ವಿಶ್ವನಾಥ್, ಸತೀಶ್‌ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದರು. ಆದರೆ, ವಿಶ್ವನಾಥ್ ಅವರು, ಚಂದ್ರಪ್ಪರೆಡ್ಡಿ ನಾಮಪತ್ರ ವಾಪಸ್ ಪಡೆದರೆ ಮಾತ್ರವೇ ನಮ್ಮ ಸದಸ್ಯರು ನಾಮಪತ್ರ ಹಿಂಪಡೆಯುತ್ತಾರೆ. ಇಲ್ಲವೇ ಚುನಾವಣೆ ನಡೆಯಲಿ ಎಂದು ಪಟ್ಟುಹಿಡಿದರು.
ಕೊನೆಗೆ ರಾಮಲಿಂಗಾರೆಡ್ಡಿ ಅವರು, ಚಂದ್ರಪ್ಪರೆಡ್ಡಿ ಅವರ ಮನವೊಲಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಿದರು. ನಂತರ ಬಿಜೆಪಿಯ ನಾರಾಯಣರಾಜು ಮತ್ತು ಗುರುಮೂರ್ತಿರೆಡ್ಡಿ ನಾಮಪತ್ರ ವಾಪಾಸ್ ಪಡೆದರು. ಇದರಿಂದ ಸಮಿತಿಗೆ 9 ಸದಸ್ಯರು ಮಾತ್ರ ಆಯ್ಕೆಯಾಗಿದ್ದು, ನಗರ ಯೋಜನೆ ಸ್ಥಾಯಿ ಸಮಿಯ ಇಬ್ಬರು ಸದಸ್ಯರ ಆಯ್ಕೆಗೆ ಮತ್ತೂಮ್ಮೆ ಚುನಾವಣೆ ನಡೆಸುವುದಾಗಿ ಚುನಾವಣಾಧಿಕಾರಿ ತಿಳಿಸಿದರು.
ಸೇಡು ತೀರಿಸಿಕೊಂಡ ಬಿಜೆಪಿ?: ಮೇಯರ್ ಚುನಾವಣೆಯಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ಮೊದಲು ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದ ಪಕ್ಷೇತರರು ಕೊನೆಯ ಕ್ಷಣದಲ್ಲಿ ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಬೆಂಬಲಿಸಿದ್ದರು.
ಆ ಹಿನ್ನೆಲೆಯಲ್ಲಿ ಪಕ್ಷೇತರ ಸದಸ್ಯ ಚಂದ್ರಪ್ಪರೆಡ್ಡಿ ಅವರಿಂದ ಒತ್ತಾಯ ಪೂರ್ವಕವಾಗಿ ನಾಮಪತ್ರ ಹಿಂಪಡೆಯುವಂತೆ ಮಾಡಿ ಅವರಿಗೆ ಅಧ್ಯಕ್ಷ ಸ್ಥಾನ ದೊರೆಯದಂತೆ ಮಾಡುವ ಮೂಲಕ ಬಿಜೆಪಿ ಸೇಡು ತೀರಿಸಿಕೊಂಡಿತು. ಕಳೆದ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್‌ರ ಪತ್ನಿ ವಾಣಿಶ್ರೀ ಸೋಲಿಗೆ ಪಾಲಿಕೆ ಸದಸ್ಯ ಚಂದ್ರಪ್ಪ ರೆಡ್ಡಿ ಕಾರಣ ಎಂಬ ಸಿಟ್ಟಿನಿಂದ ಅವರು ನಾಮಪತ್ರ ವಾಪಸ್ ಪಡೆಯುವವರಿಗೆ ವಿಶ್ವನಾಥ್ ಅವರು ಪಟ್ಟು ಬಿಡಲಿಲ್ಲ ಎಂದು ಹೇಳಲಾಗಿದೆ.
ಬಿಜೆಪಿ ಶಾಸಕರ ವಿರುದ್ಧ ಗರಂ: ತಮ್ಮ ಕ್ಷೇತ್ರದ ಪಾಲಿಕೆ ಸದಸ್ಯರನ್ನು ಪ್ರಮುಖ ಸ್ಥಾಯಿ ಸಮಿತಿಗಳ ಸದಸ್ಯರನ್ನಾಗಿಸಬೇಕೆಂಬ ವಿಚಾರ ಬಿಜೆಪಿ ಶಾಸಕರಾದ ಆರ್.ಅಶೋಕ್ ಮತ್ತು ಸತೀಶ್‌ರೆಡ್ಡಿ ಕಿತ್ತಾಟಕ್ಕೆ ಕಾರಣವಾಯಿತು. ಬೆಳಗ್ಗೆ 9 ಗಂಟೆಗೆ ಬಿಬಿಎಂಪಿ ವಿರೋಧ ಪಕ್ಷ ನಾಯಕ ಕಚೇರಿಯಲ್ಲಿ ಸಭೆ ನಡೆಸಿದ ವೇಳೆ ತಮ್ಮ ಕ್ಷೇತ್ರದ ಪಾಲಿಕೆ ಸದಸ್ಯರಿಗೆ ಪ್ರಮುಖ ಸ್ಥಾಯಿ ಸಮಿತಿಗಳಿಗೆ ನೇಮಿಸಬೇಕೆಂದು ಸತೀಶ್‌ರೆಡ್ಡಿ ಪಟ್ಟು ಹಿಡಿದರು. ಅದಕ್ಕೆ ಆರ್.ಅಶೋಕ ಒಪ್ಪದಿದ್ದಾಗ, ಸತೀಶ್ ರೆಡ್ಡಿ ಗರಂ ಆದರು. ಈ ವೇಳೆ ಸಂಸದ ಪಿ.ಸಿ.ಮೋಹನ್ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಪಡಿಸಿದರು.
ಮೀ ಟೂ ಆರೋಪ ಮಾಡಿದ ಬಿಜೆಪಿ ಸದಸ್ಯೆ: ತಮ್ಮನ್ನು ಯಾವುದೇ ಸ್ಥಾಯಿ ಸಮಿತಿಯ ಸದಸ್ಯರನ್ನಾಗಿ ಮಾಡದ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಟ್ಟೂರು ವಾರ್ಡ್‌ನ ಪಾಲಿಕೆ ಸದಸ್ಯೆ ನೇತ್ರಾ ಪಲ್ಲವಿ, ಬಿಜೆಪಿ ಮುಖಂಡರ ಮೇಲೆ ಮೀ ಟೂ ಆರೋಪ ಮಾಡಿದ್ದಾರೆ.
ಸ್ಥಾಯಿ ಸಮಿತಿ ಚುನಾವಣೆಗೂ ಮೊದಲು ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಚೆನ್ನಾಗಿರುವ ಸದಸ್ಯೆಯರನ್ನು ಕರೆಯುತ್ತಾರೆ. ಆಗ ಹೋಗದಿದ್ದರೆ ಯಾವುದೇ ಸ್ಥಾನಮಾನ ನೀಡುವುದಿಲ್ಲ ಎಂದು ಕಣ್ಣೀರು ಹಾಕಿದರು. ಆದರೆ, ನೇತ್ರಾ ಪಲ್ಲವಿ ಅವರ ಆರೋಪದ ಬಗ್ಗೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಮಾಜಿ ಡಿಸಿಎಂ ಆರ್.ಅಶೋಕ್ ಸೇರಿ ಬಿಜೆಪಿ ಮುಖಂಡರು ಯಾರೂ ಪ್ರತಿಕ್ರಿಯೆ ನೀಡಲಿಲ್ಲ.
* ಉಪಮೇಯರ್ ಚುಣಾವಣೆಗೆ ಹಾಜರಿದ್ದ ಮತದಾರರು: 219* ಸ್ಥಾಯಿ ಸಮಿತಿ ಚುನಾವಣೆಗೆ ಹಾಜರಿದ್ದ ಮತದಾರರು: 200