Advertisement

ಸಚಿವ ಸ್ಥಾನ ಈ ಬಾರಿ ಅಗ್ನಿಪರೀಕ್ಷೆ: ಸಚಿವ ಖಾದರ್‌

03:55 AM Jun 09, 2018 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ ಈ ಬಾರಿ ಗೆದ್ದು ಬಂದಿರುವ ಏಕೈಕ ಕಾಂಗ್ರೆಸಿಗ ಯು.ಟಿ. ಖಾದರ್‌. ಈಗ ಅವರಿಗೆ ಸಮ್ಮಿಶ್ರ ಸರಕಾರದಲ್ಲಿ ಸಚಿವ ಪದವಿಯೂ ಒಲಿದು ಬಂದಿದೆೆ. ಮಂಗಳೂರು ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆದ್ದಿರುವ ಖಾದರ್‌ ಅವರು ಎರಡನೇ ಬಾರಿ ಸಚಿವರಾಗಿದ್ದಾರೆ. ಈಗ ಸಮ್ಮಿಶ್ರ ಸರಕಾರದಲ್ಲಿ ಮಂತ್ರಿ ಸ್ಥಾನಕ್ಕೆ ಭಾರೀ ಪೈಪೋಟಿಯಿದ್ದರೂ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ. ಅವರಿಗೆ ಈ ಬಾರಿ ನಗರಾಭಿವೃದ್ಧಿ ಮತ್ತು ವಸತಿ ಖಾತೆ ದೊರೆತಿದೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ದ. ಕ. ಜಿಲ್ಲೆಗೆ ಆಗಮಿಸುತ್ತಿರುವ ಅವರು ‘ಉದಯವಾಣಿ’ ಜತೆ ಮಾತನಾಡಿದ್ದಾರೆ.

Advertisement

ಬಾರೀ ಪೈಪೋಟಿ ನಡುವೆಯೂ ಸಚಿವ ಸ್ಥಾನ ಗಿಟ್ಟಿಸಿರುವುದು ಹೇಗೆ ?
ನನಗೆ ಈ ಸ್ಥಾನ, ಗೌರವ ದೊರಕಲು ನನ್ನ ಕ್ಷೇತ್ರದ ಮತದಾರರು, ಕಾರ್ಯಕರ್ತರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರಿಗೆ ತಲೆಬಾಗುತ್ತೇನೆ. ಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದೆ. ಎಲ್ಲರ ವಿಶ್ವಾಸ, ಬೆಂಬಲ ದೊರಕಿದೆ. ಪಕ್ಷದ ಪ್ರಮುಖರಾದ ಡಾ| ಜಿ. ಪರಮೇಶ್ವರ್‌, ಸಿದ್ದರಾಮಯ್ಯ, ಆಸ್ಕರ್‌ ಫೆರ್ನಾಂಡಿಸ್‌, ಡಾ| ಎಂ. ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಅಜಾದ್‌, ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಎಲ್ಲ ಪ್ರಮುಖ ನಾಯಕರು ನನ್ನನ್ನು ಬೆಂಬಲಿಸಿದ್ದಾರೆ. ಇದರ ಜತೆಗೆ ಹಿಂದಿನ ಸರಕಾರದಲ್ಲಿ ನಾನು ತೋರಿದ ನಿರ್ವಹಣೆಯನ್ನು ಕೂಡ ಪರಿಗಣಿಸಿ ಮತ್ತೆ ಅವಕಾಶ ಕೊಟ್ಟಿದ್ದಾರೆ.

ಹೊಣೆಗಾರಿಕೆಯನ್ನು ಹೇಗೆ ನಿರ್ವಹಿಸುತ್ತೀರಿ ?
ನನ್ನ ಪಾಲಿಗೆ ಇದೊಂದು ಅಗ್ನಿಪರೀಕ್ಷೆ. ಜಿಲ್ಲೆಯ ಅಭಿವೃದ್ಧಿ ಮತ್ತು ಪಕ್ಷ ಕಟ್ಟುವ ಮಹತ್ತರ ಹೊಣೆಗಾರಿಕೆ ನನ್ನ ಮೇಲಿದೆ. ಈ ಎರಡೂ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಎಲ್ಲ ಜನಪ್ರತಿನಿಧಿಗಳನ್ನು ಒಗ್ಗೂಡಿಸಿ, ಜನತೆಯ ಸಹಕಾರ ಪಡೆದುಕೊಂಡು ಯಾವುದೇ ರೀತಿಯ ತಾರತಮ್ಯ ಮಾಡದೆ ರಾಜಕೀಯ ರಹಿತವಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ಕ್ಷೇತ್ರದ ಮತದಾರರು, ಪಕ್ಷದ ಕಾರ್ಯಕರ್ತರು ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಈ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಕಾರ್ಯನಿರ್ವಹಿಸುತ್ತೇನೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಕಾರ್ಯದಲ್ಲಿ ನಮ್ಮ ಎಲ್ಲ ಮುಖಂಡರು, ಹಿರಿಯರು, ಪಕ್ಷದ ಮಾಜಿ ಶಾಸಕರು, ಮಾಜಿ ಸಂಸದರ ಜತೆ ಸೇರಿ ಶ್ರಮಿಸುತ್ತೇನೆ.

ಜಿಲ್ಲಾ ಉಸ್ತುವಾರಿ ಸ್ಥಾನದ ನಿರೀಕ್ಷೆ ಇದೆಯೇ?
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಗಳ ಬಗ್ಗೆ ಸರಕಾರದಲ್ಲಿ ಇನ್ನಷ್ಟೇ ನಿರ್ಧಾರವಾಗಬೇಕಾಗಿದೆ. ಉಸ್ತುವಾರಿ ಸಚಿವನಾಗಿ ನಿಯುಕ್ತಿಗೊಂಡರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸುವ ವಿಶ್ವಾಸವಿದೆ ಎಂದು ಖಾದರ್‌ ಹೇಳಿದರು.

ಇಂದು ಜಿಲ್ಲೆಗೆ
ಸಚಿವ ಖಾದರ್‌ ಅವರು ಜೂ. 9ರಂದು ಬೆಳಗ್ಗೆ 9 ಗಂಟೆಗೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಬೆಳಗ್ಗೆ 10.30ಕ್ಕೆ ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್‌ ಭವನಕ್ಕೆ ಭೇಟಿ ನೀಡಿ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಗೌರವ ಸ್ವೀಕರಿಸುವರು. ಮಧ್ಯಾಹ್ನ 2 ಗಂಟೆಗೆ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮೇಯರ್‌, ಉಪ ಮೇಯರ್‌ ಮತ್ತು ಹಿರಿಯ ಸದಸ್ಯರ ಭೇಟಿ ಮಾಡುವರು. ಸಂಜೆ 5.30ಕ್ಕೆ ಉಳ್ಳಾಲ ದರ್ಗಾ, ರಾತ್ರಿ 7.30ಕ್ಕೆ ಸೋಮೇಶ್ವರ ದೇವಸ್ಥಾನ, 8 ಗಂಟೆಗೆ ತೊಕ್ಕೊಟ್ಟು ಸೈಂಟ್‌ ಸೆಬಾಸ್ಟಿಯನ್‌ ಚರ್ಚ್‌, 8.15ಕ್ಕೆ ತೊಕ್ಕೊಟ್ಟು ವೀರಮಾರುತಿ ವ್ಯಾಯಾಮ ಶಾಲೆ ಹಾಗೂ 8.30ಕ್ಕೆ ಮಂಗಳೂರಿನ ಬಂದರ್‌ ನ ಕೇಂದ್ರ ಜುಮ್ಮಾ ಮಸೀದಿಗೆ ಭೇಟಿ ನೀಡುವರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next