ಬದಲಾದ ಜಗತ್ತಿನಲ್ಲಿ ಭಾವನೆಗಳಿಗೆ ಬೆಲೆ ಇಲ್ಲ. ತಿಳಿಯಾದ ಮನ ಪುನಃ ಆ ಯೋಚನೆಯಿಂದ ಕಂಗೆಟ್ಟಿತ್ತಲ್ಲ. ಯಾವುದೋ ಒಂದು ಆಲೋಚನೆ ನನ್ನನ್ನು ಕಾಡುತ್ತಿದೆ. ಅದನ್ನು ಮುದ್ದಾಡಿಸುವಂತಿಲ್ಲ, ದೂರ ತಳ್ಳುವಂತಿಲ್ಲ, ದೂರ ತಳ್ಳಿದರೂ ಮತ್ತೆ ಮತ್ತೆ ನೆರಳಂತೆ ಹಿಂದೆಯೇ ಬರುತ್ತದೆ. ನೆನೆದಷ್ಟು ಅದರ ಆಳ-ಅಗಲ, ಒಲವು-ಅರಿವು ಹೆಚ್ಚುತ್ತಲೇ ಇದೆ. ಒಮ್ಮೆ ಅದು ಸಿಗದು ಸಿಗದೆಂದು ಪರಿ ಪರಿಯಾಗಿ ಮನ ಹೇಳಿದರೂ ಆಸೆ ಎನ್ನುವ ಹೂವು ಅರಳಿ ಅದರ ಹಿಂದೆಯೇ ಸುತ್ತಾಡಿಸಿ ಬಿಡುತ್ತದೆ. ಕೆಲವು ನೆನಪುಗಳು ಹಾಗೆ ತಾನೆ ನೆಮ್ಮದಿಯನ್ನೇ ಕದಡಿ ಶಾಂತಿಯನ್ನು ಮುದುಡಿ ಹೋಗುವಂತೆ ಮಾಡಿಬಿಡುತ್ತವೆ.
ನಾನೇನು ಈ ವಿಚಾರದಿಂದ ಹೊರತಾಗಿಲ್ಲ. ನನ್ನಲ್ಲಿಯೂ ಕೂಡ ಗತಿಸಿ ಹೋದ ಘಟನೆಗಳ ನೆನಪನ್ನು ನೆನೆದಾಗ ಯಾಕೆ ಸುಮ್ಮನೆ ನೆನಪೆನ್ನುವ ಮಾಯಾ ಜಿಂಕೆಯ ಹಿಂದೆ ಓಡಿ ಸಮಯವ ಕೈ ಚೆಲ್ಲಿಕೊಳ್ಳಬೇಕು, ನಮ್ಮತನವನ್ನೇ ಕೇವಲವಾಗಿ ಕಂಡವರನ್ನು ನೆನೆಯುವ ಬದಲು, ನಮ್ಮ ಒಳ್ಳೆಯ ದಿನಗಳಿಗಾಗಿ ದುಡಿಯುವವರನ್ನು ನೆನೆಯುವ ಮೊದಲು ಅನಿಸುತ್ತದೆ.
ಈ ರೀತಿಯ ಯೋಚನೆ ಮನಸ್ಸು ಚಿಂತೆಯ ಸುತ್ತ ಹೆಜ್ಜೆ ಹಾಕಲು ಶುರುಮಾಡುವಂತೆ ಮಾಡುತ್ತದೆ. ದೂರ ಹೋದವರನ್ನು ತಡೆಯಲಾಗದು, ಅವರ ನೆನಪು ಅಷ್ಟು ಸುಲಭಕ್ಕೆ ಬಿಟ್ಟುಹೋಗುವುದಿಲ್ಲ ಅಲ್ಲವೇ? ಆದರೂ ಹೋದವರ ಚಿಂತೆಯ ಗುಡಿ ಗೋಪುರ ಕಟ್ಟುವ ಬದಲು ನಮ್ಮ ಒಳಿತಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಅಪ್ಪ ಅಮ್ಮನ ಸುಖದ ಕ್ಷಣಗಳಿಗಾಗಿ ಮುನ್ನುಡಿ ಬರೆಯುವುದು ಲೇಸು. ಅವರ ಆಸೆ ಈಡೇರಿಸಬೇಕು. ಹೊಸ ಕನಸಿನ ಜತೆ ಹೆಜ್ಜೆ ಹಾಕಬೇಕು.
ನೆನಪೆನ್ನುವುದು ನಕ್ಷತ್ರದಂತೆ. ಅದು ಆಗಸದಲ್ಲೇ ಇದ್ದರೂ, ರಾತ್ರಿ ಮಾತ್ರ ಕಾಣುವುದು. ಹಾಗೆಯೇ ಈ ನೆನಪೆನ್ನುವ ನಕ್ಷತ್ರ ಮನದಲ್ಲಿ ಸದಾ ಇರುತ್ತದೆ. ಆದರೆ ಮನಸ್ಸು ಖಾಲಿಯಾದಾಗ, ಕುಗ್ಗಿದಾಗ ಕಾಡಲು ಶುರುಮಾಡುತ್ತದೆ. ಒಳ್ಳೆಯ ನೆನಪೋ, ಕೆಟ್ಟ ನೆನಪೋ, ಒಳ್ಳೆಯ ದಿನಗಳಿಗಾಗಿ ಅವುಗಳನ್ನು ಬಿಡುವುದೇ ಒಳ್ಳೆಯದು. ಕೆಟ್ಟ ನೆನಪನ್ನು ಮನಸ್ಸಲ್ಲಿಟ್ಟು ಗುರಿ ತಪ್ಪುವುದು ಬೇಡ. ಯೋಚನೆಯ ತಮಟೆಯ ಹೊಡೆದು ಅದೇ ನೆನಪಲ್ಲಿ ಕೊರಗುವುದು ಬೇಡ. ಬಿಟ್ಟು ಮುಂದುವರೆಯುವುದನ್ನು ಕಲಿಯೋಣ.
-ಗಿರೀಶ್ ಪಿ.ಎಂ.
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು