Advertisement

ನನ್ನಿಷ್ಟದ ಸಿನೆಮಾ ಯುವ ಜನರ ಆಯ್ಕೆ: ಮನಕಲುಕಿದ ‘ವಿಕೃತಿ’

10:16 PM Jul 03, 2020 | Hari Prasad |

‘ಕಟ್‌ ಟು ಕ್ರಿಯೇಟ್‌’ ಕಂಪೆನಿ ನಿರ್ಮಿಸಿರುವ ‘ವಿಕೃತಿ’ ಚಿತ್ರ 2019ರಲ್ಲಿ ಬಿಡುಗಡೆಯಾದದ್ದು. ಸೂರಜ್‌ ವೆಂಜರಮೂದು ಹಾಗೂ ಸೌಬೀನ್ ಶಹೀರ್‌ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದಾರೆ. ಎಮ್ಸಿ ಜೋಸೆಫ್‌ರ ಮೊದಲ ಚಲನಚಿತ್ರವಿದು. ಈ ಚಿತ್ರದಲ್ಲಿ ಮಲಯಾಳ ಭಾಷೆಯ ಇಬ್ಬರು ಒಳ್ಳೆಯ ನಟರು ಅಭಿನಯಿಸಿರುವುದು ವಿಶೇಷ. ಸಣ್ಣ ಎಳೆಯನ್ನು ಇಟ್ಟಕೊಂಡು ರೂಪಿಸಿರುವ ಸುಂದರ ಚಿತ್ರವೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಆ ಚಿತ್ರದ ಕುರಿತೇ ಬೆಂಗಳೂರಿನ ಜ್ಯೋತಿ ನಿವಾಸ್‌ ಕಾಲೇಜಿನ ಇಂಗ್ಲಿಷ್‌ ಎಂ.ಎ. ವಿದ್ಯಾರ್ಥಿನಿ ಪ್ರಜ್ಞಾ ಹೆಬ್ಬಾರ್ ಬರೆದಿದ್ದಾರೆ.

Advertisement

*******************************************************

ಲಾಕ್‍ಡೌನ್ ಸಮಯದಲ್ಲಿ ಹಲವು ಮಲಯಾಳ ಭಾಷೆಯ ಚಿತ್ರಗಳನ್ನು ವೀಕ್ಷಿಸಿದೆ. ನನಗೆ ಮಲಯಾಳ ಭಾಷೆ ಹಿಡಿತವಿಲ್ಲದಿದ್ದರೂ ಚಿತ್ರಗಳು ಮಾತ್ರ ಮನಸ್ಸಿಗೆ ತುಂಬಾ ಆಪ್ತವೆನಿಸುತ್ತದೆ. ಇತ್ತೀಚಿಗೆ ನೋಡಿದ ಸಿನಿಮಾಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ ಚಿತ್ರ ‘ವಿಕೃತಿ’.

ಎಮ್ಸಿ ಜೋಸೆಫ್ ನಿರ್ದೇಶನದ ಈ ಚಿತ್ರದಲ್ಲಿ ಸೂರಜ್ ಮೂಗನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ನೈಜ ಘಟನೆಯನ್ನು ಆಧರಿಸಿ ಮಾಡಿದ್ದ ಈ ಚಿತ್ರದಲ್ಲಿ ಎಲ್ಲಾ ಪಾತ್ರ ವರ್ಗದ ಅಭಿನಯ ಅದ್ಭುತ. ಸರಳ ಹಾಗೂ ಮನ ಮುಟ್ಟುವ ಕಥಾ ಹಂದರದ ಚಿತ್ರ ನನ್ನನ್ನು ಸಂಪೂರ್ಣವಾಗಿ ಆವರಿಸಿತು. ಒಂದಿಡೀ ದಿನ ಅದರ ಗುಂಗಿನಲ್ಲಿಯೇ ಇದ್ದೆ.

ಒಬ್ಬರು ಮಾಡಿದ ತಪ್ಪಿಗೆ, ಮುಗ್ಧ ಮೂಗನೊಬ್ಬ ಬಲಿಪಶುವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಾನೆ. ನಂತರ ಆತನಿಗೆ ಸಮಾಜದಲ್ಲಿ ತಲೆ ಎತ್ತಿಕೊಂಡು ಓಡಾಡುವುದೇ ಕಷ್ಟವಾಗುತ್ತದೆ. ತನ್ನ ಮನಸ್ಸಿನ ನೋವನ್ನು ಕೇವಲ ಸನ್ನೆ ಮೂಲಕ ತಿಳಿಸಬೇಕಾದ ದೈನ್ಯ ಪರಿಸ್ಥಿತಿ ಚಿತ್ರದ ನಾಯಕನದ್ದು. ಕೊನೆಗೆ ತಪ್ಪು ಮಾಡಿದವನನ್ನು ಕ್ಷಮಿಸಿ, ಮಾನವೀಯತೆಯ ಸಂದೇಶವನ್ನು ಸಾರುತ್ತಾನೆ.

Advertisement

ಚಿತ್ರದಲ್ಲಿ ಸುರಭಿ ಲಕ್ಷ್ಮಿ, ವಿನ್ಸಿ ಅಲೋಶಿಯಸ್‌ ಮತ್ತಿತರ ಅಭಿನಯವಿದೆ. ಛಾಯಾಗ್ರಹಣ ಆಲ್ಬಿಯವರದ್ದು. ಸಂಗೀತ ಬಿಜಿಬಲ್‌ ಅವರದ್ದು.

ಇಷ್ಟವಾದದ್ದು
ನಮ್ಮನ್ನು ಭಾವನಾತ್ಮಕ ಲೋಕಕ್ಕೆ ಕೊಂಡೊಯ್ಯುವ ಮನಮುಟ್ಟುವ ಹಿನ್ನಲೆ ಸಂಗೀತ. ಸಂಜ್ಞೆಯ ಭಾಷೆಯಲ್ಲೇ ಮನದಲ್ಲಿನ ತಳಮಳಗಳನ್ನು ವರ್ಗಾಯಿಸುತ್ತಾ, ಮನೆ ನಡೆಸುವ ಜವಾಬ್ದಾರಿಯನ್ನು ಬೆನ್ನಲ್ಲೇ ಹೊತ್ತು, ತನ್ನ ನೋವನ್ನು ನುಂಗಿಕೊಂಡು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ತಂದೆಯ ಪಾತ್ರ ಹೃದಯವನ್ನು ಆರ್ದ್ರವನ್ನಾಗಿಸುತ್ತದೆ. ಚಿತ್ರವು ಹೆಚ್ಚಿನ ಕಡೆಗಳಲ್ಲಿ ಸಂಭಾಷಣೆಯಿಲ್ಲದೇ ಕೇವಲ ಮೂಕಾಭಿನಯದಲ್ಲೇ ಮುಂದೆ ಸಾಗುತ್ತದೆ. ಈ ಮೌನದ ಭಾಷೆಯು ನನ್ನನ್ನು ಭಾವಪರಶಳನ್ನಾಗಿಸಿತು.

ನೈಜ ಘಟನೆಯನ್ನು ಸಿನಿಮಾ ಭಾಷೆಯಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ಒಂದು ಪುಟ್ಟ ಕಥೆಯನ್ನು ಇಟ್ಟುಕೊಂಡು, ಅನಗತ್ಯ ದೃಶ್ಯಗಳಿಲ್ಲದೆ ಚೆನ್ನಾಗಿ ನಿರೂಪಿಸಿದ್ದಾರೆ. ಸಿನಿಮಾದ ಕ್ಲೈಮಾಕ್ಸ್ ನಲ್ಲಿ ಅಪರಾಧಿಯ ತಪ್ಪನ್ನು ನಾಯಕ ಮನ್ನಿಸುತ್ತಾನೆ. ಈ ಅಂಶವೂ ನನಗೆ ಬಹಳ ಇಷ್ಟವಾಯಿತು. ಇದಲ್ಲದೆ ಬದುಕಿನ ಬಗ್ಗೆ ನಾವೆಲ್ಲರೂ ಕಲಿಯಬೇಕಾದ ಸಂಗತಿ ಇದರಲ್ಲಿದೆ.

ಚಿತ್ರದ ಅಭಿನಯಕ್ಕಾಗಿ ಸೂರಜ್‍ಗೆ ಅತ್ಯುತ್ತಮ ನಟ ಪ್ರಶಸ್ತಿಯೂ ದೊರೆತಿದೆ. ಎಲ್ಲರೂ ನೋಡಲೇಬೇಕಾದ ಚಿತ್ರ, ನೆಟ್‍ಫ್ಲಿಕ್ಸ್ ನಲ್ಲಿ ಲಭ್ಯವಿದೆ.


– ಪ್ರಜ್ಞಾ ಹೆಬ್ಬಾರ್

Advertisement

Udayavani is now on Telegram. Click here to join our channel and stay updated with the latest news.

Next