Advertisement
ಏಕೆಂದರೆ ಪ್ರತಿ ದಿನ ಬೆಳಗ್ಗೆ 8.30ಕ್ಕೆ ಕೆಲಸ ಶುರು ಮಾಡಬೇಕು ಎಂದು ಒಪ್ಪಂದ ಇದ್ದರೂ ಕೂಡ ತಿಮ್ಮಣ್ಣ ತಲುಪುತಿದ್ದರೆ 8.30ರ ಅನಂತರ. ಇನ್ನು ಬಂದು ಒಂದು ಸುತ್ತು ಕಾಫಿ ಕುಡಿದು, ನನ್ನ ಅಜ್ಜಿಯ ಬಳಿ ಹೆಂಡತಿಯ ಆರೋಗ್ಯದ ಬಗ್ಗೆ ಅಪ್ಡೆàಟ್ಸ್ ನೀಡಿ, ಮಗ ಸೊಸೆಯ ಬಗ್ಗೆ ಚಾಡಿ ಹೇಳಿ, ಎಲೆ ಅಡಿಕೆ ಹಾಕಿ, ಅರ್ಧ ಗಂಟೆ ತನ್ನ ಕತ್ತಿಯನ್ನು ಮಸೆಯುವ ನೆಪದಲ್ಲಿ ಗಂಟೆ ಹತ್ತಾಗಿರುತ್ತಿತ್ತು.
Related Articles
Advertisement
ಆದರೆ, ಅವರ ಮನೆಯ ಪ್ರತಿಯೊಂದು ಸುದ್ದಿಯೂ ನಮ್ಮ ಮನೆಗೆ ತಲುಪಿಸುತ್ತಿದ್ದರು. ನನ್ನ ಅಜ್ಜಿಯ ಬಳಿ ಆಗಲಿ ಅಥವಾ ನನ್ನ ಅಮ್ಮನ ಬಳಿ ಆಗಲಿ ನಿತ್ಯದ ಎಲ್ಲ ವರದಿ ತಲುಪಿಸುತ್ತಿದ್ದರು.
ಅವರು ಹೇಳುವಾಗ ಎಲ್ಲವನ್ನೂ ಗಮನವಿಟ್ಟು ಕೇಳಿಸಿಕೊಂಡು, ಅವರು ಹೋದ ಅನಂತರ ಚಿಕ್ಕ ವಿಷಯವನ್ನು ಎಷ್ಟು ಗೋಳಾಟದಂತೆ ಹೇಳುತ್ತಾನೆ ಎಂದು ಈ ಅತ್ತೆ ಸೊಸೆ ಹೇಳಿಕೊಳ್ಳುತ್ತಿದ್ದರು. ತಿಮ್ಮಣ್ಣ ಮಾಡುತ್ತಿದ್ದದ್ದು ಕೂಡ ಹಾಗೆಯೇ. ಎಲ್ಲ ಸಣ್ಣ ವಿಷಯಗಳನ್ನು ತಮ್ಮ ಮಾರಾಯ್ತಿ ಏನಾಯ್ತು ಗೊತ್ತಾ? ಎಂದು ರಾಗದಲ್ಲಿ ಹೇಳಿ ಹೇಳಿ ಅದು ಗೋಳಾಟವಾಗಿ ಕೇಳಿಸುತ್ತಿತ್ತು.
ಈ ರೀತಿ ಪಟ್ಟಾಂಗ ಹೊಡೆಯುವುದು ಕೆಲಸ ತಪ್ಪಿಸುವುದಕ್ಕೆ ನೆಪವೆಂದು ಎಲ್ಲರೂ ಹೇಳಿಕೊಳ್ಳುತ್ತಿದ್ದದ್ದು ನನಗೆ ನೆನಪಿದೆ. ಅವನನ್ನು ಕರೆದುಕೊಂಡರೆ ಯಾವ ಕೆಲಸವೂ ಮುಗಿಯುವುದಿಲ್ಲ, ಕೇವಲ ಮಾತಾಡಿ ಕಾಲ ಕಳೆಯುತ್ತಾನೆ ಎನ್ನುತ್ತಿದ್ದರು.
ಇಷ್ಟು ವಯಸ್ಸಾದ ತಿಮ್ಮಣ್ಣನನ್ನು ನನ್ನ ಅಪ್ಪ ಕೇವಲ ದಾಕ್ಷಿಣ್ಯದಿಂದ ಇನ್ನೂ ಇಟ್ಟುಕೊಂಡಿದ್ದರು. ಕೆಲವೊಮ್ಮೆ ಮಳೆಗಾಲದ ಸಮಯದಲ್ಲಿ ತೋಟದ ತುದಿಯ ಹಳ್ಳದ ಬದಿ ಕೆಲಸ ಮಾಡುತ್ತಿದ್ದಾಗ ಎಲ್ಲಿ ನೀರಿನ ರಭಸಕ್ಕೆ ಸಿಕ್ಕಿ ಹೋಗುತ್ತಾರೋ ಎಂದು ಭಯವಾಗುತಿತ್ತು.
ಈಗ ಮಾಡರ್ನ್ ಕಾಲದಲ್ಲಿ ಎಲ್ಲರೂ ತಮ್ಮ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ತಮ್ಮ ಮನಸ್ಸಿನ ಎಲ್ಲ ಮಾತುಗಳನ್ನು, ಎಷ್ಟೇ ಚಿಕ್ಕ ವಿಷಯವಾದರೂ ಸರಿ ಹೇಗೆ ಗೆಳೆಯರ ಬಳಿ ಅಥವಾ ತಜ್ಞರಾದ ಥೆರಪಿಸ್ಟ್‌ಗಳ ಬಳಿ ಮತ್ತೆ ಮತ್ತೆ ಹೇಳಿಕೊಂಡು ಮನ ಹಗುರ ಮಾಡಿಕೊಳ್ಳುತ್ತಾರೋ, ಅದೇ ಅಲ್ಲವೇ ತಿಮ್ಮಣ್ಣ ಸಹ ಮಾಡುತ್ತಿದ್ದದ್ದು.
ತಮ್ಮ ಮನದ ಪುಟ್ಟ ಪುಟ್ಟ ಅಸಮಾಧಾನಗಳನ್ನು ಬೇರೆಯವರೊಂದಿಗೆ ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದರು. ನಾವು ಮಾಡಿದಾಗ ಥೆರಪಿ: ತಿಮ್ಮಣ್ಣ ಮಾಡಿದಾಗ ಸೋಮಾರಿಯ ಗೋಳಾಟ.
-ಅನನ್ಯ ಕೂಸುಗೊಳ್ಳಿ,
ಸಂತ ಅಲೋಶಿಯಸ್