ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟವು ತ್ವರಿತವಾಗಿ ಕ್ಷಿಣಿಸುತ್ತಿದೆ. ಇದಕ್ಕೆ ಮೂಲ ಕಾರಣವೇ ಮಾನವ. ಮಾನವನ ಅತಿಯಾದ ಆಸೆಯಿಂದ ಇಂದು ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಭೂಮಿಯಲ್ಲಿ ನೆಮ್ಮದಿಯ ಜೀವನವನ್ನು ನಡೆಸುತ್ತಾ ಹೋಗುವುದನ್ನು ಬಿಟ್ಟು ಈ ಸುಂದರವಾದ ಪ್ರಕೃತಿಯಲ್ಲಿರುವ ಸಂಪನ್ಮೂಲಗಳನ್ನು ತನ್ನ ದುರಾಸೆಗಾಗಿ ಬಲಿತೆಗೆದುಕೊಳ್ಳುತ್ತಿದ್ದಾನೆ.
ಹಿಂದಿನ ಕಾಲದಲ್ಲಿ ಕೆರೆ, ಬಾವಿ, ನದಿಯ ನೀರನ್ನು ಅನಾಯಾಸವಾಗಿ ಕೃಷಿ, ದಿನನಿತ್ಯದ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರು. ಭೂಮಿಯಲ್ಲಿರುವ ನೀರಿನ ಮಟ್ಟ ಕಡಿಮೆಯಾಗುತ್ತಾ ಹೋದಂತೆ ಕೊಳವೆ ಬಾವಿಯನ್ನು ಕೊರೆಯಲು ಪ್ರಾರಂಭವಾಯಿತು. ಕೆರೆ, ನದಿ, ಬಾವಿಯ ನೀರನ್ನು ಬಿಟ್ಟು ಕೊಳವೆ ಬಾವಿಯನ್ನು ಕೊರೆದು ಅವುಗಳ ನೀರನ್ನು ಬಳಸಲಾರಂಭಿಸಿದರು. ಇದರಿಂದ ಭೂಮಿಯಲ್ಲಿ ಇರುವ ತೇವಾಂಶವು ಕಡಿಮೆಯಾಗಿ ಅಂತರ್ಜಲ ಮಟ್ಟವು ಕುಸಿಯಲು ಕಾರಣವಾಯಿತು. ಅನಂತರ ದಿನಗಳಲ್ಲಿ ಕಾಡು ನಾಶವು ಹೆಚ್ಚಾಗಿ ಕಂಡುಬಂತು. ಇದರಿಂದ ಮಳೆ ಬಾರದೆ ಇದ್ದಾಗ ಭೂಮಿಯ ಮೇಲಿನ ನೀರಿನ ಅಂಶವು ಕಡಿಮೆಯಾಗತೊಡಗಿತು.
ಮಾನವನು ತನ್ನ ಏಳಿಗೆಯನ್ನು ಕಾಣಲು ನೀರಿನ ಮೂಲಗಳಾದ ಕೆರೆ, ನದಿ, ಹಳ್ಳ ಕೊಳ್ಳ ಬಾವಿ ಇತ್ಯಾದಿಗಳನ್ನು ಮುಚ್ಚುತ್ತಾ ಬಂದ. ಆ ಸ್ಥಳಗಳಲ್ಲಿ ಬೃಹತ್ ಕಟ್ಟಡಗಳು, ಕೈಗಾರಿಕೆ, ಕಾರ್ಖಾನೆಗಳನ್ನು ನಿರ್ಮಾಣ ಮಾಡಿ ನೀರಿನ ಮೂಲಗಳು ಇಲ್ಲದ ಹಾಗೆ ಮಾಡಿ. ಇತ್ತೀಚಿನ ದಿನಗಳಲ್ಲಿ ಬೇಸಗೆ ಆರಂಭವಾಗುವ ಮೊದಲೇ ಬಿಸಿಲ ತಾಪ ಹೆಚ್ಚಾಗಿ ಇದ್ದ ನೀರಿನ ಮೂಲಗಳು ಬತ್ತಿಹೋಗುತ್ತಾ ಇವೆ.
ಕುಡಿಯಲು ನೀರು ಇಲ್ಲದ ಪರಿಸ್ಥಿತಿಯನ್ನು ಹಲವು ಹಳ್ಳಿಗಳಲ್ಲಿ ಕಾಣುತ್ತೇವೆ. ಮಾನವನ ದುರಾಸೆಯಿಂದ ಮೂಕ ಪ್ರಾಣಿಗಳು ತನಗೆ ಆಹಾರವಿಲ್ಲದೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ನೀರು ಬೇಕು ಎಂದಾಗ ಭೂಮಿಯನ್ನು ಎಷ್ಟು ಕೊರೆದರೂ ನೀರು ಸಿಗದೆ ಇರುವ ಪರಿಸ್ಥಿತಿಯನ್ನು ತಲುಪುತ್ತಿದ್ದೇವೆ. ಇನ್ನು ಮುಂದೆಯಾದರೂ ನೀರನ್ನು ಮಿತವಾಗಿ ಬಳಸುತ್ತಾ ಹೋಗಬೇಕಾಗುತ್ತದೆ.
ಮುಂದಿನ ದಿನಗಳಲ್ಲಿ ನೀರಿನ ದುಂದುವೆಚ್ಚ ಮುಂದುವರಿಯುತ್ತಾ ಹೋದರೆ ಈ ಭೂಮಿಯು ಬರಡಾಗಿ ಯಾವುದೇ ರೀತಿಯ ಸಸ್ಯಗಳು, ಪ್ರಾಣಿಸಂಕುಲಗಳು ಇಲ್ಲದೆ ಹೋಗಬಹುದು. ಹಾಗಾಗಿ ಮುಂದಿನ ಪೀಳಿಗೆಗೆ ನೀರು ಎಲ್ಲಿದ ಉತ್ಪತ್ತಿಯಾಗುತ್ತದೆ ಹಾಗೂ ಅಂತರ್ಜಲ ಅಂದರೆ ಏನು ಗೊತ್ತಿರದ ಕಾಲ ಕೂಡ ಬರಬಹುದು. ಆದ್ದರಿಂದ ನೀರನ್ನು ಮಿತವಾಗಿ ಬಳಸುವ ಹಾಗೂ ಅಂತರ್ಜಲದ ಸಂರಕ್ಷಣೆಯನ್ನು ಮಾಡುತ್ತಾ ಮುಂದಿನ ಯುವ ಪೀಳಿಗೆ ಹಾಗೂ ಭೂಮಿಯಲ್ಲಿ ವಾಸಿಸುವ ಸಂಕಲ್ಪ ಜೀವರಾಶಿಗಳಿಗೆ ನೀರನ್ನು ಉಳಿಸೋಣ.
-ರಕ್ಷಿತಾ ಪೂಜಾರಿ
ಕಾರ್ಕಳ