Advertisement
ಸಮಯ ತನ್ನ ಪಾಡಿಗೆ ಮುಂದೆ ವೇಗವಾಗಿ ಸಾಗುವುದೇ ಹೊರತು ಹಿಂದೆ ಚಲಿಸದು. ಆದರೆ ನಾವು ಸಮಯದ ಜತೆ ಸಾಗುತ್ತಲೇ ಇರಬೇಕು, ನಮ್ಮ ಕಾರ್ಯಸಿದ್ಧಿಗೆ ನಾವು ಅದರೊಂದಿಗೆ ಹೋರಾಡಲೇಬೇಕು. ಆಗ ಮಾತ್ರ ಕಾಲದ ವೇಗದೊಂದಿಗೆ ನಾವು ಸರಿ ಸಮನಾಗುವ ಪ್ರಯತ್ನದತ್ತ ಹೆಜ್ಜೆ ಹಾಕಬಹುದು.
Related Articles
Advertisement
ಕಾಲ ನಿಂತ ನೀರಲ್ಲ ಅದು ಸಾಗಲೇಬೇಕು. ಅದು ಕಾಲನೀತಿ ನಿಯಮ. ಆದರೆ ನಾವು ಕಾಲದೊಂದಿಗೆ ಓಡುತ್ತಿದ್ದರೆ ಮಾತ್ರ ಕನಸುಗಳತ್ತ ಸಾಗುವ ಭರವಸೆ ನಮ್ಮೊಳಗೇ ಚಿಗುರಬಹುದು . ಸಮನಾಗಿ ಸಮಯಕ್ಕೆ ಹೊಂದಿಕೊಂಡು ಸಮಯದ ಹೊಂದಾಣಿಕೆಯ ಅರಿವು ನಮಗೆ ಬಹಳ ಮುಖ್ಯ.
ವೇಗವಾಗಿ ಸಾಗುತ್ತಿರುವ ಕಾಲವನ್ನು ಹಿಡಿದು ನಿಲ್ಲಿಸುವುದು ಅಸಾಧ್ಯ. ಅದರೊಂದಿಗೆ ನಾವು ಹೊಂದಿಕೊಂಡು ಸಾಗುವುದೇ ಜೀವನ. ನಾಳೆ ಎಂಬುದು ನಮ್ಮದಲ್ಲ . ಸಮಯ ಕ್ಷಣಿಕ ನಾಳೆ ಎಂಬುದನ್ನು ಅದು ಕಾಯುವುದಿಲ್ಲ. ಇಂದು ಏನಿದೆ ಅದೇ ವಿಶೇಷ, ಅದೇ ಅದ್ಭುತ.
ಇಂದು ಏನಿದೆ ಅದು ಅಮೂಲ್ಯ. ಅದು ಕಳೆದು ಹೋದರೆ ಮತ್ತೆ ಎಂದಿಗೂ ಮರಳಿಬಾರದು. ನಮ್ಮ ಬದುಕಿನ ಸಾಗರದಲ್ಲಿ ಸಮಯದ ಹಾಗೆಯೇ ಸಂತೋಷ, ದುಃಖವೂ ಕೂಡ. ಇಂದು ಸಂತಸವಿದ್ದರೆ ನಾಳೆ ದುಃಖವಿರಬಹುದು. ಅದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ಕಳೆದ ಸಮಯ ಮತ್ತೆ ಬರುವುದಿಲ್ಲ ಎಂದು ತಿಳಿದರೂ ನಾವು ಅಜಾಗರೂಕತೆ, ಆಲಸ್ಯದಿಂದ ಅದನ್ನು ವ್ಯರ್ಥ ಮಾಡುತ್ತೇವೆ. ಆದರೆ ಒಂದೊಂದು ನಿಮಿಷಗಳನ್ನು ವ್ಯರ್ಥ ಮಾಡದೆ ನಮ್ಮ ಗುರಿಗೆ ಅದನ್ನು ಮೀಸಲಿಟ್ಟರೆ ಸಮಯವು ಸಾಧನೆಗೆ ಬಹುದೊಡ್ಡ ಕೊಡುಗೆ ನೀಡಬಹುದು. ಸಮಯ ವ್ಯರ್ಥ ಮಾಡದೆ ಅದನ್ನು ಸದುಪಯೋಗಪಡಿಸಿಕೊಳ್ಳುವತ್ತ ನಾವು ಚಿತ್ತ ಹರಿಸಬೇಕಾಗಿದೆ. ಇದು ಸಾಧನೆಗೆ ದಾರಿಯಾಗುತ್ತದೆ.
-ವಿಜಯಲಕ್ಷ್ಮೀ ಬಿ. ಕೆಯ್ಯೂರು,
ವಿವೇಕಾನಂದ ಕಾಲೇಜು ಪುತ್ತೂರು