Advertisement

UV Fusion: ಕಾಣೆಯಾಗುತ್ತಿಹೆನು ನಾನು

01:11 PM Nov 29, 2023 | Team Udayavani |

ನಾನು ಅಡವಿ. ಯಾರ ಭಯವಿಲ್ಲದೆ ನನ್ನ ತಾಯಿಯ ಮಡಿಲ ಬೆಚ್ಚಗಿನ ಕಾವಲ್ಲಿ ಸದಾ ನಗು ನಗುತ್ತಾ ಬದುಕುತ್ತಿದ್ದೆ. ಧರಣಿ ನನ್ನ ತಾಯಿ. ನಾನು ಸದಾ ನನ್ನ ಪ್ರತಿ ಬೇರುಗಳಿಂದ ಅವಳನ್ನು ಅಪ್ಪಿಕೊಂಡೆ ಇರುತ್ತಿದ್ದೆ. ನನ್ನ ತಾಯಿಗೆ ಹಸುರು ಬಣ್ಣದ ಕಿರೀಟ ತೊಡಿಸಿ, ಹಸಿರೆಲೆಗಳ ನಡುವೆ ಅರಳಿ ಸುವಾಸನೆ ಹೊರಸೂಸುವ ಬಣ್ಣ ಬಣ್ಣದ ಹೂಗಳನ್ನು ಕಟ್ಟಿ ಉದ್ದವಾದ ಅವಳ ಕೇಶರಾಶಿಗೆ ಪುಷ್ಪಗಳಿಂದ ಅಲಂಕರಿಸುತ್ತಿದ್ದೆ. ಹಕ್ಕಿಗಳ ಸುಮಧುರ ಸದ್ದನ್ನು ಅವಳ ಕಾಲ್ಗೆಜ್ಜೆಯ ನಾದದಂತೆ ಕೇಳುತ್ತಿದ್ದೆ. ಸದಾ ನನ್ನ ರೆಂಬೆ ಕೊಂಬೆಗಳನ್ನು ಜೋರಾಗಿ ಬೀಸಿ ತಂಪಾಗಿ ಬೀಸುವ ಗಾಳಿಯಿಂದ ಆಕೆಯನ್ನು ಮುದಗೊಳಿಸುತ್ತಿದ್ದೆ.

Advertisement

ಪ್ರತೀ ಕ್ಷಣದಲ್ಲೂ ನನ್ನ ತಾಯಿಯ ಪ್ರೀತಿಯ ಮಗುವಾಗಿ ಬೆಳೆಯುತ್ತಿದ್ದೆ. ಪುಷ್ಪಗಳ ಮಕರಂದವನ್ನು ಹೀರುವ ಪಾತರಗಿತ್ತಿ, ಪುಟಾಣಿ ಹಕ್ಕಿಗಳ ಸ್ನೇಹದಲ್ಲಿ ಭಾವಪರವಶಳಾಗಿದ್ದೆ. ಮಿಡತೆಗಳ ಗುಯ್‌ ಗುಯ್‌ ಸದ್ದು, ಕೋಗಿಲೆಯ ಕುಹೂ ಕುಹೂ ಧ್ವನಿ, ಪ್ರತೀ ಹಕ್ಕಿಗಳ ಸಂಗೀತದ ಜತೆಗೆ ನಾನು ನೃತ್ಯ ಮಾಡುತ್ತಿದ್ದೆ. ತಣ್ಣನೆ ಬೀಸುವ ತಂಗಾಳಿ, ಝುಳು ಝುಳು ಹರಿವ ನೀರು, ನನ್ನನ್ನು ಗಟ್ಟಿಯಾಗಿ ಹಿಡಿದಿಟ್ಟ ಮಣ್ಣು ಇವೆಲ್ಲವುಗಳಿಗೆ ತಲೆಬಾಗಿ ನಮಸ್ಕರಿಸುತ್ತಿದ್ದೆ. ನನ್ನ ಸಂತೋಷ  ಜಿನುಗುತ್ತ ಮುಗಿಲು ಮುಟ್ಟಿತ್ತು.

ಹೀಗೆ ಸದಾ ಸಂತೋಷದಿಂದ ಬೆಳೆಯುತ್ತಿದ್ದ ನನಗೆ, ಸಂತೋಷ ಅಲ್ಪ ಹೊತ್ತು ದುಃಖ ಜೀವನವಿಡೀ ಎಂಬಂತೆ ಒಂದು ದೊಡ್ಡ ಆಘಾತ ನನ್ನ ಮುಂದೆ ಬಂದು ಬಿಟ್ಟಿತ್ತು. ಅದುವೇ ಮಾನವ. ತಾಯಿಯ ಬೆಚ್ಚಗಿನ ಅಪ್ಪುಗೆಯಲ್ಲಿ ಮಲಗಿದ್ದ ನನ್ನನ್ನು ಬುಡಸಮೇತ ಕಿತ್ತೆಸೆಯುವ ಕಾರ್ಯ ಮಾನವ ಮಾಡುತ್ತಿದ್ದ. ನಾನು ಎಷ್ಟೇ ಅತ್ತರೂ, ಗೋಗರೆದರೂ ಅದನ್ನು ಕೇಳುವ ತಾಳ್ಮೆ ಆತನಿಗಿರಲಿಲ್ಲ.

ನನ್ನ ಕೆಲವೊಂದು ವೃಕ್ಷಗಳನ್ನು ಕತ್ತರಿಸಿ ಸಣ್ಣ ಸೂರನ್ನು ಕಟ್ಟಿ ವಾಸಿಸಲು ಪ್ರಾರಂಭಿಸುತ್ತಾನೆ. ನಾನು ಒಂದೆರಡು ಮರಗಳೆಂದು ಸುಮ್ಮನಾಗಿ ಬಿಟ್ಟಿದ್ದೆ. ಆದರೆ ಮಾನವನ ಅಟ್ಟಹಾಸ ಇಷ್ಟಕ್ಕೆ ಮುಗಿಯುವಂತೆ ಕಾಣಲಿಲ್ಲ. ಹೊಸ ಹೊಸ ತಂತ್ರಜ್ಞಾನವನ್ನು ಬಳಸಿ ನನ್ನನ್ನು ನಾಶಗೊಳಿಸುತ್ತಾ ಬಂದ. ಸದಾ ನನ್ನ ಬೇರುಗಳು ಹರಿದಾಡುತ್ತಿದ್ದ ಜಾಗವನ್ನು ಬರಿದಾಗಿಸಿ ಅದೆಂಥದೋ ಕಾಂಕ್ರೀಟು ರಸ್ತೆ ನಿರ್ಮಿಸಿದ, ರೆಂಬೆ ಕೊಂಬೆಗಳನ್ನು ಮುಗಿಲೆತ್ತರಕ್ಕೆ ಚಾಚುತ್ತಿದ್ದ ನನ್ನನ್ನು ನಾಶಗೊಳಿಸಿ ಬಾನೆತ್ತರಕ್ಕೆ ಕಟ್ಟಡಗಳನ್ನು ಕಟ್ಟಲು ಪ್ರಾರಂಭಿಸಿದೆ.

ಹೀಗೆ ಹಳ್ಳಿ, ಗ್ರಾಮ, ನಗರ, ಪಟ್ಟಣಗಳನ್ನು ಸೃಷ್ಟಿಸಿದ. ಉದ್ದ ಉದ್ದವಾದ ಕಂಬಗಳಿಗೆ ತಂತಿಗಳನ್ನು ನೇತುಹಾಕಿ ಸದಾಕಾಲ ಸಂತೋಷದಿಂದ ಹಾಡಿ ಕುಣಿಯುತ್ತಿದ್ದ ನನ್ನ ಸ್ನೇಹಿತರ (ಪ್ರಾಣಿ ಪಕ್ಷಿಗಳ)ಅಳಿವಿಗೆ ಕಾರಣನಾದ.

Advertisement

ಸ್ವಾಧಿಷ್ಟವಾದ, ಆರೋಗ್ಯಯತವಾದ ಮತ್ತು ರುಚಿಕರವಾದ ಹಣ್ಣುಗಳು ಬೆಳೆಯುತ್ತಿದ್ದ ಬೃಹತ್‌ ಮರಗಳನ್ನು ಕಡಿದು ಕೈಗೆಟುಕುವಷ್ಟು ಅಂದರೆ ಮನುಷ್ಯನಷ್ಟೇ ಉದ್ದವಾದ ಮರವೆಂದು ತಿಳಿಯುವ ಹಣ್ಣಿನ ಗಿಡಗಳನ್ನು ನೆಡಲು ಪ್ರಾರಂಭಿಸಿದ. ಆಗಿನ ಮರಗಳಲ್ಲಿ ಮರದಲ್ಲೇ ಕಾಯಿಗಳು ನೈಸರ್ಗಿಕವಾಗಿ ಹಣ್ಣಾಗುತ್ತಿದ್ದವು. ಆದರೆ ಇತ್ತೀಚೆಗೆ ವಿಷಕಾರಿಗಳನ್ನು ಸೇರಿಸಿ ಹಣ್ಣಾಗಿಸಲಾಗುತ್ತದೆ. ನನ್ನಲ್ಲಿ ಬೀಸುವ ಶುದ್ಧ ಗಾಳಿಯ ತಂಪು ಸಾಕಾಗದೆ ಕೃತಕ ಯಂತ್ರಗಳನ್ನು ಬಳಸಲಾರಂಭಿಸಿದ. ಕ್ಷಣ ಕ್ಷಣಕ್ಕೂ ನನ್ನ ಅಳಿವಿನ ಅಂಚಿಗೆ ದೂಡಲಾರಂಭಿಸಿದ.

ನೀವೇ ಒಂದೊಮ್ಮೆ ಕುಳಿತು ಯೋಚಿಸಿ ಒಬ್ಬ ತಾಯಿ ತನ್ನ ಮಗುವನ್ನು ಕಳೆದುಕೊಂಡು ಬದುಕಬಲ್ಲಳೇ? ಅಥವಾ ಮಗುವು ತನ್ನ ತಾಯಿಯನ್ನು ಮರೆತು ಬದುಕಬಹುದೆ?.  ತಾಯಿ ಮಗುವಿನ ಬಂಧ ಎಂದೂ ಮುಗಿಯದಂಥದ್ದು. ಒಂದು ಸಣ್ಣಗಾಯವಾದಾಗ ನೋವು ತಡೆಯಲಾರದೆ ಅಮ್ಮಾ ಎಂದು ಚೀರಾಡುವ ನೀವು ಅದೇ ನನ್ನನ್ನು ಕತ್ತರಿಸುವಾಗ ನನ್ನ ನೋವು ನಿಮಗೆ ಏಕೆ ತಿಳಿಯಲಿಲ್ಲ. ಮನುಷ್ಯರಾದ ನಿಮಗಷ್ಟೆ ಭಾವನೆಗಳಲ್ಲ. ಪ್ರತೀ ಕ್ಷಣದಲ್ಲೂ ನಮ್ಮನ್ನು ಅವಲಂಭಿಸಿ ಬದುಕುವಿರಲ್ಲ, ನಮಗೂ ಭಾವನೆ ಇದೆ.

ಒಬ್ಬ ತಾಯಿ ತನ್ನ ಕಣ್ಣ ಮುಂದೆ ಮಗುವಿನ ನಾಶವನ್ನು ಹೇಗೆ ಸಹಿಸಿಕೊಳ್ಳುತ್ತಾಳೆ ಹೇಳಿ. ನೈಸರ್ಗಿಕ ವಿಕೋಪ ಇದು ಭೂಮಿ ತಾಯಿ ನನ್ನ ನಾಶವನ್ನು ಸಹಿಸಲಾರದೆ ಇಡೀ ಮಾನವ ಜನ್ಮದ ವಿರುದ್ಧತೀರಿಸಿಕೊಳ್ಳುವ ಪ್ರತೀಕಾರ. ಒಂದೆಡೆ ಜನ ವಿಪರೀತ ಬಿಸಿಲಿನ ತಾಪಕ್ಕೆ ಬೆಂದರೆ, ಇನಷ್ಟು ಜನ ಪ್ರವಾಹಗಳಿಗೆ ತುತ್ತಾಗಿ ಸಾವನಪ್ಪುತ್ತಿದ್ದಾರೆ. ಭೂಮಿ ತಾಯಿಯು ಎಷ್ಟೆಂದು ಮನುಷ್ಯರ ಅಟ್ಟಹಾಸವನ್ನು ತಡೆಯಲು ಸಾಧ್ಯ. ತಾಯಿ ಎಂದು, ಕ್ರೂರಿಯಲ್ಲ ಆಕೆಯ ಈ ಸ್ವಭಾವಕ್ಕೆ ಮಾನವನ ದುರಾಸೆಗಳೇ ಕಾರಣ. ನಮ್ಮನ್ನು ನಾಶಗೊಳಿಸಿ ನಿಮ್ಮ ಉಸಿರಿಗೆ ನೀವೆ ಹೊಣೆಯಾಗದಿರಿ.  ಹುಟ್ಟು ಸಾವು ಅನ್ನೋದು ದೇವರ ನಿರ್ಣಯ. ಪ್ರಕೃತಿ ನಮ್ಮ ತಾಯಿ, ಅವಳನ್ನು ರಕ್ಷಿಸಲು ಪ್ರಯತ್ನಿಸಿ, ಆಗದಿದ್ದರೆ ಯಾವುದೇ ಕಾರಣಕ್ಕೂ ನಾಶಗೊಳಿಸದಿರಿ.

-ರಕ್ಷಿತಾ, ಆಚಾರ್ಯ

ಎಂಪಿಎಂ ಕಾಲೇಜು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next