Advertisement
ಬಹಳಷ್ಟು ಸಂದರ್ಭಗಳಲ್ಲಿ ನಾವು ಅಂದುಕೊಂಡದ್ದು ಈಡೇರುವುದೇ ಇಲ್ಲ. ಇದಕ್ಕಾಗಿ ಕನಸು ಕಾಣುವುದನ್ನೇ ಬಿಟ್ಟವರಿದ್ದಾರೆ.
ಅದು ಬೆಳ್ಳಿ ಬೆಟ್ಟಗಳ ರಮಣೀಯ ಚೆಲುವು. ಹಿಮಾಲಯದಲ್ಲಿ ಕಾಣಸಿಗುವ ಗಿರಿ ಶಿಖರಗಳು ಅಲ್ಲಲ್ಲಿ ಬೀಳುತ್ತಿರುವ ಜಲಪಾತಗಳು, ವೇಗವಾಗಿ ಹರಿಯುವ ನದಿಗಳು ಹೀಗೆ ಪ್ರಕೃತಿ ಮಾತೆಯ ಸುಂದರ ರೂಪವೇ ಅಲ್ಲಿ ಮೂರ್ತಿವೆತ್ತಂತೆ ಭಾಸವಾಗುತ್ತದೆ. ಹಿಮಾಲಯದ ಶ್ರೇಣಿಗಳ ಸೌಂದರ್ಯವನ್ನು ಹಾದಿಯುದ್ದಕ್ಕೂ ಪರಿಚಯಿಸುವ ಪರ್ವತದ ಅಂಚಿನ ಕಿರು ಹಾದಿ ಪಯಣದ ಗಾಂಭೀರ್ಯವನ್ನು ಇಮ್ಮಡಿಗೊಳಿಸುತ್ತದೆ. ಕಿರು ದಾರಿಯಲ್ಲಿ ಕೊಂಚ ಮೈ ಮರೆತರೂ ಅಪಾಯವೂ ಇದೆ. ಅಲ್ಲಲ್ಲಿ ಕಾಣಸಿಗುವ ಭೂ ಕುಸಿತ ರಭಸವಾಗಿ ಹರಿಯುವ ನದಿಗಳು ಇವುಗಳೆಲ್ಲ ಒಂದು ರೀತಿಯ ಭೀತಿಯನ್ನುಂಟು ಮಾಡುತ್ತವೆೆ.
Related Articles
ಪ್ರಕೃತಿಯ ಅದ್ಭುತ ಸೃಷ್ಟಿಗೆ ಹೆಸರಾಗಿರುವ ಹಿಮಾಲಯದ ಕಡೆಗೆ ಕೆಳೆದ ಬೇಸಗೆಯಲ್ಲಿ ಮನಾಲಿಯಿಂದ ಬಕ್ಕಾರ್ ತಾಜ್‌ನೆಡೆಗೆ ನಮ್ಮ ನಡಿಗೆ ಆರಂಭವಾಯಿತು. ಹಿಮಾಚಲ ಪ್ರದೇಶದ ಮನಾಲಿಯಿಂದ ಹಿಮಾಲಯದ ಸೌಂದರ್ಯ ಸವಿಯುತ್ತ ಸಾಗುವ ಪಯಣ ಜೀವನದ ಅಮೋಘ ಕ್ಷಣಗಳಲ್ಲಿ ಬಹುಶಃ ಪ್ರಥಮವೇನೋ. ಇಲ್ಲಿ ಕೌಶಲ, ತಾಳ್ಮೆ ಹಾಗೂ ಧೈರ್ಯ ಬೇಕೇ ಬೇಕು.
Advertisement
ಇದಕ್ಕಿದ್ದಂತೆ ಏರುಗಳು ಅಥವಾ ಎತ್ತರದಿಂದ ಪ್ರಪಾತಕ್ಕೆ ಕಡಿದಾದ ಇಳಿಜಾರುಗಳು ಮತ್ತು ಹೇರ್‌ಪಿನ್ ತಿರುವುಗಳು ಎದುರಾಗುತ್ತವೆ. ಬೀಸುವ ಗಾಳಿ, ಚಳಿ, ಮಂಜು ಇಲ್ಲಿನ ವಾತಾವರಣ. ಎತ್ತರದ ಪ್ರದೇಶಗಳಿಗೆ ನಡೆಯುತ್ತಾ ಹೋದಂತೆ ಗಾಳಿಯಲ್ಲಿ ಕಡಿಮೆಯಾಗುವ ಆಮ್ಲಜನಕ ನಮ್ಮ ಉಸಿರಾಟವನ್ನು ಕಷ್ಟಗೊಳಿಸುತ್ತದೆ. ಸಮುದ್ರಮಟ್ಟದಿಂದ 14,800 ಅಡಿಗಳಿಗಿಂತ ಎತ್ತರವಿರುವ ಪ್ರದೇಶದಲ್ಲಿ ವಾಯುವಿನ ಒತ್ತಡ ಕಡಿಮೆ ಇರುತ್ತದೆ.
ಹಿಮಾಲಯದಲ್ಲಿ ಒಂದು ರಾತ್ರಿಹಿಮಾಲಯದ ಪರ್ವತವೊಂದರಲ್ಲಿ ರಾತ್ರಿ ಕಳೆಯುವುದು ಒಂದು ಅಪೂರ್ವ ಅನುಭವ. ಟಿವಿ, ಕಂಪ್ಯೂಟರ್, ಕರೆಂಟು ಯಾವುದೂ ಇಲ್ಲಿ ಇಲ್ಲ. ಮೊಬೈಲಿದ್ದರೂ ನೆಟ್‌ವರ್ಕ್ ಇಲ್ಲ. ಪರ್ವತ ಶ್ರೇಣಿಯಲ್ಲಿ ಅಲ್ಲಲ್ಲಿ ಮೇಯುವ ಕುರಿಗಳ ಗಂಟೆಗಳ ನಾದ, ಝರಿಗಳು ಹರಿಯುವ ಸದ್ದು, ದಿನವಿಡಿ ಟ್ರಕ್ಕಿಂಗ್ ಮಾಡಿ ದಣಿದ ದೇಹಕ್ಕೆ ಸ್ಲೀಪಿಂಗ್ ಬ್ಯಾಗ್ ಒಳಗೆ ನುಸುಳಿ ನಿದ್ದೆ ಮಾಡಬಹುದು. ರಾತ್ರಿ ಟೆಂಟ್‌ನಿಂದ ಹೊರಬಂದು ಆಗಸದತ್ತ ಕತ್ತು ತಿರುವಿದರೆ ನಕ್ಷತ್ರಗಳದ್ದೇ ಕಾರುಬಾರು.
ಮರುದಿನ ಮತ್ತಷ್ಟು ಏರಿದೆವು
ನಮ್ಮ ಪ್ರವಾಸದ ಮುಂದಿನ ಎರಡು ದಿನ ಮತ್ತಷ್ಟು ಶಿಖರಗಳನ್ನು ಮೆಟ್ಟುವ ಯೋಜನೆ ಹಾಕಿಕೊಂಡೆವು. ಕಲ್ಲುಬಂಡೆಗಳ ಹಾದಿ, ಅಲ್ಲಲ್ಲಿ ತೊರೆಗಳು, ಸಣ್ಣ ಪುಟ್ಟ ಸಸ್ಯಗಳು, ಬಣ್ಣ ಬಣ್ಣದ ಪುಟಾಣಿ ಹೂವುಗಳು ಇಂತಹ ಮಾರ್ಗದಲ್ಲಿ ನಡೆಯುವುದು ಮನಸ್ಸಿಗೆ ಮುದ ತಂದಿಡುತ್ತಿತ್ತು. ಶಿಖರ ಏರುತ್ತಿದ್ದಂತೆ ಗಾಳಿಯ ಒತ್ತಡ ಕಡಿಮೆಯಾಗುವ ಅನುಭವ ವಿವರಿಸಲು ಅಸಾಧ್ಯ. ಪರ್ವತ ಏರುತ್ತಾ, ಕೆಲವೆಡೆ ಇಳಿಯುತ್ತಾ ಹೋದಾಗ ಸಿಕ್ಕದಾರ್ ಶಿಖರ ತಲುಪಿದೆವು. ಅಲ್ಲಿ ಒಂದಷ್ಟು ಸಮಯವನ್ನು ಕಳೆದು ಬಳಿಕ ಭಾರವಾದ ಮನಸ್ಸು ಮತ್ತು ನೆನಪುಗಳೊಂದಿಗೆ ಹಿಂತಿರುಗಿದೆವು. ಆ ನೆನಪಿನ ಬುತ್ತಿ ನನ್ನನ್ನು ಪ್ರತಿ ದಿನ ತೆರೆದಿಡುತ್ತದೆ. ಮನಾಲಿಯ ಹೂ ಕಣಿವೆ
ಮನಾಲಿಯಲ್ಲಿ ಹೂ ಕಣಿವೆಗಳು, ಕಾಡುಗಳು ಮತ್ತು ಅನೇಕ ಹಳ್ಳಿಗಳ ನಡುವೆ ಅಲ್ಲಿನ ಜನರು ಡೇರೆಗಳಲ್ಲಿ ವಾಸಿಸುವುದನ್ನು ನಾವು ಕಾಣಬಹುದಾಗಿದೆ. ಇಲ್ಲಿನ ಹಲವಾರು ಪರ್ವತ ಶ್ರೇಣಿಗಳಲ್ಲಿ ಜನರು ಗುಡೇರಾ/ ಡೇರೆಗಳನ್ನು ಬಳಸಿ, ಪರ್ವತಗಳ ಮೇಲೆ ಆಶ್ರಯ ಪಡೆದಿದ್ದಾರೆ. ಜನಜೀವನಕ್ಕೆ ಕುದುರೆ ಕತ್ತೆಗಳ ಮೂಲಕ ವಸ್ತುಗಳನ್ನು ಸಾಗಿಸುತ್ತಾರೆ.
– ಸುಮಲತಾ, ಬಜಗೋಳಿ, ಆಳ್ವಾಸ್ ಕಾಲೇಜು, ಮೂಡುಬಿದಿರೆ