ಜಗತ್ತಿನ ಅತ್ಯಂತ ಶ್ರೇಷ್ಠ ಪ್ರೀತಿ ತಂದೆ-ತಾಯಿಯದ್ದು. ಮಕ್ಕಳು ಎಷ್ಟೇ ತಪ್ಪು ಮಾಡಿದರು ಅವರನ್ನು ತಿದ್ದಿ ಸರಿದಾರಿಗೆ ತರುವವರು ಅವರು. ತಮಗೆಷ್ಟು ಕಷ್ಟಗಳಿದ್ದರೂ ಮಕ್ಕಳ ಖುಷಿಯನ್ನು ಬಯಸುವ ನಿಸ್ವಾರ್ಥ ಜೀವಿಗಳು. ಮಕ್ಕಳು ಎಷ್ಟೇ ನೋವು ಕೊಟ್ಟರು ನಮ್ಮ ಮಕ್ಕಳೇ ತಾನೇ ಎಂದು ಸಮಾಧಾನ ಪಡುವವರು.
ತಾಯಿ ತನ್ನ ಪ್ರೀತಿಯನ್ನು ಕಾಳಜಿ ಮತ್ತು ಮಮತೆಯಲ್ಲಿ ತೋರಿಸಿದರೆ, ತಂದೆಯ ಪ್ರೀತಿ ಭಿಕೋಪಭಿ ಮತ್ತು ಮಾರ್ಗದರ್ಶನವೇ ಆಗಿರುತ್ತದೆ. ತಾಯಿಯನ್ನು ಎಲ್ಲರೂ ದೇವರು ಎಂದು ಪೂಜಿಸುತ್ತಾರೆ. ಆದರೆ ತಂದೆಯ ಮೇಲೆ ಇರುವ ಪ್ರೀತಿಯನ್ನು ಮಕ್ಕಳು ವ್ಯಕ್ತಪಡಿಸುವುದಿಲ್ಲ. ತಂದೆಯೂ ಬಾಯಿಬಿಟ್ಟು ಹೇಳುವುದಿಲ್ಲ. ತಾಯಿ 9 ತಿಂಗಳು ಹೊತ್ತರೆ ತಂದೆ ತನ್ನ ಮಕ್ಕಳ ಭಾರವನ್ನು ಮಕ್ಕಳು ಅವರ ಜೀವನವನ್ನು ರೂಪಿಸಿಕೊಳ್ಳುವವರೆಗೆ ಹೊರುತ್ತಾರೆ.
ಮಕ್ಕಳು ತಾಯಿಯ ಮೇಲೆ ತೋರುವಷ್ಟು ಪ್ರೀತಿಯನ್ನು ತಂದೆ ಮೇಲೆ ತೋರಿಸುವುದಿಲ್ಲ. ತಾಯಿಯಲ್ಲಿ ಏನು ಬೇಕು ಏನು ಬೇಡ ಎಂದು ಹೇಳುವ ನಾವು, ತಂದೆಯಲ್ಲಿ ಹೇಳಿಕೊಳ್ಳುವುದಿಲ್ಲತಂದೆಯ ಮೇಲಿರುವ ಗೌರವವೋ, ಭಯವೂ ಏನೋ ಒಮ್ಮೊಮ್ಮೆ ಅವರೊಂದಿಗೆ ಮುಕ್ತವಾಗಿ ಮಾತನಾಡುವುದಿಲ್ಲ.
ನಮ್ಮ ಮನಸ್ಸಿನಲ್ಲಿರುವ ಮಾತಿಗೆ ನಾವೇ ಕಡಿವಾಣ ಹಾಕಿಕೊಂಡಿದ್ದೇವೆ. ಗೂಡಿನಲ್ಲಿ ಕುಳಿತಿರುವ ಹಕ್ಕಿಯಂತಿರುವ ನಮ್ಮ ಮನಸ್ಸಿನಲ್ಲಿರುವ ಮಾತು ನಮ್ಮ ಪ್ರೀತಿಯ ತಂದೆಯ ಕಿವಿಗಳಿಗೆ ಕೇಳುವಂತೆ ಮಾಡೋಣ. ಏನಾದರೂ ಮನಸ್ತಾಪಗಳಿದ್ದರೆ ದೂರಮಾಡಿಕೊಂಡು, ತಂದೆಯ ಕಷ್ಟಗಳಿಗೆ ಕಿವಿಯಾಗೋಣ, ಹೆಗಲಾಗೋಣ.
ತಂದೆಯ ಬಳಿಯೂ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸೋಣ. ಮನಸ್ಸಿನಲ್ಲಿ ಇಟ್ಟುಕೊಂಡರೆ ಅದೂ ಹಾಗೇ ಉಳಿದುಬಿಡಬಹುದು. ನಮ್ಮ ಪ್ರೀತಿಯೂ ಅವರಿಗೆ ತಿಳಿಯಲಿ. ಆಗ ಅವರೂ ನಮ್ಮೊಂದಿಗೆ ಮುಕ್ತವಾಗಿ ಮಾತನಾಡಬಹುದಲ್ಲವೇ?
-ಮೋಕ್ಷಿತಾ
ವಿ.ವಿ.ಕಾಲೇಜು, ಮಂಗಳೂರು