Advertisement

Selfish: ನಿಸರ್ಗದಲ್ಲಡಗಿದೆ ಸ್ವಾರ್ಥ…

10:49 AM Jun 01, 2024 | Team Udayavani |

ಸ್ವಾರ್ಥ, ಈ ಪದ ಎರಡಕ್ಷರದ್ದೇ ಆದರೂ ಇಡೀ ಪ್ರಪಂಚವನ್ನೇ ತಲೆ ಕೆಳಗೆ ಮಾಡುವ ಶಕ್ತಿಯನ್ನು ಹೊಂದಿದೆ. ಬುದ್ಧಿಜೀವಿಯಾದ ಮನುಷ್ಯ ಇಂದು ಸ್ವಾರ್ಥ ಎಂಬುದರ ಕೈಗೊಂಬೆಯಾಗಿದ್ದಾನೆ. ಕಾಮ, ಕ್ರೋಧ, ಲೋಭ, ಮದ, ಮೋಹ ಮತ್ತು ಮತ್ಸರ ಎಂಬ ಅರಿಷಡ್ವರ್ಗಗಳಿಗೆ ಪೈಪೋಟಿ ನೀಡುತ್ತಿರುವ ಸ್ವಾರ್ಥ ಇಂದು ನಮ್ಮನ್ನು ಆಳುತ್ತಿರುವುದು ವಿಪರ್ಯಾಸದ ಸಂಗತಿಯೇ!

Advertisement

ಆದರೆ, ಒಂದು ದೃಷ್ಟಿಕೋನದಿಂದ ನೋಡಿದರೆ ಸ್ವಾರ್ಥ ಎಂಬುದು ಸರ್ವಾಂತರ್ಯಾಮಿ. ಇದರ ಉಗಮ ಪ್ರಕೃತಿಯಲ್ಲಿಯೇ ಅಡಗಿರುವುದರಿಂದ ಮಾನವನೂ ಇದರಿಂದ ವಂಚಿತನಲ್ಲ. ನಿಸರ್ಗದಲ್ಲಿಯೇ ಈ ಗುಣ ಇದೆ ಎಂದಾದ ಮೇಲೆ ಅದರ ಭಾಗವಾಗಿರುವ ನಮ್ಮಲ್ಲಿ ಸ್ವಾರ್ಥ ಭಾವನೆ ಇರಲೇ ಬೇಕಲ್ಲವೇ?!

ಉದಾಹರಣೆಗೆಯೊಂದಿಗೆ ಹೇಳುವುದಾದರೆ, ಪ್ರಕೃತಿಯೇ ದೇವರು ಎಂದು ಪೂಜಿಸುತ್ತ ಬಂದಿರುವ ನಾಡು ನಮ್ಮದು. ಇಂದಿನ ಅಭಿವೃದ್ಧಿ ಹೆಸರಿನಲ್ಲಿ ಆಗುತ್ತಿರುವ ಪ್ರಕೃತಿಯ ವಿನಾಶದ ನಡುವೆಯೂ ದೇಶದ ಹಲವೆಡೆ ಇಂದಿಗೂ ಪ್ರಕೃತಿ ಪೂಜೆಯನ್ನು ಆಚರಿಸುತ್ತ ಬಂದಿದ್ದೇವೆ.

ಆ ಮೂಲಕವಾದರೂ ಇಂದು ಅಲ್ಲಿ-ಇಲ್ಲಿ, ಅಲ್ಪ-ಸ್ವಲ್ಪ ಹಸುರ ಹಾಸುಗೆ ಕಾಣಲು ಸಾಧ್ಯವಾಗಿದೆ. ಪ್ರಕೃತಿಯ ಸಮಾನಾರ್ಥಕವೋ ಎಂಬಂತಿರುವ ಮರಗಳು ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವ ಕಾಮಧೇನು ಎಂದರೂ ತಪ್ಪಾಗದು.

“ಪರೋಪಕಾರಾರ್ಥಂ ಇದಂ ಶರೀರಂ” ಎಂಬ ಮಾತಿನಂತೆ ಮರಗಳು ಯುಗ ಯುಗಾಂತರಗಳಿಂದ ಮಾನವನ ಮೂಲಭೂತ ಸೌಕರ್ಯಗಳಿಗೆ ಆಧಾರಸ್ತಂಭವಾಗಿ ನಿಂತಿವೆ. ಮರದಿಂದ ಸಿಗುವ ಹಣ್ಣಿನಿಂದ ಹಿಡಿದು ಕಾಂಡ, ಬೇರು, ಹೂವು, ಎಲೆ ಹೀಗೆ ಪ್ರತೀ ಭಾಗವು ಅದರದ್ದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.

Advertisement

ಅದರಲ್ಲೂ ಮರದಲ್ಲಿ ಬಿಡುವ ಹಣ್ಣಿಗೆ ಅದೆಷ್ಟೋ ಬೇಡಿಕೆ. ಮರಗಳು ಈ ಹಣ್ಣನ್ನೇ ತನ್ನ ವಂಶಾಭಿವೃದ್ದಿಯ ಮಾಧ್ಯಮವನ್ನಾಗಿ ಬಳಸಿಕೊಳ್ಳುತ್ತವೆ. ರಸವತ್ತಾದ ಹಣ್ಣಿನ ತಿರುಳುಗಳ ನಡುವೆ ಬೀಜಗಳನ್ನು ಬಂಧಿಯಾಗಿಸಿ ಅವುಗಳ ರಕ್ಷಣೆಯನ್ನು ಮಾಡುವುದಲ್ಲದೆ, ಬೀಜಗಳ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಹಣ್ಣಿನ ತಿರುಳುಗಳಲ್ಲಿ ಸಂಗ್ರಹಿಸಿಡುತ್ತವೆ.

ಇದನ್ನೇ ಮಾನವ ತನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿ ಮರ ಹಾಗೂ ತನಗೆ ನಿಸ್ವಾರ್ಥಿ ಎಂಬ ಹಣೆಪಟ್ಟಿಯನ್ನು ನೀಡುತ್ತಾನೆ. ಹಣ್ಣನ್ನು ನೀಡಿ ಮರ ನಿಸ್ವಾರ್ಥಿಯಾದರೆ ಕಸಿದುಕೊಂಡ ಹಣ್ಣಿನ ಹಾಗೂ ಅದರ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸಮಾಜಕ್ಕಾಗಿ ತನ್ನ ಕೊಡುಗೆ ಎಂದು ಹೇಳಿ ಮಾನವನು ನಿಸ್ವಾರ್ಥಿಯಾಗುತ್ತಾನೆ.

ಇದು ಕೇವಲ ಹಣ್ಣಿಗೆ ಮಾತ್ರ ಸೀಮಿತವಲ್ಲ. ಮರದ ಪ್ರತಿ ಭಾಗವನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸಿಕೊಳ್ಳುತ್ತೇವೆ. ಹೀಗೆ ಮರದ ಅಸ್ತಿತ್ವದಿಂದಾದ ಪ್ರಯೋಜನಗಳಿಗೆ ಪ್ರತಿಯಾಗಿ ಪ್ರಕೃತಿಪೂಜೆಯನ್ನು ಮಾಡುವ ಮೂಲಕ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಇಷ್ಟು ಮಾತ್ರವಲ್ಲದೆ ದೇವಸ್ಥಾನದ ಸುತ್ತ ಆಲದ ಮರ, ಅಶ್ವತ್ಥ ಮರ ಇವುಗಳನ್ನು ನಂಬಿಕೆಯ ಸಂಕೇತವಾಗಿ ಬೆಳೆಸಿರುವುದನ್ನು ನೋಡಿರುತ್ತೇವೆ.

ಆದರೆ ಈ ಬೆಳವಣಿಗೆಯ ಹಿಂದೆ ನಮ್ಮ ಆರೋಗ್ಯದ ಕಡೆಗಿನ ಲಕ್ಷ್ಯದ ನಡೆ ಎನ್ನುವ ವೈಜ್ಞಾನಿಕ ಕಾರಣವನ್ನು ಕಾಣಬಹುದಾಗಿದೆ. ಆದರೂ ಈ ನಡೆ ಪ್ರಕೃತಿಗೆ ಉತ್ತಮ ಕೊಡುಗೆಯಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಹೀಗಾಗಿ ತಮ್ಮ ಅಸ್ತಿತ್ವಕ್ಕಾಗಿ ಪ್ರತಿ ಜೀವಿಯು ಸ್ವಾರ್ಥಿಯಾಗುವುದು ಅನಿವಾರ್ಯವೇ ಆಗಿದೆ. ಇದೇ ಸ್ವಾರ್ಥದ ಹೆಜ್ಜೆ ಕೆಲವೂಮ್ಮೆ ತಮಗೆ ಅರಿಯದಂತೆ ಇನ್ನೊಬ್ಬರಿಗೆ ಒಳಿತನ್ನು ಮಾಡುತ್ತದೆ. ಸ್ವಾರ್ಥಿಯಾಗಿರುವುದು ತಪ್ಪಲ್ಲ, ಆದರೆ ಸ್ವಾರ್ಥದ ಸಾರಥ್ಯದಲ್ಲಿ ಸಮಾಜಕ್ಕೆ ಕೆಡುಕಾದರೆ ಅದು ತಪ್ಪು.

-ಮಧುರ

ಕಾಂಚೋಡು

Advertisement

Udayavani is now on Telegram. Click here to join our channel and stay updated with the latest news.

Next