Advertisement
***********************************************
Related Articles
Advertisement
ಭಾರತ ಮತ್ತು ಚೀನಾದ ನಡುವೆ ನಡೆಯುವ ಯುದ್ಧದಲ್ಲಿ ಸೈನಿಕ ಮೇಜರ್ ಅಚ್ಚಪ್ಪ (ವಿಷ್ಣುವರ್ಧನ್) ಗಾಯಗೊಳ್ಳುತ್ತಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುವಾಗ ದಾದಿ ಅನ್ನಪೂರ್ಣ ಜೊತೆಗೆ ಪ್ರೇಮವಾಗಿ ಇಬ್ಬರು ವಿವಾಹವಾಗುತ್ತಾರೆ.
ಅಪ್ಪ ಅಮ್ಮ ಹೆಂಡತಿ ಮಗನ ಜೊತೆ ಸಂತೋಷವಾಗಿ ಇದ್ದ ಅಚ್ಚಪ್ಪ ಎಲ್ಲರನ್ನೂ ಬಿಟ್ಟು ಯುದ್ಧಕ್ಕೆ ಹೋಗುವ ಅನಿವಾರ್ಯತೆ ಉಂಟಾಗುತ್ತದೆ. ಎಲ್ಲರನ್ನೂ ತೊರೆದು ಯುದ್ಧಕ್ಕೆ ಹೊರಡುತ್ತಾನೆ. ಕೆಲ ದಿನಗಳ ನಂತರ ಅಚ್ಚಪ್ಪನಿಗೆ ತನ್ನ ಮಗನನ್ನು ತೋರಿಸಲು ಅನ್ನಪೂರ್ಣ ಕರೆದುಕೊಂಡು ಹೋಗುವಾಗ ಶತ್ರುಗಳ ದಾಳಿಗೆ ತನ್ನ ಮಗನನ್ನು ಕಳೆದುಕೊಳ್ಳುತ್ತಾಳೆ.
ರಾಜಸ್ಥಾನದ ಮರಳುಗಾಡಿನಲ್ಲಿ ಮಗನನ್ನು ಕಳೆದುಕೊಂಡ ಆಕೆ ದಿಕ್ಕು ತೋಚದೇ ಮಗನನ್ನು ಹೇಗಾದರೂ ಮಾಡಿ ತನ್ನ ಗಂಡನಿಗೆ ತೋರಿಸಬೇಕೆಂದು ಶವವನ್ನು ಇಟ್ಟುಕೊಂಡು ಅಲೆದಾಡುತ್ತಾಳೆ. ಕೊನೆಗೂ ಗಂಡನಿಗೆ ಮಗನ ಮುಖವನ್ನು ತೋರಿಸಲು ಆಗುವುದಿಲ್ಲ. ನೋವಿನಿಂದ ಹೊರಬರಲಾಗದೆ ಗಂಡ ಹೆಂಡತಿ ಇಬ್ಬರೂ ದುಃಖವನ್ನು ಅನುಭವಿಸುತ್ತಾರೆ. ನೋವನ್ನು ಮರೆಯಲು ಇಬ್ಬರೂ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.
ಅತ್ತ ತನ್ನ ಮೊಮ್ಮಗನನ್ನು ನೋಡುವ ಕಾತುರ ಹೆಚ್ಚಾಗಿ ಅಜ್ಜ ಅಜ್ಜಿ ಇಬ್ಬರೂ ಇವರಿದ್ದಲ್ಲಿಗೆ ಬರುತ್ತಾರೆ. ಮೊಮ್ಮಗ ಸತ್ತ ವಿಷಯ ತಿಳಿದ ಅಜ್ಜಿ ಆಘಾತದಿಂದ ಸಾವನ್ನಪ್ಪುತ್ತಾರೆ. ಶತ್ರುಗಳಿಂದ ಬಿಡಿಸಿಕೊಳ್ಳಲು ಹೋರಾಡಿ ಅಚ್ಚಪ್ಪ ವೀರ ಮರಣ ಹೊಂದುತ್ತಾನೆ. ತನ್ನ ಗಂಡ ಮೊದಲೇ ಸತ್ತು ಹೋಗಿದ್ದ ಎಂದುಕೊಂಡಿದ್ದ ಅನ್ನಪೂರ್ಣ ಗೆ ಗಂಡ ಬದುಕಿರುವ ಸುದ್ದಿ ಕೇಳಿ ಸಂತೋಷ ಪಡುತ್ತಾಳೆ.
ತನ್ನ ವಿವಾಹ ವಾರ್ಷಿಕೋತ್ಸವವನ್ನು ಗಂಡನೊಂದಿಗೆ ಆಚರಿಸಿಕೊಳ್ಳಲು ಅವನು ಕೊಟ್ಟ ಸೀರೆ ಉಟ್ಟು ಮುತ್ತಿನಹಾರ ತೊಟ್ಟು ಓಡೋಡಿ ಬರುವ ಆಕೆಗೆ ಗಂಡ ಬದುಕಿಲ್ಲ ಎಂಬ ಸುದ್ದಿ ಆಘಾತ ಉಂಟು ಮಾಡುತ್ತದೆ. ಈ ಎಲ್ಲಾ ನೋವುಗಳನ್ನು ಅನುಭವಿಸಿದ ಅನ್ನಪೂರ್ಣ ಧೈರ್ಯಗೆಡದೆ ದಿಟ್ಟ ಯೋಧನ ಪತ್ನಿಯಾಗಿ ಎಲ್ಲಾ ನೋವನ್ನು ಮನದಲ್ಲಿಯೇ ಇಟ್ಟುಕೊಂಡು ಮರಳಿ ದಾದಿಯಾಗಿ ಸೇವೆ ಸಲ್ಲಿಸುತ್ತಾರೆ.
ಈ ಸಿನಿಮಾ ಒಬ್ಬ ಯೋಧನ ಪತ್ನಿಯ ನೋವಿನ ಆಕ್ರಂದನ ತೋರಿಸುತ್ತದೆ. ಮೊನ್ನೆಯಷ್ಟೆ ಚೀನಾದ ಕುತಂತ್ರಕ್ಕೆ ನಮ್ಮಯೋಧರನ್ನು ಕಳೆದುಕೊಂಡೆವು. ಅ ಸಮಯದಲ್ಲಿ ನನಗೆ ನೆನಪಾದದ್ದು ಮುತ್ತಿನಹಾರ ಸಿನಿಮಾ. ಈ ಸಿನಿಮಾದಿಂದ ತಿಳಿಯುವುದೇನೆಂದರೆ ಎಲ್ಲಾ ಸುಖ ಸಂಬಂಧ, ಪ್ರೀತಿಗಳನ್ನ ಬದಿಗೊತ್ತಿ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಯೋಧನ ಜೀವನ ಎಷ್ಟು ಕಷ್ಟಕರ ಎಂಬುದು ಹಾಗೂ ಒಂದು ಹೆಣ್ಣು ಎಷ್ಟೇ ನೋವು ಅನುಭವಿಸಿದರೂ ಅದನ್ನು ಧೈರ್ಯವಾಗಿ ಎದುರಿಸುವವಳು ಎಂಬುದು. ಬಹಳ ಪ್ರೇರಣಾದಾಯಕವಾದ ಚಲನಚಿತ್ರ.– ವಿಜಯ್ ಕುಮಾರ್ ಎಸ್ ಎಮ್, ತುಮಕೂರು