ನಾವೆಲ್ಲ ಬೇರೆಯವರ ಬಗ್ಗೆ ಬಹಳ ಸಲೀಸಾಗಿ ಮಾತನಾಡಿಬಿಡುತ್ತೇವೆ. ಅವರ ವೈಯಕ್ತಿಕ ವಿಷಯಗಳಾಗಲಿ, ಸಾಮಾಜಿಕ ವಿಚಾರಗಳಾಗಲಿ ಯಾವುದಕ್ಕೂ ಲೆಕ್ಕಿಸದೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿಬಿಡುತ್ತೇವೆ. ಏಕೆಂದರೆ ಬೇರೆಯವರ ಬಗ್ಗೆ ಮಾತನಾಡುವುದು ಬಹಳ ಸುಲಭ. ಆದರೆ ಅದೇ ಪ್ರಶ್ನೆಗಳನ್ನು ನಾವೆಂದಾದರೂ ನಮ್ಮ ಬಗ್ಗೆ ನಾವು ಕೇಳಿಕೊಂಡಿದ್ದೇವೆಯೇ..? ಬೇರೆಯವರ ಬಗ್ಗೆ ಯೋಚಿಸುವಷ್ಟು ನಾವು ನಮ್ಮ ಜೀವನದ ಬಗ್ಗೆ ಯೋಚಿಸಿದ್ದೇವೆಯೇ..?
ನೀನು ಏನು ಮಾಡಿದೆ? ನೀನು ಏನು ಮಾಡುವೆ? ನೀನು ಏನು ಮಾಡಬೇಕೆಂದಿರುವೆ? ನೀನು ಮುಂದೆ ಏನಾಗಬೇಕು ಎಂದುಕೊಂಡಿರುವೆ? ….ಹೀಗೆ ನಾವು ಬೇರೆಯವರಿಗೆ ಪ್ರಶ್ನೆ ಮಾಡುವುದು ಸುಲಭ ಸಂಗತಿ. ನೀ…ನು? ಎಂದು ಪ್ರಶ್ನೆ ಮಾಡುವಾಗ ಕೇವಲ ಒಂದು ಬೆರಳು ಮಾತ್ರ ನಮ್ಮ ಮುಂದಿರುವ ವ್ಯಕ್ತಿಯನ್ನು ತೋರುತ್ತಿರುತ್ತದೆ. ಆದರೆ ಉಳಿದ ನಾಲ್ಕು ಬೆರಳುಗಳು ನಮ್ಮನ್ನೇ ಪ್ರಶ್ನೆ ಮಾಡುತ್ತಿರುತ್ತವೆ ಅಲ್ಲವೇ…?
ಹಾಗಾದರೆ ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳುವುದಾದರೆ ನನ್ನ ಮುಂದಿನ ನಡೆ ಏನು?, ನಾನು ಮುಂದೆ ಏನು ಮಾಡಬೇಕು?, ನಾನೇನು ಮಾಡಲು ಹೊರಟಿರುವೆ?, ನಾನು ಮಾಡುತ್ತಿರುವುದು ಸರಿ ಇದೆಯಾ..? ನನ್ನ ಜೀವನದ ಮುಂದಿನ ಗುರಿ, ಉದ್ದೇಶಗಳು ಏನಾಗಿವೆ? ಹೀಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಹೌದು ಹಾಗಾದರೆ ನನ್ನ ಮುಂದಿನ ನಡೆ ಏನು ಎನ್ನುವುದಾದರೆ ನಮಗೆ ಸ್ಪಷ್ಟವಾಗಿ ತಿಳಿದಿರಬೇಕು, ನನ್ನ ಜೀವನದ ಬಗ್ಗೆ ನಮಗೆ ನಿರ್ದಿಷ್ಟತೆ, ಖಚಿತತೆ ಇರಬೇಕು. ನಾನೇನು ಮಾಡಲು ಹೊರಟಿರುವೆ, ನನ್ನ ಜೀವನದ ಗುರಿ ಏನು ಎಂಬುದರ ಅರಿವು ನನ್ನಲ್ಲಿ ಇರಬೇಕು. ಅದು ಇದ್ದಾಗಲೇ ಏನಾದರೂ ಸಾಧಿಸಬೇಕು ಎಂಬ ತುಡಿತ ನಮ್ಮಲ್ಲಿ ಮೂಡುತ್ತದೆ.
ನಮ್ಮ ಮುಂದಿನ ನಡೆಯ ಬಗ್ಗೆ ನಮಗೆ ಗೋಚರಿಸಿದಾಗ ಮಾತ್ರ ನನ್ನ ಮನೆಯವರು, ಅಪ್ಪ, ಅಮ್ಮ, ತಮ್ಮ, ತಂಗಿ ಎಲ್ಲರ ಮೇಲೆ ನನ್ನ ಜವಾಬ್ದಾರಿ ನನಗೆಷ್ಟಿದೆ ಎಂಬ ಅರಿವು ನನಗೆ ತಿಳಿಯುತ್ತದೆ. ಜೀವನದಲ್ಲಿ ಏನಾದರೂ ಒಂದು ಗುರಿ ಇರಲೇಬೇಕು. ಹಾಗೆಯೇ ಆ ಗುರಿಯನ್ನು ತಲುಪುವ ತನಕ ಸತತ ಪರಿಶ್ರಮವೂ ನಮ್ಮದಾಗಿರಬೇಕು. ನಮ್ಮ ಗುರಿಯ ಸ್ಪಷ್ಟತೆಯ ಜತೆಗೆ ಆ ಗುರಿಯನ್ನು ತಲುಪಲು ಇರುವ ಮಾರ್ಗೋಪಾಯಗಳ ಅರಿವು ಸಹ ನಮ್ಮದಾಗಿರಬೇಕು. ಅಂದರೆ ಯಾವ ರೀತಿಯ ಪ್ರಯತ್ನದಿಂದ ಗುರಿ ತಲುಪ ಬಹುದು, ಅದಕ್ಕೆ ಯಾವ ರೀತಿಯ ಸಿದ್ಧತೆ ನಡೆಸಬೇಕಿದೆ, ಅದರ ಯೋಜನೆಯನ್ನು ಯಾವ ರೀತಿ ಸಿದ್ಧಪಡಿಸಬೇಕು ಎಂಬುದನ್ನು ಅರಿತು ಅದರಂತೆಯೇ ನಡೆಯುವ ದಾಟಿ ನಮ್ಮಲ್ಲಿರಬೇಕು.
ಅಂಬಿಗನು ಈಜಿ ದಡವ ಸೇರಿದಾಗಲೇ ಅವನ ಗುರಿ ಮುಕ್ತಾಯವಾಗೋದು ಹಾಗೆಯೇ ನಮ್ಮ ಜೀವನದ ಅಂಬಿಗರು ನಾವೇ. ನಮ್ಮ ಗುರಿ ಎನ್ನುವ ದಡವನ್ನು ತಲುಪಬೇಕೆಂದರೆ ಶ್ರಮ ವಹಿಸಬೇಕಾಗುತ್ತದೆ. ಶ್ರಮವಹಿಸಿ ಜೀವನ ಎಂಬ ದೋಣಿಯಲ್ಲಿ ಕುಳಿತು ಸಾಗಿದಾಗ ಮುಂದಿನ ದಡವ ಮುಟ್ಟಿದ ಅನುಭವ, ಗುರಿಯ ತಲುಪಿದಾಗ ಸಿಗುವ ಅನುಭವವು ನೀಡುವ ಆನಂದ ಅಮೋಘವಾದುದು, ಶಾಶ್ವತವಾದುದು.
“ಕರ್ಮಣ್ಯೇವಾದಿಕಾರಸ್ಥೆ ಮಾ ಫಲೇಷು ಕದಾಚನ’ ಎಂಬ ವಾಣಿಯಂತೆ ಛಲಬಿಡದೆ ಕಾರ್ಯವನ್ನು ನಾವು ಮಾಡಿದಾಗ ಉತ್ತಮ ಪ್ರತಿಫಲ ಎಂಬುದು ದೊರೆತೇ ದೊರೆಯುತ್ತದೆ. ಮುಂದಿನ ಪ್ರತಿಫಲದ ಬಗ್ಗೆ ಚಿಂತಿಸುತ್ತಾ ಕೂರದೆ ನಮ್ಮ ಕೆಲಸವನ್ನು ಕಾಯಾ ವಾಚಾ ಮನಸಾ ಶ್ರದ್ಧೆಯಿಂದ ಮಾಡುತ್ತಾ ಸಾಗಿದಾಗ ಪ್ರತಿಫಲವೆಂಬ ಬುತ್ತಿಯು ನಮಗೆ ದೊರೆಯುತ್ತದೆ. ಉತ್ತಮ ಪ್ರತಿಫಲವನ್ನು ಅನುಭವಿಸಬೇಕೆಂದರೆ ಯೋಗ ಮತ್ತು ಯೋಗ್ಯತೆ ಎರಡೂ ಇರಬೇಕು. ಇವೆರಡೂ ದೊರೆ ಯುವುದು ನಮ್ಮ ಗಟ್ಟಿತನದ ನಿರ್ಧಾರದಿಂದ. ಛಲ ಬಿಡದೆ ಮುಂದೆ ಸಾಗುವ ನಮ್ಮ ಪ್ರಯತ್ನದಿಂದ ಮಾತ್ರ ಸಾಧ್ಯ.
ನಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಬೇಕೆಂದರೆ ನಾವಿಡುವ ನಮ್ಮ ಮುಂದಿನ ಹೆಜ್ಜೆ ಉತ್ತಮವಾದುದಾಗಿರಬೇಕು. ಆದ್ದರಿಂದ ನಮ್ಮ ಮುಂದಿನ ನಡೆಯ ಬಗ್ಗೆ ನಿರ್ದಿಷ್ಟತೆ, ಖಚಿತತೆ ಎಂಬುದಿರಬೇಕು. ಹಾಗಾಗಿ ಬೇರೆಯವರನ್ನು ಪ್ರಶ್ನಿಸುವ ಮೊದಲು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳುವ ನಮ್ಮ ಮುಂದಿನ ನಡೆ ಏನೆಂದು. ಹೌದಲ್ಲವೇ…
-ಭಾಗ್ಯಾ ಜೆ.
ಮೈಸೂರು